ADVERTISEMENT

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ | ಸೇವೆಯ ಫಲದಿಂದ ಲೋಕಕಲ್ಯಾಣವಾಗಲಿ: ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 2:58 IST
Last Updated 16 ಫೆಬ್ರುವರಿ 2026, 2:58 IST
ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು
ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು   

ಉಜಿರೆ: ರಾಜ್ಯದ ವಿವಿಧ ಭಾಗಗಳಿಂದ ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಬಂದಿದ್ದ 70 ಸಾವಿರಕ್ಕೂ ಹೆಚ್ಚು ಭಕ್ತರು ಭಾನುವಾರ ಶಿವ ಪಂಚಾಕ್ಷರಿ ಪಠಣದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮ್ಕಕ್ಕೆ ಚಾಲನೆ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಗುರು ಹನುಮಂತಪ್ಪ ಮತ್ತು ಮರಿಯಪ್ಪ ನೇತೃತ್ವದಲ್ಲಿ 7 ಮಂದಿ ಯೊಂದಿಗೆ ಪಾದಯಾತ್ರೆ ಪ್ರಾರಂಭ
ವಾಗಿತ್ತು. ಈ ಬಾರಿ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಎಪ್ಪತ್ತು ಸಾವಿರ ಮಂದಿ ಪಾದಯಾತ್ರೆ ಮೂಲಕ ಬಂದು ಧರ್ಮಸ್ಥಳಕ್ಕೆ ಬಂದಿದ್ದೀರಿ. ಸ್ವಾಮಿಯ ದರ್ಶನ, ಸೇವೆಯ ಫಲ ದೊರೆತು ಲೋಕಕಲ್ಯಾಣವಾಗಲಿ’ ಎಂದು ಹಾರೈಸಿದರು.

ಹೇಮಾವತಿ ವೀ.ಹೆಗ್ಗಡೆ, ಡಿ. ಸುರೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್, ಮಾಣಿಲದ ಮೋಹನದಾಸ ಸ್ವಾಮೀಜಿ, ಪಾದಯಾತ್ರೆಯ ರೂವಾರಿ ಗುರು ಹನುಮಂತಪ್ಪ ಸ್ವಾಮೀಜಿ, ಮರಿಯಪ್ಪ, ದೇವಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣರಾವ್‌, ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಭಾಗವಹಿಸಿದ್ದರು.

ADVERTISEMENT

ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು. ಭಕ್ತರು ದೇವರದರ್ಶನ ಮಾಡಿ ‌ಎಳನೀರಿನ ಅಭಿಷೇಕ ಮತ್ತು ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು.

ಭಕ್ತರಿಂದ ಅನ್ನದಾಸೋಹ

ಬೆಂಗಳೂರಿನ ಭಕ್ತರು 1.75 ಲಕ್ಷ ಮಂದಿಗೆ ಉಚಿತವಾಗಿ ಅನ್ನದಾಸೋಹ ವ್ಯವಸ್ಥೆ ಮಾಡಿದ್ದರು. ಅನ್ನಪೂರ್ಣ ಭೋಜನಾಲಯದ ಹಿಂಬದಿಯ ಮೈದಾನ ಹೈಸ್ಕೂಲ್‌ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಯಿತು. ಬೆಂಗಳೂರಿನ ಶ್ರೀನಿವಾಸ ರೆಡ್ಡಿ ಮತ್ತು ಬಳಗ (80 ಸ್ವಯಂಸೇವಕರು) ಯಲಹಂಕದ ತಿಮ್ಮಾ ರೆಡ್ಡಿ ಮತ್ತು ಬಳಗ ಆನೇಕಲ್ ಮುನಿರೆಡ್ಡಿ ಮತ್ತು ಬಳಗ ಹೊಸೂರು ರಾಜ ರೆಡ್ಡಿ ಮತ್ತು ಬಳಗ ಆನೇಕಲ್ ಗೋಪಾಲ ರೆಡ್ಡಿ ಮತ್ತು ಬಳಗ ಸರ್ಜಾಪುರ ಬಸವರಾಜ ಮತ್ತು ಬಳಗ ಶ್ರೀಮಂಜುನಾಥ ಸ್ವಾಮಿ ಪಾದಯಾತ್ರೆ ಸೇವಾ ಸಮಿತಿ ಮಲ್ಲೇಶ್ವರಂ ಬೆಂಗಳೂರು ನಾಗರಬಾವಿ ಪುಷ್ಪಮಂಜು ಬಳಗದಿಂದ ತಲಾ 50 ಸ್ವಯಂಸೇವಕರು ಮಾಲೂರು ರಾಮಕೃಷ್ಣ ಮತ್ತು ಬಳಗ (30) ಶ್ರೀಮಂಜುನಾಥ ಸ್ವಾಮಿ ಪಾದಯಾತ್ರೆ ಸೇವಾ ಸಮಿತಿ ಬೀರೂರು (25) ಧರ್ಮಸ್ಥಳ ಅನ್ನಸಂತರ್ಪಣಾ ಸಮಿತಿ ನಾಗರಬಾವಿ ಬೆಂಗಳೂರು ಕೃಷ್ಣ ರೆಡ್ಡಿ ಆನೇಕಲ್ ಬೆಂಗಳೂರು ತಂಡದಿಂದ ತಲಾ 100 ಮಂದಿ ಸೇರಿ 12 ತಂಡಗಳಲ್ಲಿ 635 ಸ್ವಯಂಸೇವಕರು ಅನ್ನದಾಸೋಹ ಸೇವೆ ನಡೆಸಿದರು. ಊಟಕ್ಕೆ ಅನ್ನ ಸಾರು ಸಾಂಬಾರ್‌ ಪಲ್ಯ ಮೊಸರನ್ನ ರಾಗಿ ಮುದ್ದೆ ಪಾಯಸ ಬೂಂದಿ ಹಾಗೂ ಮಸಾಲಪುರಿ. ಉಪಾಹಾರಕ್ಕೆ ಉಪ್ಪಿಟ್ಟು ಕೇಸರಿಬಾತ್‌ ಪಲಾವ್ ಮೊಸರನ್ನ ಬಿಸಿಬೇಳೆಬಾತ್ ಅವರೆಕಾಳು ಮಸಾಲಪುರಿ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.