
ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ, ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಗಡಿಯಲ್ಲಿರುವ ಶಾಂಭವಿ ನದಿಯ ಸೇತುವೆಯಲ್ಲಿ ಭಾರಿ ವಾಹನಗಳಿಗೆ ಪ್ರವೇಶ ನಿರಾಕರಿಸಿ ಎರಡು ವರ್ಷವಾಗಿದೆ. ಸೇತುವೆ ದುರಸ್ತಿ ಮಾಡದೆ ಪಲಿಮಾರು ಹಾಗೂ ಬಳ್ಕುಂಜೆ ಗ್ರಾಮಗಳ ಜನರಿಗೆ ತೊಂದರೆಯಾಗಿದೆ ಎಂದು ಸ್ಥಳೀಯರು ಆರೋಪಿಸಿ ಸೋಮವಾರ ಸ್ಥಳ ವೀಕ್ಷಣೆಗೆ ಬಂದ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದರು.
ಹೋರಾಟಗಾರ, ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ, ಸಿಪಿಎಂನ ಶ್ರೀನಾಥ್ ಕುಲಾಲ್ ಪಲಿಮಾರು, ಮುನೀರ್ ಕಾಟಿಪಳ್ಳ ಅವರು ಭೇಟಿ ನೀಡಿದರು. ಈ ಸೇತುವೆ ದುರ್ಬಲಗೊಂಡಿದೆ ಎಂಬ ಕಾರಣ ಮುಂದಿಟ್ಟು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಡಳಿತವು ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಪ್ರಮುಖ ರಸ್ತೆಯ ಸೇತುವೆಯನ್ನು ಮುಚ್ಚಿಸಿದೆ. ಲಘು ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಒದಗಿಸಿದೆ. ಸೇತುವೆಯಲ್ಲಿ ಭಾರಿ ವಾಹನ ಓಡಾಟ ನಿರ್ಬಂಧಿಸುವ ಆದೇಶ ಹೊರಡಿಸುವ ಸಂದರ್ಭ ಈ ಸೇತುವೆಯನ್ನು ಶೀಘ್ರ ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವ, ಹೊಸ ಸೇತುವೆ ನಿರ್ಮಿಸುವ ಭರವಸೆ ನೀಡಲಾಗಿತ್ತು ಎಂದರು.
ಇದಾಗಿ ಎರಡು ವರ್ಷವಾದರೂ ದುರಸ್ತಿ ನಡೆಸಿಲ್ಲ. ಹೊಸ ಸೇತುವೆ ನಿರ್ಮಾಣದ ಪ್ರಕ್ರಿಯೆಯೂ ಆರಂಭಗೊಂಡಿಲ್ಲ. ಇದರಿಂದಾಗಿ ಕಿನ್ನಿಗೋಳಿ– ಇನ್ನಾ ನಡುವಿನ ಪಲಿಮಾರು, ಬಳ್ಕುಂಜೆ, ಕರ್ನಿರೆ ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳು ಹತ್ತಾರು ಕಿಲೋ ಮೀಟರ್ ಸುತ್ತುಬಳಸಿ ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಕಾರ್ಮಿಕರು, ದುಡಿಯುವ ಜನರು ಆಟೊಗಳಲ್ಲಿ ಓಡಾಡುವ ಸ್ಥಿತಿ. ಸೇತುವೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ಅಧೀನದಲ್ಲಿ ಇರುವುದರಿಂದ ಹೆಚ್ಚುವರಿ ಜಿಲ್ಲಾಧಿಕಾರಿಯಲ್ಲಿ ವಿಚಾರಿಸಿದರೆ ದುರಸ್ತಿ, ಹೊಸ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ಉತ್ತರಿಸುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದರು.
ಸೇತುವೆಗೆ ಅಡ್ಡಲಾಗಿ ಕಲ್ಲುಗಳನ್ನು ಕಟ್ಟಿದ್ದರೂ, ಮಿನಿ ಲಾರಿಗಳಲ್ಲಿ ಕೆಂಪು ಕಲ್ಲು, ಮರಳು ಸಾಗಾಟ ನಡೆಯುತ್ತಿದೆ. ಇದೇ ರೀತಿಯ ಬಿರುಕು ಕಂಡು ಬಂದ ಅಡ್ಡೂರು, ಪೊಳಲಿ ಸೇತುವೆ, ಮರವೂರು ಸೇತುವೆಗಳಲ್ಲಿ ದುರಸ್ತಿ ನಡೆಸಿ ವಾಹನ ಸಂಚಾರಕ್ಕೆ ಅವಕಾಶ ಒದಗಿಸಲಾಗಿತ್ತು. ಕೂಳೂರು ಕಮಾನು ಸೇತುವೆಯನ್ನೂ ಬಿರುಕು ಮುಚ್ಚಿ ತಾತ್ಕಾಲಿಕವಾಗಿ ಸಂಚಾರಕ್ಕೆ ಅವಕಾಶ ಕೊಡಲಾಗಿದೆ. ಅಲ್ಲೆಲ್ಲಾ ಹೊಸ ಸೇತುವೆಯ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು ಎಂದರು.
ದಿನೇಶ್ ಹೆಗ್ಡೆ ಮಾತನಾಡಿ, ಈ ಸೇತುವೆಯ ಎರಡೂ ಬದಿಗಳಲ್ಲಿ ಬಿಜೆಪಿಯ ಕಾಪು, ಮೂಲ್ಕಿ–ಮೂಡು ಬಿದಿರೆ ಕ್ಷೇತ್ರಗಳ ಶಾಸಕರು ಇದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡರೂ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳ ಬಳಿ ನಿಯೋಗ ತೆರಳಿ, ಹೊಸ ಸೇತುವೆ ನಿರ್ಮಾಣ, ಅಲ್ಲಿಯವರೆಗೆ ಈಗಿರುವ ಸೇತುವೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆ ಮಂಡಿಸಲಾಗುವುದು. ಅನಿವಾರ್ಯವಾದರೆ ಹೋರಾಟ, ಪ್ರತಿಭಟನೆ ನಡೆಸುತ್ತೇವೆ ಎಂದರು.
ಗ್ರಾಮಸ್ಥರ ಪರವಾಗಿ ಬಳ್ಕುಂಜೆಗುತ್ತು ಮಲ್ಲಿಕಾ ಶೆಟ್ಟಿ, ಪ್ರಸಾದ್ ಅಜಿಲ, ದಿವಾಕರ ಶೆಟ್ಟಿ, ದಿನಕರ ಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.