ADVERTISEMENT

ಕೊರಗರ ಸಂಖ್ಯೆ ಅಳಿವಿನ ಅಂಚಿಗೆ | ವೈದ್ಯಕೀಯ ಅಧ್ಯಯನ: ಪಲ್ಲವಿ ಭರವಸೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 3:19 IST
Last Updated 9 ಜನವರಿ 2026, 3:19 IST
ಪಲ್ಲವಿ ಜಿ.
ಪಲ್ಲವಿ ಜಿ.   

ಮಂಗಳೂರು: ‘ರಾಜ್ಯದ ಆದಿ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಕೊರಗರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಇದರ ಹಿಂದಿರುವ ಕಾರಣ ಪತ್ತೆಗೆ ವೈದ್ಯಕೀಯ, ಮಾನವಶಾಸ್ತ್ರೀಯ ಹಾಗೂ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಕ್ರಮ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕುಗಳ ಮಲೆಕುಡಿಯ, ಅಜಿಲ, ಕೊರಗ, ಭೈರ, ಮಾಯಿಲ, ನಲಿಕೆ, ಪಂಬದ ಮೊದಲಾದ ಕಾಲೊನಿಗಳಿಗೆ ಭೇಟಿ ನೀಡಿರುವ ಅವರು, ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದರು.

‘ಅಧ್ಯಯನಕ್ಕೆ ನಿಗಮ ಪೂರ್ತಿ ಸಹಕಾರ ನೀಡಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಅವರ ಜೊತೆಗೆ ಚರ್ಚಿಸುತ್ತೇನೆ’ ಎಂದರು. 

ADVERTISEMENT

‘ಬೆಳ್ತಂಗಡಿ ಸವಣಾಲು ಗ್ರಾಮದ ಹಿತ್ತಿಲಪೇಲ ಗ್ರಾಮದ ಮಲೆಕುಡಿಯರ ಕಾಲೊನಿಗೆ ಭೇಟಿ ನೀಡಿದಾಗ ಅವರು ವಿದ್ಯುತ್, ರಸ್ತೆ ಮೂಲಸೌಕರ್ಯಗಳಿಲ್ಲದೇ ಸಮಸ್ಯೆ ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಆ ಗ್ರಾಮವನ್ನು ಸಂಪರ್ಕಿಸುವ ಎರಡು ಸೇತುವೆಗಳು ಶಿಥಿಲಗೊಂಡಿವೆ. ಮಳೆಗಾಲದಲ್ಲಿಆ ಸೇತುವೆಯಲ್ಲಿ ಸಾಗುವಾಗ ಕೆಲವರು ನೀರುಪಾಲಾಗಿದ್ದಾರೆ. ಮಕ್ಕಳು ಶಾಲೆಗೆ ಹೋಗಲು ಭಯಪಡುತ್ತಿದ್ದಾರೆ. ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕಿದೆ ಎಂದು ಅರಣ್ಯ ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಈ ಸಮಸ್ಯೆಗಳನ್ನು ಕಾಲಮಿತಿಯ ಒಳಗೆ ಪರಿಹರಿಸುವಂತೆ ಸೂಚಿಸಿದ್ದೇನೆ’ ಎಂದರು. 

‘ಸುಳ್ಯ ತಾಲ್ಲೂಕಿನ ಪಂಜ ಗ್ರಾಮದ ಕೊರಗರು ಇನ್ನೂ ಆಧಾರ್‌ ಹಾಗೂ ಜಾತಿ ಪ್ರಮಾಣ ಪತ್ರ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅನೇಕ ಕಡೆ ಪರಿಶಿಷ್ಟರ ಕಾಲೊನಿಗಳಿಗೆ  ರಸ್ತೆ, ಕುಡಿಯುವ ನೀರಿನ ಸೌಕರ್ಯ ಇಲ್ಲ. ಕೆಲ ಕುಟುಂಬಗಳು ಇನ್ನೂ ಸ್ವಂತ ಜಮೀನು ಹೊಂದಿಲ್ಲ. ಬಂಟ್ವಾಳ ತಾಲ್ಲೂಕಿನ ಕೊಳ್ನಾಡು ಗ್ರಾಮದ ಕಡಪಿಕೆರೆಯ ಬೈರ ಸಮುದಾಯದ 74 ಕುಟುಂಬಗಳಿಗೆ ಸ್ವಂತ ಜಾಗ ಇಲ್ಲ. ಅದನ್ನು ಪಡೆಯಲು ಬೇಕಾದ ದಾಖಲೆಗಳೂ ಅವರಲ್ಲಿ ಇಲ್ಲ. ಅವರಿಗೆ ನೆರವಾಗುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಆ ಕಾಲೊನಿಯ ರಸ್ತೆಗೆ 100 ಮೀ ಕಾಂಕ್ರಿಟೀಕರಣದ ಅಗತ್ಯವಿದ್ದು, ನಿಗಮವೇ ಅನುದಾನ ನೀಡಲಿದೆ’ ಎಂದರು.

ಇದಕ್ಕೂ ಮುನ್ನ ಅವರು ಅಹವಾಲು ಸ್ವೀಕರಿಸಿದರು.

ನಿಗಮದ ಅಧ್ಯಕ್ಷ ವಿಶೇಷ ಕರ್ತವ್ಯ ಅಧಿಕಾರಿ ಅನಂತ ಕುಮಾರ್ ಏಕಲವ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಹೆಮಲತಾ ಭಾಗವಹಿಸಿದ್ದರು.  

‘ದೈವ ನರ್ತಕರ ಅವಹೇಳನ ತಡೆಗೆ ಕ್ರಮ’

ದೈವ ನರ್ತಕ ಸಮುದಾಯಗಳಿಗೆ ಅವಹೇಳನಕಾರಿಯಾಗುವಂತೆ  ವೇದಿಕೆಗಳಲ್ಲಿ ದೈವ ನರ್ತನ ಮಾಡುವುದನ್ನು ನಿಷೇಧಿಸಬೇಕು. ಇದರಿಂದ ಕುಲ ವೃತ್ತಿಗೆ ಅವಮಾನವಾಗುತ್ತಿದೆ ಎಂದು ಪಂಬದ ಸಮುದಾಯದವರು ಮನವಿ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಹಾಗೂ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರ ಜೊತೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮವಹಿಸುತ್ತೇನೆ’ ಎಂದು ಪಲ್ಲವಿ ಜಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.