
ಮಂಗಳೂರು: ‘ರಾಷ್ಟ್ರೀಯೆ ಹೆದ್ದಾರಿ 66ರಲ್ಲಿ ನಂತೂರು ಹಾಗೂ ಕೆಪಿಟಿ ಬಳಿ ಮೇಲ್ಸೇತುವೆ ಕುರಿತ ಗೊಂದಲಗಳನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಶೀಘ್ರವೇ ನಿವಾರಿಸಲಿದೆ. ಇಲ್ಲಿನ ಮೇಲ್ಸೇತುವೆಗಳ ವಿನ್ಯಾಸಗಳನ್ನು ಮಾರ್ಪಾಡು ಮಾಡಲಾಗುತ್ತಿದ್ದು, ಮಾರ್ಚ್ ಅಂತ್ಯದೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಇಲ್ಲಿನ ಪ್ರೆಸ್ ಕ್ಲಬ್‌ಗೆ ಗುರುವಾರ ಭೇಟಿ ನೀಡಿದ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.
‘ಕೆಪಿಟಿ ಮೇಲ್ಸೇತುವೆ ಯೋಜನೆ ಕೈಬಿಟ್ಟಿಲ್ಲ. ನಂತೂರು ಅಥವಾ ಕೆಪಿಟಿ ಬಳಿಯ ಸಂಚಾರ ದಟ್ಟಣೆ ನಿವಾರಣೆ ಮಾತ್ರ ನಮ್ಮ ಉದ್ದೇಶವಲ್ಲ. ನಗರದ ಸಮಗ್ರ ಸಂಚಾರ ನಿರ್ವಹಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೇಲ್ಸೇತುವೆ ವಿನ್ಯಾಸಗಳಲ್ಲಿ ಮಾರ್ಪಾಡು ಮಾಡಲಾಗುತ್ತಿದೆ. ಕೂಳೂರಿನಿಂದ ನಂತೂರಿನವರೆಗೂ ಮೇಲ್ಸೇತುವೆ ನಿರ್ಮಿಸಬೇಕೇ, ಎಲ್ಲೆಲ್ಲ ಸರ್ವಿಸ್ ರಸ್ತೆ ಅಗತ್ಯವಿದೆ, ಎಷ್ಟು ಭೂಸ್ವಾಧೀನದ ಅಗತ್ಯ ಇದೆ, ಎಷ್ಟು ಇಳಿಜಾರನ್ನು ಕಾಯ್ದುಕೊಳ್ಳಬೇಕಾಗುತ್ತದೆ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿ ಸಮಾಲೋಚನೆ ನಡೆಯುತ್ತಿದೆ. ಎನ್‌ಎಚ್‌ಎಐ ಅಧಿಕಾರಿಗಳು ಮಾರ್ಚ್ ಅಂತ್ಯದೊಳಗೆ ನನಗೆ ಡಿಪಿಆರ್ ಕುರಿತ ಪ್ರಸ್ತಾವ ಸಲ್ಲಿಸಲಿದ್ದಾರೆ’ ಎಂದರು.
‘ರಾಷ್ಟ್ರೀಯ ಹೆದ್ದಾರಿ–66 ಅನ್ನು ಎರಡು ಕಡೆ ಬೆಸೆಯುವ, ಅಥವಾ ಎನ್.ಎಚ್ 66ರಿಂದ ಎನ್.ಎಚ್ 75 ಅನ್ನು ಸಂಪರ್ಕಿಸುವ, ಎನ್.ಎಚ್ 75ರಿಂದ ಎನ್ಎಚ್ 73 ಅನ್ನು ಸಂಪರ್ಕಿಸುವಂತೆ ಬೈಪಾಸ್ ಅಭಿವೃದ್ಧಿಪಡಿಸಿ ನಗರದ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲೂ ಚರ್ಚೆ ನಡೆದಿದೆ’ ಎಂದರು.
