
ಮಂಗಳೂರು: ಉರುವಲು, ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬಳಕೆಯನ್ನು ಹಂತ ಹಂತವಾಗಿ ಕಡಿತಗೊಳಿಸಿ ಗೃಹಬಳಕೆಗೆ ಕೊಳವೆಗಳ ಮೂಲಕ ನೈಸರ್ಗಿಕ ಅನಿಲವನ್ನು (ಪಿಎನ್‌ಜಿ) ಪೂರೈಸುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದು. ಈ ಯೋಜನೆಗೆ ಆಯ್ಕೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ 2 ಸಾವಿರಕ್ಕೂ ಅಧಿಕ ಮನೆಗಳ ಒಲೆಗಳು ಪಿಎನ್‌ಜಿಯಿಂದ ಉರಿಯುತ್ತಿವೆ.
‘ಜಿಲ್ಲೆಯ 3.5 ಲಕ್ಷ ಮನೆಗಳಿಗೆ 2030ರ ಒಳಗೆ ಪಿಎನ್‌ಜಿ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಗೇಲ್ ಗ್ಯಾಸ್ ಸಂಸ್ಥೆ ಹೊಂದಿದೆ. ಇದುವರೆಗೆ ನಗರದಲ್ಲಿ 570 ಕಿ.ಮೀ ಉದ್ದದ ಕೊಳವೆಯನ್ನು ಅಳವಡಿಸಲಾಗಿದ್ದು, ಅದರಲ್ಲಿ 250 ಕಿ.ಮೀ ಉದ್ದದ ಕೊಳವೆ ಮೂಲಕ ಪಿಎನ್‌ಜಿಯನ್ನು ಪೂರೈಸಲಾಗುತ್ತಿದೆ. ಇದುವರೆಗೆ ಸುಮಾರು ಐದೂವರೆ ಸಾವಿರ ಮನೆಗಳಿಗೆ ಪಿಎನ್‌ಜಿ ಸಂಪರ್ಕಿಸಲಾಗಿದ್ದು, 2 ಸಾವಿರಕ್ಕೂ ಹೆಚ್ಚು ಕುಟುಂಬಗಳು ಪಿಎನ್‌ಜಿ ಬಳಸುತ್ತಿವೆ’ ಎಂದು ಗೇಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ (ಸಿಜಿಡಿ) ಸಾಯಿಶಂಕರ್ ಬಿ. ‘ಪ್ರಜಾವಾಣಿ’ ತಿಳಿಸಿದರು.
ಜಿಲ್ಲೆಯಲ್ಲಿ ಮನೆ ಮನೆಗೆ ಪಿಎನ್‌ಜಿ ಸಂಪರ್ಕ ಕಲ್ಪಿಸುವ ಯೋಜನೆಯ 2018ರಿಂದಲೇ ಶುರುವಾಗಿವೆ. ನಗರದ ಅನೇಕ ಕಡೆ ಮನೆಗಳಲ್ಲಿ ಪಿಎನ್‌ಜಿ ಪೂರೈಕೆಯ ಕೊಳವೆಗಳನ್ನು ಅಳವಡಿಸಿ ಐದಾರು ವರ್ಷಗಳೇ ಕಳೆದಿವೆ. ಮನೆಗೆ ಪಿಎನ್‌ಜಿ ಪೂರೈಕೆ ಯಾವಾಗ ಎಂದು ಅನೇಕರು ಕಾಯುತ್ತಿದ್ದಾರೆ. ಆದರೆ ಕೊಳವೆ ಮಾರ್ಗ ಅಳವಡಿಕೆ ಕಾರ್ಯ ನಿರೀಕ್ಷಿತ ವೇಗದಲ್ಲಿ ಆಗುತ್ತಿಲ್ಲ ಎಂಬುದು ನಗರದ ಜನರ ಅಳಲು. ಇದನ್ನು ಗೇಲ್ ಗ್ಯಾಸ್ ಸಂಸ್ಥೆಯ ಅಧಿಕಾರಿಗಳೂ ಅಲ್ಲಗಳೆಯುವುದಿಲ್ಲ.
‘ಈ ಯೋಜನೆ ಆರಂಭವಾದ ಬಳಿಕ ಕೋವಿಡ್‌ನಿಂದ 2 ವರ್ಷ ಕಾಮಗಾರಿ ಕುಂಠಿತವಾಯಿತು. ಇಲ್ಲಿನ ಭೌಗೋಳಿಕತೆಯ ಕಾರಣದಿಂದಾಗಿ ಕೊಳವೆ ಅಳವಡಿಕೆ ನಿರೀಕ್ಷಿತ ವೇಗದಲ್ಲಿ ಸಾಗಿಲ್ಲ. ಯೋಜನೆ ಪೂರ್ಣಗೊಳಿಸಲು 2030ರವರೆಗೆ ಕಾಲಾವಕಾಶವಿದೆ. ನಗರದ ಉತ್ತರ ಭಾಗದ ಸುರತ್ಕಲ್, ಕೊಟ್ಟಾರ, ಪ್ರದೇಶಗಳಲ್ಲಿ ಪಿಎನ್‌ಜಿ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಸಾಯಿಶಂಕರ್ ಮಾಹಿತಿ ನೀಡಿದರು.
