ಲೋಕಾಯುಕ್ತದ ನಿವೃತ್ತ ಎಸ್.ಪಿ.ಕುಮಾರಸ್ವಾಮಿ ಅವರು ‘ತೆಂಕಣದಲ್ಲಿ ನುಡಿ ದಿಬ್ಬಣ’ ಬೆಳ್ತಂಗಡಿ ತಾಲ್ಲೂಕು ಅಧಿವೇಶನವನ್ನು ಉದ್ಘಾಟಿಸಿದರು
ಉಜಿರೆ: ಸಮಾಜದ ಹಿತಕ್ಕಾಗಿ ರಚಿಸಿದ ಸಾಹಿತ್ಯದಿಂದ ಸಂಘಟನೆ, ಪ್ರಗತಿಯ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಲೋಕಾಯುಕ್ತ ನಿವೃತ್ತ ಎಸ್‌ಪಿ ತುಮಕೂರಿನ ಕುಮಾರಸ್ವಾಮಿ ಹೇಳಿದರು.
ಉಜಿರೆ ಬಳಿಯ ಬಲಿಪ ರೆಸಾರ್ಟ್‌ನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಬೆಳ್ತಂಗಡಿ ತಾಲ್ಲೂಕು ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ‘ತೆಂಕಣದಲ್ಲಿ ನುಡಿ ದಿಬ್ಬಣ’ ಪ್ರಥಮ ತಾಲ್ಲೂಕು ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೀಳು ಅಭಿರುಚಿಯಿಂದ, ಅಬ್ಬರದ ಪ್ರಚಾರಕ್ಕಾಗಿ ಸಾಹಿತ್ಯ ರಚನೆ ಮಾಡಬಾರದು. ಸಾಹಿತ್ಯದ ಮೂಲಕವೂ ದೇಶಪ್ರೇಮ, ಸಮಾಜದ ಸಂಘಟನೆ, ಪ್ರೀತಿ-ವಿಶ್ವಾಸ, ಪರೋಪಕಾರ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳ ಉದ್ದೀಪನ ಸಾಧ್ಯ ಎಂದರು.
ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಕುರಿತು ಮಾತನಾಡಿದ ದಿವಾಕರ ಹೆಗಡೆ ಕೆರೆಹೊಂಡ, ಯಕ್ಷಗಾನ ಜನಸಾಮಾನ್ಯರ ಬಯಲು ವಿಶ್ವವಿದ್ಯಾಲಯ ಎಂದು ಹೇಳಿದರು.
ಶಾಂತಾ ಜೆ.ಅಳದಂಗಡಿ ಅವರ ‘ಕಾವ್ಯಯಾನ’, ವಿನುತಾ ರಜತ್ ಗೌಡ ಅವರ ‘ಪ್ರತಿಬಿಂಬ’, ತಾಲ್ಲೂಕು ಸಾಹಿತ್ಯ ಕೂಟ ಸದಸ್ಯರ ‘ಮೊದಲ ಹೆಜ್ಜೆ’ ಕೃತಿಗಳನ್ನು ಉಜಿರೆ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಬಿಡುಗಡೆ ಮಾಡಿದರು.
ಅಶ್ವಿಜಾ ಶ್ರೀಧರ್, ಆಶಾ ಆಡೂರು, ಅರುಣಾ ಶ್ರೀನಿವಾಸ್, ನಿಶಾ ಸಂತೋಷ್, ನಯನಾ, ವನಜಾ ಜೋಶಿ, ಸಮ್ಯಕ್ ಜೈನ್, ವಿದ್ಯಾಶ್ರೀ ಅಡೂರು, ನಾಗಶ್ರೀ ದಾತೆ, ಸೋನಾಕ್ಷಿ ಮತ್ತು ವೃಂದಾ ತಾಮಣ್ಕರ್ ಸ್ವರಚಿತ ಕವನಗಳನ್ನು ವಾಚಿಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಬೆಳ್ತಂಗಡಿ ತಾಲ್ಲೂಕು ಸಮಿತಿ ಅಧ್ಯಕ್ಷ ಪ್ರೊ.ಗಣಪತಿಭಟ್ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು.
ಲೇಖಕ ಶಿವಪ್ರಸಾದ್ ಸುರ್ಯ ಸಮಾರೋಪ ಭಾಷಣ ಮಾಡಿದರು.
ಸುಭಾಷಿಣಿ ಆಶಯ ಗೀತೆ ಹಾಡಿದರು. ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಶ್ರೀಧರ ಭಟ್ ಸ್ವಾಗತಿಸಿದರು. ಸುಭಾಷಿಣಿ ವಂದಿಸಿದರು. ರಾಮಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.