ನೇತ್ರಾವತಿ, ಫಲ್ಗುಣಿ, ನಂದಿನಿ ಹಾಗೂ ಶಾಂಭವಿ ನದಿಗಳನ್ನು ಬಳಸಿ ನದಿ ಪ್ರವಾಸೋದ್ಯಮ ಹಾಗೂ ಜಲ ಕ್ರೀಡೆ ಚಟುವಟಿಕೆಗೆ ಉತ್ತೇಜನ ನೀಡುವ ಪ್ರಸ್ತಾವ ಇದೆ. ಕರಾವಳಿ ಮೂರು ಜಿಲ್ಲೆಗಳ ಪ್ರವಾಸೋದ್ಯಮ ಚಟುವಟಿಕೆಗೆ ಪ್ರೋತ್ಸಾಹಿಸಲು ಹಾಗೂ ಈ ಕುರಿತ ತೊಡಕುಗಳ ನಿವಾರಣೆಗೆ ನೆರವಾಗಲು ರಾಜ್ಯ ಪ್ರವಾಸೋದ್ಯಮ ನಿಗಾ ಘಟಕದ ಅಧಿಕಾರಿಗಳು ಜಿಲ್ಲೆಗೆ ಬಂದಿದ್ದಾರೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಈಚೆಗೆ ನಡೆದ ಸಭೆಯ ನಿರ್ಣಯಗಳ ಅನುಷ್ಠಾನಕ್ಕೂ ನೆರವಾಗಲಿದ್ದಾರೆ ಎಂದರು.
‘ರಿವರ್ ಫ್ರಂಟ್ ಯೋಜನೆಯ ಒಂದು ಕಡೆ 2.1 ಕಿ.ಮೀ ಪ್ರೊಮೋನೇಡ್ ನಿರ್ಮಾಣದಲ್ಲಿ 650 ಮೀ. ಪೂರ್ತಿಯಾಗಿದೆ. ಕೆಲವು ಕಡೆ ನ್ಯಾಯಾಲಯದ ವ್ಯಾಜ್ಯದಿಂದ ಕಾಮಗಾರಿ ವಿಳಂಬವಾಗಿದೆ. ವ್ಯಾಜ್ಯ ಇತ್ಯರ್ಥಪಡಿಸಿ ಅವುಗಳನ್ನೂ ಶೀಘ್ರವೇ ಪೂರ್ತಿಗೊಳಿಸಲಿದ್ದೇವೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅನ್ಯ ಭಾಷೆಗೆ ವಿರೋಧ ವಿಲ್ಲ: ‘ಜಿಲ್ಲೆಯಲ್ಲಿ ಕನ್ನಡದ ಜೊತೆ ತುಳು ಕೊಂಕಣಿ ಮತ್ತಿತರ ಭಾಷೆ ಬಳಸುವುದಕ್ಕೆ ಯಾರೂ ಅಡ್ಡಿಪಡಿಸಿಲ್ಲ. ಕನ್ನಡವನ್ನು ಮಾತ್ರ ಬಳಸ ಬೇಕು ಎಂದು ನಾನು ಆದೇಶ ಮಾಡಿಲ್ಲ.ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆಯಾಗುತ್ತಿರುವ ಬಗ್ಗೆ ನಿಗಾವಹಿಸಲು ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಈಚೆಗೆ ಸೂಚಿಸಿದ್ದೆ. ಅದರ ಅರ್ಥ ತುಳು ಕೊಂಕಣಿ ಬಳಸಬಾರದು ಎಂದಲ್ಲ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
‘ಮೃಗಾಲಯ ಪ್ರಾಧಿಕಾರಕ್ಕೆ ಪಿಲಿಕುಳ’: ಪಿಲಿಕುಳ ಜೈವಿಕ ಉದ್ಯಾನವನ್ನು (ಮೃಗಾಯಲ) ಮುಚ್ಚುವಂತೆ ಹೈಕೋರ್ಟ್ ಆದೇಶ ಮಾಡಿಲ್ಲ. ಅಂತಹ ಯಾವುದೇ ಆದೇಶ ನಮಗೆ ತಲುಪಿಲ್ಲ. ಅಲ್ಲಿ ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿರುವುದೇ ಆ ಮೃಗಾಲಯದ ಆರೋಗ್ಯದ ಲಕ್ಷಣ. ಅಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಪ್ರಾಣಿಗಳಿರುವುದು ನಿಜ. ಇದನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರದ ತೆಕ್ಕೆಗೆ ವಹಿಸಲು ಅಂತಿಮ ಸುತ್ತಿನ ಮಾತುಕತೆ ನಡೆದಿದೆ. ನಿರ್ವಹಣೆ ವೆಚ್ಚ ವರಮಾನ ಹಂಚಿಕೆ ಕುರಿತ ಚರ್ಚೆಗಳು ನಡೆದಿವೆ’ ಎಂದು ಜಿಲ್ಲಾಧಿಕಾರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.