ADVERTISEMENT

ಪಿಲಿಕುಳ: ಹುಲಿ ಮರಿಗಳ ದತ್ತು ಪಡೆದ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 5:02 IST
Last Updated 22 ಡಿಸೆಂಬರ್ 2025, 5:02 IST
   

ಮಂಗಳೂರು: ‘ಪಿಲಿಕುಳ ಜೈವಿಕ ಉದ್ಯಾನದಲ್ಲಿ ಜನಿಸುವ ಮುಂದಿನ ಹುಲಿ ಮರಿಯನ್ನು ದತ್ತು ಪಡೆಯುವವರಲ್ಲಿ ನಾನೇ ಮೊದಲಿಗನಾಗುವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ. ತಿಳಿಸಿದರು.  

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಜನಿಸಿದ ಹುಲಿ ಮರಿಗಳಿಗೆ ಆಲಿವರ್ ಮತ್ತು ಟೆನ್ನಿಸನ್ ಎಂದು ನಾಮಕಾರಣ ಮಾಡಿ, ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡುವ ಹಾಗೂ ಅವುಗಳ ಪಾಲನೆಗೆ ನೆರವಾಗುವ ದತ್ತು ಯೋಜನೆಗೆ ಚಾಲನೆ ನೀಡಿ ಅವರು ಭಾನುವಾರ ಮಾತನಾಡಿದರು. 

ಮಂಗಳೂರು, ಕರಾವಳಿ ಉತ್ಸವ ಅಂಗವಾಗಿನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶೃಂಗೇರಿ ಮತ್ತು ಹರಿಹರಪುರದಲ್ಲಿ ಕಳೆದ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

ADVERTISEMENT

‘ಹುಲಿಗಳು ಹಿಂದಿನಿಂದಲೇ ದಾಳಿ ಮಾಡುತ್ತವೆ ಎಂಬ ನಂಬಿಕೆ ಜನರದ್ದು.  ವಿದ್ಯುತ್  ಮತ್ತಿತರ ಮೂಲ ಸೌಕರ್ಯಗಳ ಕೊರತೆಯಿದ್ದ ಗ್ರಾಮಗಳಲ್ಲಿ ಹುಲಿ ದಾಳಿಗಳು ಮಾಮೂಲಿ ಎಂಬತ್ತಿತ್ತು.  ಆದರೆ ಈಗ  ಕಾಡಿನ ಹುಲಿಯನ್ನು ನೋಡುವುದಕ್ಕೂ  ಭಾಗ್ಯ ಬೇಕು ಎಂಬಂತಾಗಿದೆ. ‘ಹುಲಿ ಉಳಿಸಿ’ ಅಭಿಯಾನಕ್ಕೆ ಇನ್ನಷ್ಟು ವೇಗ ಸಿಗಬೇಕಿದೆ’ ಎಂದರು.

ಎರಡು ಹುಲಿ ಮರಿಗಳನ್ನು ದತ್ತು ಪಡೆದ ಕಾರ್ಡೊಲೈಟ್ ಸ್ಪೆಷಾಲಿಟಿ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ ದಿವಾಕರ್ ಕದ್ರಿ, ‘ಒಂದು ಹುಲಿ ಬದುಕಿ ಉಳಿಯಲು ಕನಿಷ್ಠ 30 ಚದರ ಕಿ.ಮೀ ಮುಕ್ತ ಪ್ರದೇಶ ಹಾಗೂ  ಕನಿಷ್ಠ 52 ಬೇಟೆ ಪ್ರಾಣಿಗಳ ಸಹವಾಸ ಅಗತ್ಯವಿದೆ. ಕಾಡು ನಾಶ ಮುಂದುವರಿದರೆ ವರ್ಷದೊಳಗೆ ಹುಲಿ ಜಾತಿಗೇ ಅಪಾಯ ಎದುರಾಗಲಿದೆ. ಹುಲಿ ಸಂರಕ್ಷಣೆಯ ವಿಷಯದಲ್ಲಿ ಕೇವಲ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದಕ್ಕಿಂತ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳುವ ಸಮಯ ಬಂದಿದೆ’ ಎಂದು ಹೇಳಿದರು.  

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಅರುಣ್ ಕುಮಾರ್, ಉಪ ಸಮಿತಿ ಅಧ್ಯಕ್ಷ ಶ್ರೀನಿಕೇತನ, ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಪ್ರಶಾಂತ್ ಪೈ, ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಮಂಜುನಾಥ್, ಅಧಿಕಾರಿಗಳಾದ ಕೆ.ವಿ ರಾವ್, ಡಾ.ಅಶೋಕ್, ಡಾ.ದಿವ್ಯಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.