ADVERTISEMENT

ಬಂಟ್ವಾಳ: ಸುಸಜ್ಜಿತ ಕ್ರೀಡಾಂಗಣ ಕೊರತೆ

ಮೋಹನ್ ಕೆ.ಶ್ರೀಯಾನ್
Published 27 ಅಕ್ಟೋಬರ್ 2023, 6:37 IST
Last Updated 27 ಅಕ್ಟೋಬರ್ 2023, 6:37 IST
ಪ್ರಾತಿನಿಧಿಕ
ಪ್ರಾತಿನಿಧಿಕ   

ಬಂಟ್ವಾಳ: ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ಮತ್ತು ಸಿಂಥೆಟಿಕ್ ಟ್ರ್ಯಾಕ್‌ ಇಲ್ಲದ ಕಾರಣ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಮಂಗಳೂರಿನಲ್ಲಿ ನಡೆಸುವಂತಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

400 ಮೀಟರ್ ಟ್ರ್ಯಾಕ್‌ ತಾಲ್ಲೂಕಿನಲ್ಲಿ ಇಲ್ಲ. ಶಾಲೆಗಳ ಮೈದಾನದ ನಿರ್ವಹಣೆಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ಹೀಗಾಗಿ ಶಾಲಾ ಕ್ರೀಡಾಕೂಟ ಆಯೋಜಿಸುವುದು ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಗೆ ತಲೆನೋವಿನ ವಿಷಯ. ಎಸ್‌ವಿಎಸ್ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ನಡೆಯಬೇಕಾಗಿದ್ದ ಕ್ರೀಡಾಕೂಟವನ್ನು ಮಳೆಯಿಂದಾಗಿ ಮೂಡುಬಿದಿರೆಗೆ ಸ್ಥಳಾಂತರ ಮಾಡಲಾಗಿತ್ತು.

ತಾಲ್ಲೂಕು ಮಟ್ಟದ ಕೀಡಾಕೂಟ ಆಯೋಜಿಸುವ ಜವಾಬ್ದಾರಿ ಹೊತ್ತಿದ್ದ ತುಂಬೆಯ ಶಿಕ್ಷಣ ಸಂಸ್ಥೆ ಮಂಗಳೂರಿನಲ್ಲಿ ನಡೆಸಲು ನಿರ್ಧರಿಸಿದೆ. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು (ಬಂಟ್ವಾಳ), ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ (ಮಂಗಳೂರು) ಮತ್ತು ಶಾಸಕ ಅಶೋಕ್ ಕುಮಾರ್ ರೈ (ಪುತ್ತೂರು) ಅವರ ಮತದಾರರು ಕ್ಷೇತ್ರ ಬಂಟ್ವಾಳಕ್ಕೆ ವಿಸ್ತರಿಸಿಕೊಂಡಿದೆ. ಹಿಂದೆ ಸಚಿವರಾಗಿದ್ದ ಬಿ.ರಮಾನಾಥ ರೈ ಅವರು ಬೆಂಜನಪದವಿನಲ್ಲಿ 9 ಎಕರೆ ಸರ್ಕಾರಿ ಜಮೀನು ಮತ್ತು ಒಂದು ಎಕರೆ ಖಾಸಗಿ ಜಮೀನು ಕ್ರೀಡಾಂಗಣಕ್ಕೆ ಮೀಸಲಿಟ್ಟು ₹ 10 ಕೋಟಿ ಅನುದಾನ ಮಂಜೂರುಗೊಳಿಸಿದ್ದರು. ಕ್ರೀಡಾಂಗಣಕ್ಕೆ ಗುದ್ದಲಿ ಪೂಜೆಯೂ ನೆರವೇರಿತ್ತು. ಸರ್ಕಾರ ಬದಲಾವಣೆಯಾದ ನಂತರ ಅನುದಾನ ಮೊತ್ತ ವಾಪಸ್ ಹೋಗಿದೆ ಎಂಬ ಆರೋಪವಿದೆ.

ADVERTISEMENT

‘₹10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಸಾಧ್ಯವಿಲ್ಲ. ಕಳೆದ ಅವಧಿಯಲ್ಲಿ ₹ 100 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲು ಕೇಂದ್ರದ ಖೇಲೊ ಇಂಡಿಯಾ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.