ADVERTISEMENT

ಮಂಗಳೂರು: ಭರದಲ್ಲಿ ಕಚೇರಿ ಸ್ಥಳಾಂತರ ಕಾರ್ಯ

​ಪ್ರಜಾವಾಣಿ ವಾರ್ತೆ
Published 17 ಮೇ 2025, 15:29 IST
Last Updated 17 ಮೇ 2025, 15:29 IST
ಪಡೀಲ್‌ನ ‘ಪ್ರಜಾಸೌಧ’ದ ಹೊಸ ಕಚೇರಿಯಲ್ಲಿ ಸಾಮಗ್ರಿ ಜೋಡಿಸುತ್ತಿರುವ ಸಿಬ್ಬಂದಿ
ಪಡೀಲ್‌ನ ‘ಪ್ರಜಾಸೌಧ’ದ ಹೊಸ ಕಚೇರಿಯಲ್ಲಿ ಸಾಮಗ್ರಿ ಜೋಡಿಸುತ್ತಿರುವ ಸಿಬ್ಬಂದಿ   

ಮಂಗಳೂರು: ನಗರದ ಹೊರವಲಯದ ಪಡೀಲ್‌ನಲ್ಲಿ ಶುಕ್ರವಾರ ಉದ್ಘಾಟನೆಗೊಂಡ ‘ಪ್ರಜಾಸೌಧ’ ಜಿಲ್ಲಾಡಳಿತ ಕಚೇರಿ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಹಿತ ಕಂದಾಯ ವಿಭಾಗವು ಶನಿವಾರದಿಂದಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದೆ.

ವಿಶಾಲವಾದ ಕಟ್ಟಡದಲ್ಲಿ 23 ಇಲಾಖೆಗಳ ಕಚೇರಿಗಳು ಕಾರ್ಯ ನಿರ್ವಹಿಸಲಿವೆ. ಸ್ಟೇಟ್‌ಬ್ಯಾಂಕ್ ವೃತ್ತದಲ್ಲಿರುವ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸಂಕೀರ್ಣದಲ್ಲಿರುವ ಕಚೇರಿಗಳ ಸ್ಥಳಾಂತರ ಕಾರ್ಯ ಭರದಿಂದ ಸಾಗಿದೆ. ಸರ್ಕಾರಿ ಕಚೇರಿಗಳ ಕೆಲಸಕ್ಕಾಗಿ ಗ್ರಾಮೀಣ ಪ್ರದೇಶದಿಂದ ಶನಿವಾರ ನಗರಕ್ಕೆ ಬಂದ ಕೆಲವರು, ಎಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಬೇಕು ಎಂದು ತಿಳಿಯದೆ ಗೊಂದಲಕ್ಕೆ ಒಳಗಾದರು. ‌

‘ಹೊಸ ಕಟ್ಟಡಕ್ಕೆ ಶೇ 50ರಷ್ಟು ಕಡತಗಳು ಸ್ಥಳಾಂತರಗೊಂಡಿವೆ. ಇನ್ನೂ ಇಂಟರ್‌ನೆಟ್ ಸಂಪರ್ಕ, ಲ್ಯಾನ್ ಸಂಪರ್ಕ ಆಗಬೇಕಾಗಿದೆ. ಬಹುತೇಕ ಕಚೇರಿಗಳಲ್ಲಿ ಇ– ಆಫೀಸ್ ವ್ಯವಸ್ಥೆ ಇರುವುದರಿಂದ ಇಂಟರ್‌ನೆಟ್‌ ಇಲ್ಲದೆ ಕೆಲಸ ಮಾಡಲು ಸಾಧ್ಯವಿಲ್ಲ. ಕಂಪ್ಯೂಟರ್ ಸಹಿತ ಎಲ್ಲ ಸಾಮಗ್ರಿಗಳು, ಕಡತಗಳನ್ನು ಸ್ಥಳಾಂತರಿಸಿ, ಹೊಸ ಕಚೇರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯ ಪ್ರಾರಂಭಿಸಲು ಒಂದು ವಾರ ಬೇಕಾಗಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‌

ADVERTISEMENT

ಈ ವರೆಗೆ ಸ್ಟೇಟ್‌ಬ್ಯಾಂಕ್ ತೆರಳುವ ಯಾವುದೇ ಬಸ್ ಹತ್ತಿದರೂ ಡಿಸಿ ಕಚೇರಿ ತಲುಪಬಹುದಿತ್ತು. ರೂಢಿಯಾಗುವ ತನಕ ಹೊಸ ಕಚೇರಿಗೆ ಹೋಗುವವರಿಗೆ ಸಮಸ್ಯೆಯಾಗುತ್ತದೆ. ವಿಶೇಷವಾಗಿ ಸುರತ್ಕಲ್ ಭಾಗದಿಂದ ಬರುವವರಿಗೆ ಎರಡು ಬಸ್ ಬದಲಾಯಿಸಿಯೇ ಪಡೀಲ್‌ನ ಪ್ರಜಾಸೌಧ ತಲುಪಬೇಕು ಎಂದು ಸಾರ್ವಜನಿಕರೊಬ್ಬರು ಹೇಳಿದರು.

