ADVERTISEMENT

ಅಂಧರ ಬಾಳಿಗೆ ಬೆಳಕಾಗಿ: ಡಾ. ದಿಶಾ

60 ಜನರಿಂದ ನೇತ್ರದಾನ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 7:18 IST
Last Updated 12 ಏಪ್ರಿಲ್ 2021, 7:18 IST
ಪ್ರಸಾದ್‌ ನೇತ್ರಾಲಯದ ಡಾ.ದಿಶಾ ಮಾತನಾಡಿದರು.
ಪ್ರಸಾದ್‌ ನೇತ್ರಾಲಯದ ಡಾ.ದಿಶಾ ಮಾತನಾಡಿದರು.   

ಮಂಗಳೂರು: ನಗರದ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಶಿಬಿರದಲ್ಲಿ 60ಕ್ಕೂ ಅಧಿಕ ಜನರು ನೇತ್ರದಾನ ವಾಗ್ದಾನ ಮಾಡಿದರು.

ರೇಡಿಯೊ ಸಾರಂಗ್‌, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ, ಪ್ರಸಾದ್ ನೇತ್ರಾಲಯದ ವತಿಯಿಂದ ದಿ. ಗಿರಿಜಾ ಎಕ್ಕೂರ ಸ್ಮರಣಾರ್ಥ ಆಯೋಜಿಸಿದ್ದ ನೇತ್ರದಾನ ಸಂಕಲ್ಪ ಶಿಬಿರದಲ್ಲಿ ಹಲವರು ನೇತ್ರದಾನದ ಕುರಿತು ಆಸಕ್ತಿ ತೋರಿದರು.

ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಶಶಿಧರ್‌ ಶೆಟ್ಟಿ ಮಾತನಾಡಿ, ಜಗತ್ತನ್ನೇ ನೋಡದವರಿಗೆ ಬೆಳಕು ನೀಡುವ ಅಮೋಘ ಕಾರ್ಯ ಇದಾಗಿದೆ. ನೇತ್ರದಾನ ಮೂಲಕ ಇನ್ನೊಬ್ಬರಿಗೆ ಬಾಳಿಗೆ ಬೆಳಕಾಗುವುದು ಪುಣ್ಯದ ಕಾರ್ಯ ಎಂದರು.

ADVERTISEMENT

ಜಗತ್ತಿನಲ್ಲಿ ನಾವು ಸಂತೋಷದಿಂದ ಜೀವನ ನಡೆಸಬೇಕು. ಸಾವಿನ ನಂತರವೂ ಹಲವಾರು ಅಂಧರ ಬಾಳನ್ನು ಬೆಳಗುವ ಮೂಲಕ ಅವರ ಬದುಕಿನಲ್ಲೂ ಸಂತೋಷ ತರಬಹುದು. ಅದಕ್ಕಾಗಿ ನೇತ್ರದಾನ ಮಾಡಬೇಕು ಎಂದು ಮನವಿ ಮಾಡಿದರು.

ರೆಡಿಯೊ ಸಾರಂಗ್ ನಿರ್ದೇಶಕ ಡಾ.ಮೆಲ್ವಿನ್‌ ಪಿಂಟೋ ಮಾತನಾಡಿ, ಭಾರತದಲ್ಲಿ 3 ಕೋಟಿಗೂ ಅಧಿಕ ಜನರು ಅಂಧರಾಗಿದ್ದಾರೆ. ನೇತ್ರದಾನ ಮಾಡಲು ಮುಂದೆ ಬರದಿದ್ದರೆ, ಅಂಧರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ನಿತ್ಯವೂ ದೇಶದಲ್ಲಿ 25 ಸಾವಿರ ಜನರು ಮರಣ ಹೊಂದುತ್ತಿದ್ದು, ಅದರಲ್ಲಿ 1 ಸಾವಿರ ಜನರಾದರೂ ನೇತ್ರದಾನ ಮಾಡಿದಲ್ಲಿ, ಭಾರತವನ್ನು ಅಂಧತ್ವದಿಂದ ಮುಕ್ತ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ನೇತ್ರದಾನ ಸಂಕಲ್ಪ ಶಿಬಿರದ ಸಂಘಟಕ ಜಯಪ್ರಕಾಶ್‌ ಎಕ್ಕೂರ ಮಾತನಾಡಿ, ‘ನನ್ನ ತಾಯಿ ನೇತ್ರದಾನ ಮಾಡುವ ಮೂಲಕ ನಮಗೆ ಸ್ಫೂರ್ತಿಯಾಗಿದ್ದಾರೆ. ಅವರ ಮರಣದ ನಂತರ ನಾವು ನೇತ್ರದಾನ ಮಾಡಿದ್ದು, ಇದರಿಂದ ಹಲವರು ಸ್ಫೂರ್ತಿ ಪಡೆದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.