ADVERTISEMENT

ಮಂಗಳೂರು | ಶಿಕ್ಷಕರ ವರ್ಗಾವಣೆಗೆ ವಿರೋಧ: ವಿದ್ಯಾರ್ಥಿಗಳು, ಪೋಷಕರ ಪ್ರತಿಭಟನೆ

ಬೆಂಗರೆ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 7:50 IST
Last Updated 16 ಅಕ್ಟೋಬರ್ 2019, 7:50 IST
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.   

ಮಂಗಳೂರು: ಐವರು ಕಾಯಂ ಶಿಕ್ಷಕರನ್ನು ವರ್ಗಾವಣೆ ಮಾಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ಧಾರವನ್ನು ವಿರೋಧಿಸಿ ನಗರದ ಬೆಂಗರೆ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಬುಧವಾರ ಬೆಳಿಗ್ಗೆಯಿಂದ ಪ್ರತಿಭಟನೆ ಆರಂಭಿಸಿದ್ದಾರೆ.

ಬೆಂಗರೆ ಶಾಲೆಯಲ್ಲಿ ಎಲ್‌ಕೆಜಿಯಿಂದ ಏಳನೇ ತರಗತಿಯವರೆಗೆ 545 ಮಕ್ಕಳು ಓದುತ್ತಿದ್ದಾರೆ. ಇದು ನಗರದಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಯಾಗಿದೆ. ಇಲ್ಲಿ 10 ಮಂದಿ ಕಾಯಂ ಶಿಕ್ಷಕರಿದ್ದರು. ಈ ಪೈಕಿ ಐವರನ್ನು ಇತ್ತೀಚೆಗೆ ವರ್ಗಾವಣೆ ಮಾಡಲಾಗಿದೆ. ಈಗ ಐವರು ಶಿಕ್ಷಕರು ಮಾತ್ರ ಉಳಿದಿದ್ದಾರೆ.

ಕಾಯಂ ಶಿಕ್ಷಕರ ವರ್ಗಾವಣೆ ಕೈಬಿಡುವಂತೆ ಆಗ್ರಹಿಸಿ ಶಾಲೆಯ ಆವರಣದಲ್ಲೇ ಪ್ರತಿಭಟನೆ ನಡೆಸಲಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಾಸಕರು ಸ್ಥಳಕ್ಕೆ ಬರುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ತಮ್ಮ ಶಿಕ್ಷಕರ ವರ್ಗಾವಣೆಯನ್ನು ರದ್ದು ಮಾಡುವಂತೆ ವಿದ್ಯಾರ್ಥಿಗಳು ಘೋಷಣೆ ಕೂಗುತ್ತಿದ್ದಾರೆ. ಡಿವೈಎಫ್‌ಐ ಸಂಘಟನೆಯ ಸದಸ್ಯರು, ಸ್ಥಳೀಯ ಸಾರ್ವಜನಿಕರು ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.

ADVERTISEMENT
ಪ್ರತಿಭಟನೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು

‘ಶಾಲೆಯಲ್ಲಿ ಒಟ್ಟು 11 ಶಿಕ್ಷಕರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರು ಇತ್ತೀಚೆಗೆ ನಿವೃತ್ತರಾಗಿದ್ದರು. 10 ಮಂದಿ ಉಳಿದಿದ್ದರು. ಅವರಲ್ಲಿ ಐದು ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ನಲಿ– ಕಲಿ ಯೋಜನೆಯಡಿ ಪ್ರತಿ 30 ಮಕ್ಕಳಿಗೆ ಒಬ್ಬ ಶಿಕ್ಷಕರು ಇರಬೇಕು. ಒಂದರಿಂದ ಮೂರನೇ ತರಗತಿಯವರೆಗೆ 150 ಮಕ್ಕಳಿದ್ದಾರೆ. ಈ ತರಗತಿಗಳಿಗೆ ಐವರು ಶಿಕ್ಷಕರು ಬೇಕು. ಉಳಿದವರಿಗೆ ಕಲಿಸುವವರು ಯಾರು’ ಎಂದು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್‌ ಪ್ರಶ್ನಿಸಿದರು.

ಈವರೆಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಲೀ, ಶಾಸಕರಾಗಲೀ ಸಮಸ್ಯೆಯ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಯಂ ಶಿಕ್ಷಕರ ವರ್ಗಾವಣೆ ರದ್ದು ಮಾಡುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.