ಬಸ್ ವ್ಯವಸ್ಥೆಗೆ ಯೋಜನೆ: ಕೆಎಸ್‌ಆರ್‌ಟಿಸಿಯಿಂದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಐದು ಸರ್ವಿಸ್ ಇವೆ. ಕಟೀಲ್, ಬೊಕ್ಕಪಟ್ಣ, ಅದ್ಯಪಾಡಿ ಮೂರು ಮಾರ್ಗಗಳಲ್ಲಿ ಬಸ್ ಸಂಚರಿಸುತ್ತದೆ. ಇನ್ನೆರಡು ಮಾರ್ಗಗಳು ಸಿಬ್ಬಂದಿ ಲಭ್ಯತೆ ಆಧರಿಸಿ ನಿಗದಿಯಾಗುತ್ತವೆ. ಸ್ಟೇಟ್‌ ಬ್ಯಾಂಕ್– ಉಪ್ಪಿನಂಗಡಿ, ಸ್ಟೇಟ್‌ ಬ್ಯಾಂಕ್– ಧರ್ಮಸ್ಥಳ, ಸ್ಟೇಟ್‌ ಬ್ಯಾಂಕ್– ಪುತ್ತೂರು, ಸ್ಟೇಟ್‌ ಬ್ಯಾಂಕ್–ವಿಟ್ಲ ಬಸ್‌ಗಳು ಪಡೀಲ್ ಮಾರ್ಗವಾಗಿ ಬರುತ್ತವೆ. ಹೀಗಾಗಿ ಆ ಭಾಗದಿಂದ ಬರುವವರಿಗೆ ಸಮಸ್ಯೆ ಇಲ್ಲ ಎಂದು ಕೆಎಸ್ಆರ್‌ಟಿಸಿ ಮಂಗಳೂರು ವಿಭಾಗದ ಡಿಸಿ ರಾಜೇಶ್ ಶೆಟ್ಟಿ ತಿಳಿಸಿದರು.‌

ಸುರತ್ಕಲ್ ಕಡೆಯಿಂದ ಬರುವವರಿಗೆ ನೇರ ಬಸ್‌ ಸಂಪರ್ಕ ಕಲ್ಪಿಸುವ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೂಡ ಚರ್ಚಿಸಿದ್ದಾರೆ. ಪಡೀಲ್‌, ಪಂಪ್‌ವೆಲ್, ಕಂಕನಾಡಿ, ಬಿಜೈ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪುವಂತೆ ಬಸ್ ವ್ಯವಸ್ಥೆಗೊಳಿಸಲು ಯೋಚಿಸಲಾಗಿದೆ. ಮೂಡುಬಿದಿರೆ – ಕಾರ್ಕಳ ಬಸ್ ಅನ್ನು ನಂತೂರಿನಿಂದ ಪಂಪ್‌ವೆಲ್‌, ಪಡೀಲ್ ಮಾರ್ಗವಾಗಿ ಓಡಿಸುವ ಬಗ್ಗೆ ಸಹ ಯೋಚಿಸಲಾಗಿದೆ. ಮೋಟಾರು ವಾಹನ ಕಾಯ್ದೆ ಸೆಕ್ಷನ್ 72ರ ಪ್ರಕಾರ ಯಾವುದೇ ಪರ್ಮಿಟ್‌ನ ಮಾರ್ಗ ಬದಲಿಸಲು (24 ಕಿ.ಮೀ.ವರೆಗೆ) ಸಾರಿಗೆ ಪ್ರಾಧಿಕಾರದ ಮುಖ್ಯಸ್ಥರಾಗಿರುವ ಜಿಲ್ಲಾಧಿಕಾರಿಗೆ ಅಧಿಕಾರ ಇದೆ. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

‘ಅರ್ಜಿ ನೀಡುವವರು ಪಡೀಲ್‌ಗೆ ಬನ್ನಿ’

ಜಿಲ್ಲಾಧಿಕಾರಿ ಕಚೇರಿ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಗೊಂಡಿದೆ. ಯಾವುದೇ ಅರ್ಜಿ ಸಲ್ಲಿಸಲು ಬರುವವರು ನೇರವಾಗಿ ಪಡೀಲ್ ಕಚೇರಿಗೆ ಬರಬಹುದು ಎಂದು ಹಳೆ ಕಚೇರಿಯಲ್ಲಿ ಫಲಕ ಹಾಕಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್‌ಕುಮಾರ್ ತಿಳಿಸಿದರು.‌ ಖಜಾನೆ ಇಲಾಖೆಗೆ ಹೆಚ್ಚು ಭದ್ರತೆ ಅಗತ್ಯ. ಭದ್ರತಾ ವ್ಯವಸ್ಥೆ ಪೂರ್ಣಗೊಂಡ ಮೇಲೆ ಈ ಇಲಾಖೆ ಸ್ಥಳಾಂತರಗೊಳ್ಳುತ್ತದೆ. ಕೆಲವು ಇಲಾಖೆಗಳ ಇಂಟೀರಿಯರ್ ಕೆಲಸ ಬಾಕಿ ಇದ್ದು ಅವು ಮುಗಿದ ಮೇಲೆ ಸ್ಥಳಾಂತರಗೊಳ್ಳುತ್ತವೆ. ಬಹುತೇಕ ಸ್ಥಿರ ದೂರವಾಣಿಗಳು ಇಂಟರ್‌ನೆಟ್ ಸಂಪರ್ಕ ಪುನರ್ ಸ್ಥಾಪಿಸುವ ಕೆಲಸ ಮುಕ್ತಾಯ ಹಂತದಲ್ಲಿದೆ. ಎಲ್ಲ ಕಚೇರಿಗಳೂ ಹೊಸ ಸಂಕೀರ್ಣದಲ್ಲೇ ಕಾರ್ಯ ನಿರ್ವಹಿಸಲು ಇನ್ನು ಒಂದು ತಿಂಗಳು ಬೇಕಾಗಬಹುದು ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.