ADVERTISEMENT

ಪೆಟ್ರೋಲಿಯಂ ದರ ಏರಿಕೆ ರಾಷ್ಟ್ರೀಯ ವಿಪತ್ತು: ಬಿ.ರಮಾನಾಥ ರೈ ವಾಗ್ದಾಳಿ

ಕೇಂದ್ರ ಸರ್ಕಾರದ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2018, 9:14 IST
Last Updated 8 ಸೆಪ್ಟೆಂಬರ್ 2018, 9:14 IST
   

ಮಂಗಳೂರು: ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅರ್ಧದಷ್ಟು ಇಳಿಕೆಯಾಗಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ಮಾಡಿ ಜನರ ಹಣ ದೋಚುತ್ತಿರುವುದು ನಿಜವಾದ ರಾಷ್ಟ್ರೀಯ ವಿಪತ್ತು’ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ವಾಗ್ದಾಳಿ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿದಾಗ ಸಜೀವ ಸರ್ಕಾರವೊಂದು ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಸಬೇಕಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತಷ್ಟು ದರ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ’ ಎಂದರು.

ತಾನು ಅಧಿಕಾರಕ್ಕೆ ಬಂದರೆ ಅಚ್ಛೇ ದಿನಗಳನ್ನು ತರುವುದಾಗಿ ಮೋದಿ ಹೇಳಿದ್ದರು. ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆ ಕೂಡ ಅದರಲ್ಲಿ ಸೇರಿತ್ತು. ಆದರೆ, ದರ ದುಪ್ಪಟ್ಟಾದರೂ ಮೋದಿಯನ್ನು ಬೆಂಬಲಿಸಿದವರು ಮೌನಕ್ಕೆ ಶರಣಾಗಿದ್ದಾರೆ. ಎಲ್‌ಪಿಜಿ ಸಿಲಿಂಡರ್‌ ದರ ₹ 400 ಇದ್ದದ್ದು, ₹ 800ರ ಗಡಿ ದಾಟಿದೆ. ಆದರೂ ಪ್ರಧಾನಿ ಮೌನ ಮುರಿಯುತ್ತಿಲ್ಲ ಎಂದು ಟೀಕಿಸಿದರು.

ADVERTISEMENT

ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಬಂಡವಾಳಷಾಹಿಗಳ ಪರವಾದ ಸರ್ಕಾರ. ಅದಕ್ಕೆ ಬಡವರ ಕಷ್ಟ ಅರ್ಥವಾಗುವುದಿಲ್ಲ. ಯಾವಾಗಲೂ ಹೊಟ್ಟೆ ತುಂಬ ಊಟ ಮಾಡುವವರ ಬಗ್ಗೆಯೇ ಯೋಚಿಸುತ್ತದೆ. ಸಾಮಾನ್ಯ ಜನರ ಹಣ ಲೂಟಿ ಮಾಡಿ ದೊಡ್ಡವರನ್ನು ಪೋಷಿಸುತ್ತಿದೆ ಎಂದು ದೂರಿದರು.

‘ದೇಶದ ಎಲ್ಲ ಸಮಸ್ಯೆಗಳಿಗೂ ಕಾಂಗ್ರೆಸ್‌ ಕಾರಣ ಎಂದು ಹೇಳಿ ನುಣುಚಿಕೊಳ್ಳಲು ಪ್ರಧಾನಿ ಮತ್ತು ಅವರ ಪರಿವಾರ ಯತ್ನಿಸುತ್ತಿದೆ. ಜವಾಹರಲಾಲ್‌ ನೆಹರೂ ಅವರಿಂದ ಮನಮೋಹನ್‌ ಸಿಂಗ್‌ವರೆಗಿನ ಪ್ರಧಾನಿಗಳತ್ತಲೇ ಬೆರಳು ತೋರುತ್ತಿದೆ. ಹಾಗಿದ್ದರೆ, ಈಗ ಅಧಿಕಾರದಲ್ಲಿ ಇರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಹೊಣೆ ಏನು?’ ಎಂದು ಪ್ರಶ್ನಿಸಿದರು.

ಬಂದ್‌ ಬೆಂಬಲಿಸಲು ಮನವಿ

ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ವಿರೋಧಿಸಿ ಸೋಮವಾರ ದೇಶವ್ಯಾಪಿ ಬಂದ್‌ಗೆ ಕಾಂಗ್ರೆಸ್‌ ಕರೆ ನೀಡಿದೆ. ಎಲ್ಲ ಸಂಘಟನೆಗಳು, ಸಂಘ ಸಂಸ್ಥೆಗಳು, ಜನಸಾಮಾನ್ಯರು ಈ ಬಂದ್‌ಗೆ ಬೆಂಬಲ ನೀಡಬೇಕು. ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಅನಿವಾರ್ಯವಾಗಿ ಕೈಗೆತ್ತಿಕೊಂಡಿರುವ ಈ ಹೋರಾಟವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಮಿಕ, ರೈತ, ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ 28 ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಈ ಸಂಘಟನೆಗಳ ಸಹಭಾಗಿತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಲಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಹಿಯುದ್ದೀನ್ ಬಾವಾ, ಮಾಜಿ ಮೇಯರ್ ಕವಿತಾ ಸನಿಲ್, ಕಾಂಗ್ರೆಸ್ ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಮಮತಾ ಗಟ್ಟಿ, ಎ.ಸಿ.ವಿನಯರಾಜ್, ವಿಶ್ವಾಸ್‌ಕುಮಾರ್ ದಾಸ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.