ADVERTISEMENT

ಅಧ್ಯಕ್ಷರಿಂದ ಸರ್ವಾಧಿಕಾರಿ ಧೋರಣೆ: ಪುತ್ತಿಲ

ಪಾಣಾಜೆ ಪಂಚಾಯಿತಿ ಭೂಮಿಯನ್ನು ಮಸೀದಿಗೆ ದಫನ ಭೂಮಿಗೆ ನೀಡುವ ನಿರ್ಧಾರ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 4:27 IST
Last Updated 13 ಡಿಸೆಂಬರ್ 2025, 4:27 IST
ಪಾಣಾಜೆ ಪಂಚಾಯಿತಿ ಭೂಮಿಯನ್ನು ಮಸೀದಿಗೆ ದಫನ ಭೂಮಿಯಾಗಿ ನೀಡುವ ನಿರ್ಧಾರದ ವಿರೋಧಿಸಿ ಅರುಣ್‌ ಕುಮಾರ್‌ ಪುತ್ತಿಲ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ಪಾಣಾಜೆ ಪಂಚಾಯಿತಿ ಭೂಮಿಯನ್ನು ಮಸೀದಿಗೆ ದಫನ ಭೂಮಿಯಾಗಿ ನೀಡುವ ನಿರ್ಧಾರದ ವಿರೋಧಿಸಿ ಅರುಣ್‌ ಕುಮಾರ್‌ ಪುತ್ತಿಲ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು   

ಪುತ್ತೂರು: ಪಾಣಾಜೆ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಚಿಂತನೆಯಿಂದ ಕೆಲಸ ಮಾಡಬೇಕಾಗಿದ್ದ ಪಂಚಾಯಿತಿ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಮೂಲಕ ಪಂಚಾಯಿತಿಗೆ ಮೀಸಲಿಟ್ಟ ಜಾಗವನ್ನು ದಫನ ಭೂಮಿಗೆ ಕೊಡುವ ನಿರ್ಣಯ ಕೈಗೊಂಡು ಗ್ರಾಮಸ್ಥರಿಗೆ ದ್ರೋಹ ಮಾಡಿದ್ದಾರೆ. ರಾಜಧರ್ಮ ಪಾಲಿಸದೆ, ದ್ವೇಷ, ಅಸೂಯೆ ರಾಜಕಾರಣದ ಮೂಲಕ ಪಾಣಾಜೆಯಲ್ಲಿ ಸಂಘರ್ಷದ ವಾತಾವರಣ ಇರಬೇಕು ಎನ್ನುವ ಉದ್ದೇಶದಿಂದ ಈ ನಿರ್ಣಯ ಮಾಡಿದ್ದಾರೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಅರುಣ್‌ ಕುಮಾರ್ ಪುತ್ತಿಲ ಆರೋಪಿಸಿದರು.

ತಾಲ್ಲೂಕಿನ ಪಾಣಾಜೆ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಕಾದಿರಿಸಿದ್ದ ಪಂಚಾಯಿತಿ ಭೂಮಿಯನ್ನು ಆರ್ಲಪದವಿನ ಬದ್ರಿಯಾ ಮಸೀದಿಯ ದಫನ ಭೂಮಿಗೆ ನೀಡಿರುವ ಪಂಚಾಯಿತಿ ಅಧ್ಯಕ್ಷರ ನಿರ್ಣಯ ವಿರೋಧಿಸಿ ಶುಕ್ರವಾರ ಪಾಣಾಜೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ನೀವು ನಿರ್ಣಯ ಮಾಡಿರಬಹುದು. ಆದರೆ ಅದರ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಕೆಲಸವನ್ನು ಗ್ರಾಮಸ್ಥರು ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಎಲ್ಲಾ ರೀತಿಯ ಹೋರಾಟಗಳು ನಡೆಯಲಿವೆ ಎಂದು ಎಚ್ಚರಿಸಿದರು.

