ADVERTISEMENT

ಕುಕ್ಕೆ ಸುಬ್ರಹ್ಮಣ್ಯ: ಬೀದಿ ಬದಿ ವ್ಯಾಪಾರಕ್ಕೆ ಸ್ಥಳ ಗುರುತು

ಸುಮಾರು 76 ಅರ್ಜಿ ಸಲ್ಲಿಕೆ, ಶೀಘ್ರ ಹಂಚಿಕೆ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 12:48 IST
Last Updated 17 ಜನವರಿ 2025, 12:48 IST
ಸುಬ್ರಹ್ಮಣ್ಯದ ಸವಾರಿ ಮಂಟಪದ ಬಳಿ ಬೀದಿ ಬದಿ ವ್ಯಾಪಾರಕ್ಕೆ ಸ್ಥಳ ಗುರುತು ಮಾಡಿರುವುದು
ಸುಬ್ರಹ್ಮಣ್ಯದ ಸವಾರಿ ಮಂಟಪದ ಬಳಿ ಬೀದಿ ಬದಿ ವ್ಯಾಪಾರಕ್ಕೆ ಸ್ಥಳ ಗುರುತು ಮಾಡಿರುವುದು   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಳದ ವತಿಯಿಂದ ಬೀದಿ ಬದಿ ವ್ಯಾಪಾರಕ್ಕೆ ಪ್ರತ್ಯೇಕ ಸ್ಥಳ ಗುರುತಿಸಲಾಗಿದ್ದು, ಶೀಘ್ರ ಹಂಚಿಕೆ ಪ್ರಕ್ರಿಯೆ ನಡೆಯಲಿದೆ.

ಕುಕ್ಕೆ ಸುಬ್ರಹ್ಮಣ್ಯದ ಎಲ್ಲೆಂದರಲ್ಲಿ ಬೀದಿ ಬದಿ ವ್ಯಾಪಾರ ಮಾಡುವುದರಿಂದ ಸಮಸ್ಯೆ ಆಗುತ್ತಿರುವ ಬಗ್ಗೆ ದೇವಸ್ಥಾನಕ್ಕೆ ದೂರು ಸಲ್ಲಿಕೆಯಾಗಿತ್ತು. ಈ ಸಂಬಂಧ ಅನಧಿಕೃತ ಬೀದಿ ಬದಿ ವ್ಯಾಪಾರ ಸ್ಥಳಗಳನ್ನು ತೆರವು ಮಾಡಲಾಗಿತ್ತು. ಇದರಿಂದ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ ಎಂಬ ಅಳಲೂ ಕೇಳಿಬಂದಿತ್ತು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಲ್ಲೆಂದರಲ್ಲಿ ಬೀದಿ ಬದಿ ವ್ಯಾಪಾರ, ಅನಧಿಕೃತ ವ್ಯಾಪಾರ ತಡೆಯಲು ದೇವಳದ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳಿಗೆ ಪೂರಕ ಕ್ರಮ ವಹಿಸುವ ಬಗ್ಗೆ ಸಭೆ ನಡೆಸಿ ಅವರಿಂದ ಅರ್ಜಿ ಪಡೆದುಕೊಂಡಿದ್ದರು.

ADVERTISEMENT

ಈ ಸಂಬಂಧ ಕುಕ್ಕೆ ಸುಬ್ರಹ್ಮಣ್ಯದ ಸವಾರಿಮಂಟಪದ ಬಳಿಯ ಖಾಲಿ ಪ್ರದೇಶ ಸೇರಿದಂತೆ ವಿವಿಧೆಡೆ ಬೀದಿ ಬದಿ ವ್ಯಾಪಾರ ನಡೆಸಲು ಸ್ಥಳ ನಿಗದಿ ಮಾಡಲು ಪರಿಶೀಲನೆ ನಡೆಸಲಾಗಿತ್ತು. ಅದರಂತೆ ಸ್ಥಳ ಪರಿಶೀಲಿಸಿ, ಬೀದಿ ಬದಿ ವ್ಯಾಪಾರ ನಡೆಸಲು ಸವಾರಿ ಮಂಟಪದ ಬಳಿ, ಅಭಯ ಆಂಜನೇಯ ಗುಡಿ ಬಳಿ ಹಾಗೂ ಇತರ ಎರಡು ಕಡೆ ಸೇರಿದಂತೆ ಸುಮಾರು 70 ಸ್ಥಳಗಳನ್ನು ಈಗಾಗಲೇ ಗುರುತು ಮಾಡಲಾಗಿದೆ. ಮುಂದೆ ಹಂಚಿಕೆ ಪ್ರಕ್ರಿಯೆ ನಡೆಯಲಿದ್ದು, ವಿವಿಧ ನಿಯಾಮಾವಳಿ ರೂಪಿಸಲಾಗುವುದು. ಒಂದು ಮನೆಯ ಒಬ್ಬರಿಗೆ ಮಾತ್ರ ಒಂದು ಸ್ಥಳ ನೀಡಲಾಗುತ್ತದೆ. ಈಗಾಗಲೇ ಸುಮಾರು 76 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವುಗಳನ್ನು ಪರಿಶೀಲನೆ ನಡೆಸಿ ಸ್ಥಳ ಹಂಚಿಕೆ ನಡೆಸಲಾಗುತ್ತದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ ತಿಳಿಸಿದ್ದಾರೆ.

ಬೀದಿ ಬದಿ ವ್ಯಾಪಾರಿಗಳಿಗೆ ಮಾರ್ಗಸೂಚಿ ಪಾಲಿಸುವಂತೆ ಸೂಚಿಸಲಾಗುತ್ತಿದೆ. ಅವರಿಗೆ ಸ್ಥಳಕ್ಕೆ ಕನಿಷ್ಠ ದರ ನಿಗದಿ ಮಾಡಲಾಗುತ್ತದೆ. ಸುಬ್ರಹ್ಮಣ್ಯದ ಬೇರೆ ಕಡೆ ಅನಧಿಕೃತವಾಗಿ ಬೀದಿ ಬದಿ ವ್ಯಾಪಾರ ನಡೆಸುವುದಕ್ಕೆ ಕಡಿವಾಣ ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.