ADVERTISEMENT

ಕೈ ಹಿಡಿಯಲಿರುವ ಗ್ಯಾರಂಟಿ ಹವಾ: ಹರೀಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 3:52 IST
Last Updated 25 ಏಪ್ರಿಲ್ 2024, 3:52 IST
ಕೆ.ಹರೀಶ್ ಕುಮಾರ್  – ಪ್ರಜಾವಾಣಿ ಚಿತ್ರ
ಕೆ.ಹರೀಶ್ ಕುಮಾರ್  – ಪ್ರಜಾವಾಣಿ ಚಿತ್ರ   

ಮಂಗಳೂರು: ‘ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎಲ್ಲಿಯೂ ಮೋದಿ ಹವಾ ಕಾಣಿಸುತ್ತಿಲ್ಲ. ಕ್ಷೇತ್ರದ ಎಲ್ಲೆಡೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ಗ್ಯಾರಂಟಿ ಹವಾ ಕಾಣುತ್ತಿದೆ. ಇದರಿಂದ ಬಿಜೆಪಿಗರು ಹತಾಶರಾಗಿದ್ದಾರೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್ ಕೆ. ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಎರಡು ಸುತ್ತಿನ ಮನೆ–ಮನೆ ಪ್ರಚಾರ ಪೂರ್ಣಗೊಂಡಿದೆ. ಶೇ 99ಕ್ಕೂ ಹೆಚ್ಚು ಮನೆಗಳಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ತಲುಪಿದೆ. ಕಾಂಗ್ರೆಸ್‌ ನೀಡಿರುವ ಭರವಸೆ, ಮಾಡಿರುವ ಕಾರ್ಯ ಜನರಿಗೆ ಅರಿವಾಗಿದೆ. ಹೀಗಾಗಿ, ಮತದಾರರು, ವಿಶೇಷವಾಗಿ ಮಹಿಳೆಯರು ಕೈ ಹಿಡಿಯುವ ಭರವಸೆ ಇದೆ’ ಎಂದರು.

ಬಿಜೆಪಿ ಈಗಾಗಲೇ ಸೋಲೊಪ್ಪಿಕೊಂಡಿದೆ. ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಬಂದಾಗ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೆಹರೂ ಮೈದಾನದವರೆಗೆ ಜನರು ಕಿಕ್ಕಿರಿದು ಸೇರಿದ್ದರು. ಈ ಬಾರಿ ಒಂದು ಕಿ.ಮೀ. ಉದ್ದದ ರೋಡ್‌ ಶೋಗೆ 20–25 ಸಾವಿರ ಜನರನ್ನು ಸೇರಿಸಲು ಬಿಜೆಪಿ ಹೆಣಗಾಡಿತು. ಜಿಲ್ಲೆಯಲ್ಲಿ ಈ ಬಾರಿ ಪೈಪೋಟಿ ಕಾಣುತ್ತಿಲ್ಲ. ಬಿಜೆಪಿಯಲ್ಲಿ ಬಣ ರಾಜಕೀಯ ಜೋರಾಗಿದೆ. ಶಾಸಕರು, ಕಾರ್ಯಕರ್ತರಲ್ಲಿ ಉತ್ಸಾಹ ಇಲ್ಲದಂತಾಗಿದೆ ಎಂದು ಹೇಳಿದರು.

ADVERTISEMENT

ಎಎಪಿ, ಸಿಪಿಎಂ ಬೆಂಬಲ ನೀಡಿವೆ. ಜೆಡಿಎಸ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ, ಹಿಂದಿನ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಮತಗಳು ಈ ಬಾರಿ ಕಾಂಗ್ರೆಸ್‌ಗೆ ಬರಲಿವೆ ಎಂದರು.

‘ನೋಟಾ ಅಭಿಯಾನದ ಬಗ್ಗೆ ಗೊತ್ತಿಲ್ಲ. ನಾವು ಅದರ ಬಗ್ಗೆ ಚರ್ಚಿಸಲೂ ಇಷ್ಟಪಡುವುದಿಲ್ಲ’ ಎಂದು ಹೇಳಿದರು.

ಮುಖಂಡರಾದ ಮಹಾಬಲ ಮಾರ್ಲ, ನೀರಜ್ ಪಾಲ್, ಟಿ.ಎಂ. ಶಾಹಿದ್, ಜಿತೇಂದ್ರ, ಮುಹಮ್ಮದ್, ಶುಭೋದಯ ಆಳ್ವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.