
ಮೂಡುಬಿದಿರೆ: ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಹೆಸರು ಬದಲಾಯಿಸುವ ಮೂಲಕ ಯೋಜನೆಯ ಕತ್ತು ಹಿಸುಕುವ ಪ್ರಯತ್ನ ಮಾಡುತ್ತಿದೆ. ಕಾರ್ಮಿಕರ ಹೆಸರಿನ ಯೋಜನೆಗಳು ಬಂಡವಾಳಶಾಹಿ ಮತ್ತು ಶ್ರೀಮಂತರನ್ನು ಪೋಷಿಸುತ್ತಿವೆ. ಯೋಜನೆಯಿಂದ ಕಾರ್ಮಿಕರು ವಂಚಿತರಾಗುತ್ತಿದ್ದಾರೆ ಎಂದು ಜಿಲ್ಲಾ ಮುಖಂಡ ಯಾದವ ಶೆಟ್ಟಿ ಹೇಳಿದರು.
ಮೂಡುಬಿದಿರೆ ಸಮಾಜ ಮಂದಿರದಲ್ಲಿ ಸೋಮವಾರ ನಡೆದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ತಾಲ್ಲೂಕು ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಾರ್ಮಿಕ ಇಲಾಖೆ ಅಧಿಕಾರಿ ಕುಮಾರ್ ಬಿ.ಸಮಾವೇಶ ಉದ್ಘಾಟಿಸಿ, ಗ್ರಾಮ ಪಂಚಾಯಿತಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವಾಗ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗೆ ಸಂಗ್ರಹಿಸಬೇಕಾದ ಸೆಸ್ ಅನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕಟ್ಟಡ ಕಾರ್ಮಿಕರೂ ನಿಗಾ ವಹಿಸಬೇಕು ಎಂದರು.
ಕಾರ್ಮಿಕರು ಕ್ರಮಬದ್ಧವಾಗಿ ಸವಲತ್ತುಗಳನ್ನು ಪಡೆಯಲು ದಾಖಲೆ ಪತ್ರಗಳನ್ನು ಸಮರ್ಪಕವಾಗಿಟ್ಟುಕೊಳ್ಳಬೇಕು ಎಂದರು.
ಖಂಡ ಕೃಷ್ಣಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಮುಖಂಡರಾದ ರಮಣಿ, ರಾಧಾ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಂಕರ್ ಸ್ವಾಗತಿಸಿದರು. ಸದಾನಂದ ಮಾರ್ನಾಡ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.