ADVERTISEMENT

ಹಿಂದೂ ಧರ್ಮ ಕೆಣಕಿದವರು ಯಾರೂ ಉಳಿದಿಲ್ಲ: ಕ್ಯಾ.ಚೌಟ

ಗೋವುಗಳ ಮೇಲಿನ ವಿಕೃತ ಕೃತ್ಯಗಳನ್ನು ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2025, 12:50 IST
Last Updated 21 ಜನವರಿ 2025, 12:50 IST
ರಾಜ್ಯದಲ್ಲಿ ಗೋವುಗಳ ಮೇಲೆ ನಡೆಯುತ್ತಿರುವ ವಿಕೃತ ಕೃತ್ಯಗಳನ್ನು ಖಂಡಿಸಿ ಗೋ ಸಂರಕ್ಷಣಾ ಸಂವರ್ಧನ ಸಮಿತಿ ವತಿಯಿಂದ ಮಂಗಳೂರಿನಲ್ಲಿ ಮಂಗಳವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಎಂ.ಬಿ.ಪುರಾಣಿಕ್ ಅವರು ಗೋಪೂಜೆ ನೆರವೇರಿಸಿದರು :ಪ್ರಜಾವಾಣಿ ಚಿತ್ರ
ರಾಜ್ಯದಲ್ಲಿ ಗೋವುಗಳ ಮೇಲೆ ನಡೆಯುತ್ತಿರುವ ವಿಕೃತ ಕೃತ್ಯಗಳನ್ನು ಖಂಡಿಸಿ ಗೋ ಸಂರಕ್ಷಣಾ ಸಂವರ್ಧನ ಸಮಿತಿ ವತಿಯಿಂದ ಮಂಗಳೂರಿನಲ್ಲಿ ಮಂಗಳವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಎಂ.ಬಿ.ಪುರಾಣಿಕ್ ಅವರು ಗೋಪೂಜೆ ನೆರವೇರಿಸಿದರು :ಪ್ರಜಾವಾಣಿ ಚಿತ್ರ   

ಮಂಗಳೂರು: ‘ಗೋವಿನ ಕೆಚ್ಚಲನ್ನು ಕೊಯ್ಯುವ ಮೂಲಕ ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಸಲು ಕೆಲ ದುಷ್ಕರ್ಮಿಗಳು ಪ್ರಯತ್ನಿಸುತ್ತಿದ್ದಾರೆ. ಈ ಮಣ್ಣಿನಲ್ಲಿ ಹಿಂದೂ ಧರ್ಮವನ್ನು ಕೆಣಕಿದವರು ಯಾರೂ ಉಳಿದಿಲ್ಲ’ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದರು. 

ಗೋವುಗಳ ಮೇಲಿನ ವಿಕೃತ ಕೃತ್ಯಗಳನ್ನು ಖಂಡಿಸಿ ಗೋ ಸಂರಕ್ಷಣಾ ಸಂವರ್ಧನ ಸಮಿತಿ ವತಿಯಿಂದ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ದನದ ಕೆಚ್ಚಲು ಕೊಯ್ದ ಘಟನೆ ವೇಳೆ ಗೃಹಸಚಿವ ಜಿ.ಪರಮೇಶ್ವರ ಸಮಜಾಯಿಸಿ ಕೊಡಲು ಯತ್ನಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದರು. ಗೋವುಗಳಿಗೆ ರಕ್ಷಣೆ ಇಲ್ಲದ ಸ್ಥಿತಿ ನಿರ್ಮಾಣವಾಗಲು ರಾಜ್ಯ ಸರ್ಕಾರದ ಆಡಳಿತ ನೀತಿಯೇ ಕಾರಣ. ಈಗಿನ ಸರ್ಕಾರಕ್ಕೆ ಟಿಪ್ಪುಸುಲ್ತಾನ್, ಔರಂಗಜೇಬನಂತಹವರೇ  ಪ್ರೇರಣೆಯಾಗಿರುವುದರಿಂದಲೇ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ಕೆಲಸಗಳು ರಾಜ್ಯದಾದ್ಯಂತ ನಡೆಯುತ್ತಿವೆ’ ಎಂದು ದೂರಿದರು.   

ADVERTISEMENT

‘ಗೋವುಗಳಿಗೆ ರಕ್ಷಣೆ ಸಿಗದಿ‌ದ್ದರೆ, ಈ ದೇಶವನ್ನು ಸ್ವರಾಜ್ಯವೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಎಲ್ಲ ವಿಚಾರಕ್ಕೂ ಗಾಂಧೀಜಿಯ ಜಪ ಮಾಡುವ ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಗೋವಿಗೆ ರಕ್ಷಣೆ ಇಲ್ಲ. ಈ ಹೋರಾಟವನ್ನು ಇಲ್ಲಿಗೇ ನಿಲ್ಲಿಸಬಾರದು. ಮನೆಮನೆಗೆ ಹೋಗಿ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಸಮಾಜವನ್ನು ಎಬ್ಬಿಸುವ ಕೆಲಸ ಮಾಡಬೇಕು’ ಎಂದರು.

ಪ್ರತಿಭಟನೆಯ ಸ್ಥಳಕ್ಕೆ ತಂದಿದ್ದ ಗೋವುಗಳಿಗೆ ವಿಶ್ವ ಹಿಂದೂ ಪರಿಷತ್‌ ಮುಖಂಡ ಎಂ.ಬಿ.ಪುರಾಣಿಕ್‌ ಅವರು ಪೂಜೆ ನೆರವೇರಿಸಿದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಪಕ್ಷದ ಮುಖಂಡರಾದ ಮೋನಪ್ಪ ಭಂಡಾರಿ, ಪ್ರೇಮಾನಂದ ಶೆಟ್ಟಿ, ಮಂಜುಳಾ ರಾವ್‌, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಎಚ್.ಕೆ. ಪುರುಷೋತ್ತಮ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.