ADVERTISEMENT

ನಿಮ್ಮ ಪಕ್ಷದವರು ಪಂಚಾಯಿತಿ ಅಧ್ಯಕ್ಷರಾಗಿದ್ದಾರೆ ಎನ್ನುವ ಕಾರಣಕ್ಕೆ ಸುಳ್ಳನ್ನು ಸತ್ಯ ಮಾಡುವ ಕೆಲಸ ನೀವು ಮಾಡುತ್ತಿದ್ದೀರಿ. ಪಾಣಾಜೆಯ ಪ್ರಜ್ಞಾವಂತ, ಬುದ್ಧಿವಂತ ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದಾರೆ. ನೀವು ಮಾಡುತ್ತಿರುವ ಪಿತೂರಿಗಳನ್ನು ಮೆಟ್ಟಿನಿಂತು ಸ್ವಾಭಿಮಾನದ ರಾಜಕಾರಣ ಮಾಡುವ ಶಕ್ತಿ ಪಾಣಾಜೆ ನಾಗರಿಕರಿಗಿದೆ ಎಂದು ಹೇಳಿದರು. ಪೊಲೀಸ್ ಬಸ್ ನಿಲ್ಲಿಸಿ ಈ ರೀತಿಯ ಭದ್ರತೆ ಏರ್ಪಡಿಸಿ ಪ್ರತಿಭಟನೆ ನಡೆಸುವ ವಾತಾವರಣ ನಿರ್ಮಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಸಂಜೀವ ಮಠಂದೂರು, ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ನಿವೃತ್ತ ಸೈನಿಕ ರಮಾನಾಥ ರೈ ಪಡ್ಯಂಬೆಟ್ಟು ಅವರು ಪಂಚಾಯಿತಿ ಆಸ್ತಿಯನ್ನು ದಫನ ಭೂಮಿಗೆ ನೀಡುವ ನಿರ್ಣಯ ಕೈಗೊಂಡ ಪಾಣಾಜೆ ಪಂಚಾಯಿತಿ ಅಧ್ಯಕ್ಷರ ನಿರ್ಧಾರವನ್ನು ಖಂಡಿಸಿದರು. ಪ್ರತಿಭಟನೆ ಬಳಿಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಈ ಕುರಿತು ಮನವಿ ಸಲ್ಲಿಸಲಾಯಿತು. 

ಪಾಣಾಜೆ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಪ್ರೇಮ್‌ರಾಜ್ ಆರ್ಲಪದವು, ಬಿಜೆಪಿ ಪುತ್ತೂರು ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಮಾಜಿ ಅಧ್ಯಕ್ಷ ಮಹೇಂದ್ರ ವರ್ಮ, ಸಂಘಟನಾ ಕಾರ್ಯದರ್ಶಿ ಅನಿಲ್ ತೆಂಕಿಲ, ಪಾಣಾಜೆ ಪಂಚಾಯಿತಿ ಉಪಾಧ್ಯಕ್ಷೆ ಜಯಶ್ರೀ ದೇವಸ್ಯ, ಸದಸ್ಯರಾದ ಸುಭಾಷ್ ರೈ ಕೆಂಬರಕಟ್ಟ, ಭಾರತಿ ಭಟ್, ಸುಲೋಚನಾ, ಪಂಚಾಯಿತಿ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ, ಪಾಣಾಜೆ ಸಿಎ ಬ್ಯಾಂಕ್ ನಿರ್ದೇಶಕರಾದ ಉಮೇಶ್ ರೈ ಗಿಳಿಯಾಲು, ಹರೀಶ್ ಕಡಮಾಜೆ, ಜನಜಾಗೃತಿ ವೇದಿಕೆಯ ಸದಾಶಿವ ರೈ ಸೂರಂಬೈಲು, ಬಿಜೆಪಿ ಮುಖಂಡರಾದ ಸುರೇಶ್ ಆಳ್ವ ಸಾಂತ್ಯ, ಸುಜಿತ್ ಕಜೆ, ಉಮೇಶ್ ಬಲ್ಯಾಯ, ಸಂತೋಷ್ ರೈ ಗೋಳಿತ್ತಡಿ ಭಾಗವಹಿಸಿದ್ದರು.

ಪ್ರತಿಭಟನೆ ಹಿನ್ನಲೆಯಲ್ಲಿ ಪೊಲೀಸರು ಪಂಚಾಯಿತಿ ಕಚೇರಿ ಬಳಿ ಬಿಗು ಬಂದೋಬಸ್ತ್ ಏರ್ಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.