
ವಂಚನೆ: ದೂರು
ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ₹ 85.68 ಲಕ್ಷ ಹಣವನ್ನು ಆನ್ಲೈನ್ ಮೂಲಕ ಪಾವತಿಸಿ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾಗಿದ್ದಾರೆ. ಈ ಬಗ್ಗೆ ಸಂತ್ರಸ್ತ ವ್ಯಕ್ತಿಯ ಸಹೋದರ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
‘ನನ್ನ ಅಣ್ಣ ಉಪನ್ಯಾಸಕನಾಗಿದ್ದು, ಈಚೆಗೆ ಕೆಲಸ ಕಳೆದುಕೊಂಡಿದ್ದರು. ಅವರು ಮನೆಯಲ್ಲಿದ್ದ ವೇಳೆ ಇನ್‌ಸ್ಟಾಗ್ರಾಂನಲ್ಲಿ ಷೇರ್ ಇನ್ವೆಸ್ಟ್‌ಮೆಂಟ್ ಆನ್ಲೈನ್ ಟ್ರೇಡಿಂಗ್ ಕುರಿತ ಕೊಂಡಿಯನ್ನು ಕ್ಲಿಕ್ಕಿಸಿ ಹೆಸರು ನೋಂದಾಯಿಸಿದ್ದರು. ಅ.31ರಂದು ನೊಮುರಾ ಬಿಎಚ್‌ಎಫ್ ಎಸ್407 ವಾಟ್ಸ್ ಆ್ಯಪ್ ಗ್ರೂಪ್‌ಗೆ ತಮ್ಮ ಮೊಬೈಲ್ ನಂಬರ್ ಸೇರಿಸಿದ್ದರು. ನೊಮುರಾ ಇನ್‌ವೆಸ್ಟ್‌ಮೆಂಟ್ ಮ್ಯಾನೇಜರ‍್ಸ್ ಲಿಮಿಟೆಡ್‌ನಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿರುವುದಾಗಿ ಪರಿಚಯಿಸಿಕೊಂಡ ಕಾವ್ಯ ಎಂಬ ಮಹಿಳೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ , ಸ್ಟಾಕ್ ಖರೀದಿ ಮತ್ತು ಮಾರಾಟದ ಮೂಲಕ ದುಪ್ಪಟ್ಟು ಹಣ ಗಳಿಸಬಹುದು ಎಂದು ನಂಬಿಸಿದ್ದರು. ಇದರಿಂದ ಪ್ರೇರೇಪಿತರಾದ ಅಣ್ಣ ವಿವಿಧ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿ ಹೆಸರು ನೋಂದಾಯಿಸಿಕೊಂಡಿದ್ದರು. ನ.11ರಿಂದ ಫೆ 9ರವರೆಗೆ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು ₹ 85.68 ಲಕ್ಷ ಪಾವತಿಸಿದ್ದರು. ಹೂಡಿಕೆ ಮಾಡಿದ ಹಣವನ್ನು ಮರಳಿಸುವಂತೆ ಅವರಲ್ಲಿ ಅಣ್ಣ ಕೇಳಿದಾಗ ಸೇವಾ ತೆರಿಗೆ ಸಲುವಾಗಿ ಮತ್ತಷ್ಟು ಹಣ ಕಟ್ಟುವಂತೆ ಸೂಚಿಸಿದ್ದರು. ಆಗ ಮೋಸ ಹೋಗಿರುವುದು ಗೊತ್ತಾಯಿತು ಎಂದು ಸಂತ್ರಸ್ತ ವ್ಯಕ್ತಿಯ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.