ಕೊಚ್ಚಿಯಿಂದ ನಗರದ ಎಂಸಿಎಫ್ ಘಟಕಕ್ಕೆ ನೈಸರ್ಗಿಕ ಅನಿಲ ಮುಖ್ಯ ಕೊಳವೆ ಮೂಲಕ ಪೂರೈಕೆ ಆಗುತ್ತದೆ. ಎಂಸಿಎಫ್‌ನಿಂದ ನಗರಕ್ಕೆ ಪುಟ್ಟ ಕೊಳವೆಗಳ ಮೂಲಕ ಅನಿಲ ಪೂರೈಸಬೇಕಿದೆ. ಇದಕ್ಕಾಗಿ ಪಣಂಬೂರು ಕಡೆಯಿಂದ ಕೂಳೂರು ಕಡೆಗೆ ಫಲ್ಗುಣಿ ನದಿಯ ಅಡಿಯಲ್ಲಿ ಸುಮಾರು 30 ಅಡಿ ಆಳದಲ್ಲಿ 8 ಇಂಚು ಸುತ್ತಳತೆಯ ಕೊಳವೆಯನ್ನು ಹಾಯಿಸಬೇಕಿದೆ. ಸುಮಾರು 1 ಕಿ.ಮೀ ಉದ್ದಕ್ಕೆ ನೆಲವನ್ನು ಕೊರೆದು ಕೊಳವೆ ಅಳವಡಿಸುವ ಈ ಕಾಮಗಾರಿಗೆ ಅಡಚಣೆ ಉಂಟಾಯಿತು. ಹಾಗಾಗಿ ನಿರೀಕ್ಷೆಯಂತೆ ಮನೆ ಮನೆಗೆ ಅನಿಲ ಪೂರೈಸುವಲ್ಲಿ ಹಿನ್ನಡೆ ಅನುಭವಿಸಬೇಕಾಯಿತು.
ನಗರದಲ್ಲಿ ಅನೇಕ ಕಡೆ ರೈಲು ಮಾರ್ಗದಡಿ ಕೊಳವೆ ನಿರ್ಮಿಸಬೇಕಾಗಿದೆ. ನಗರಲ್ಲಿ ಈಗಾಗಲೇ ಕುಡಿಯುವ ನೀರು, ಒಳಚರಂಡಿ ಕೊಳವೆಗಳು, ದೂರಸಂಪರ್ಕ ಕೇಬಲ್‌ಗಳು, ಮೆಸ್ಕಾಂ ಕೇಬಲ್‌ಗಳು ಹಾದುಹೋಗಿವೆ. ಪಾಲಿಕೆಯಿಂದ ಅನುಮತಿ ಪಡೆದು, ಈಗಾಗಲೇ ಕೊಳವೆ ಅಳವಡಿಸಿರುವ ಸಂಸ್ಥೆಗಳ ಜೊತೆ ಸಮನ್ವಯ ಸಾಧಿಸಿಕೊಂಡು ನೈಸರ್ಗಿಕ ಅನಿಲ ಕೊಳವೆ ಅಳವಡಿಸುವ ಕಾಮಗಾರಿ ನಡೆಸಬೇಕಾಗಿರುವುದು ಸವಾಲಾಗಿದೆ ಎನ್ನುತ್ತಾರೆ ಗೇಲ್ ಗ್ಯಾಸ್ ಸಂಸ್ಥೆ ಅಧಿಕಾರಿಗಳು.
‘ಉರ್ವಸ್ಟೊರ್, ಬೋಂದೆಲ್, ಮಲ್ಲಿಕಟ್ಟೆ ಮುಂತಾದೆಡೆ ಡಿಕಂಪ್ರೆಷನ್ ಘಟಕ ಸ್ಥಾಪಿಸಿ, ಅಲ್ಲಿಗೆ ಸಿಲಿಂಡರ್‌ನಲ್ಲಿ ಪಿಎನ್‌ಜಿ ಸಾಗಿಸಿ, ಅಲ್ಲಿಂದ ಕೊಳವೆಗಳಿಗೆ ಅನಿಲ ಪೂರೈಸುತ್ತಿದ್ದೇವೆ. ಫಲ್ಗುಣಿ ನದಿಯ ಅಡಿ ಕೊಳವೆ ಅಳವಡಿಕೆ ಪೂರ್ಣಗೊಂಡ ಬಳಿಕ ಕೊಳವೆ ಮೂಲಕವೇ ಅನಿಲವನ್ನು ನಗರದ ಕೇಂದ್ರ ಭಾಗಕ್ಕೂ ತಲುಪಲಿದೆ. ಬಿಜೈನ ಭಾರತ್ ಮಾಲ್, ಕಾಪಿಕಾಡ್, ಆನೆಗುಂಡಿ, ಲೂರ್ಡ್ಸ್ ಶಾಲೆ, ದೇರೇಬೈಲ್ ಯೆಯ್ಯಾಡಿ ಪ್ರದೇಶಗಳಿಗೆ ಇನ್ನು ಎರಡು ಮೂರು ತಿಂಗಳುಗಲ್ಲಿ ಮನೆ ಮನೆಗೆ ಪಿಎನ್‌ಜಿ ಪೂರೈಕೆ ಸಾಧ್ಯವಾಗಲಿದೆ ’ ಎನ್ನುತ್ತಾರೆ ಸಂಸ್ಥೆಯ ಹಿರಿಯ ವ್ಯವಸ್ಥಾಪಕ (ಯೋಜನೆ) ಸುಮೇಶ್.
‘ನಂದಿನಿ ನದಿಯಡಿ ಕೊಳವೆ ಅಳವಡಿಕೆ ಯಶಸ್ವಿಯಾಗಿದ್ದು, ಮೂಲ್ಕಿ ಪ್ರದೇಶಗಳಿಗೆ ಅನಿಲ ಪೂರೈಕೆ ಸಾಧ್ಯವಾಗಲಿದೆ’ ಎಂದು ಅವರು ತಿಳಿಸಿದರು.
ಬಿಎಸ್‌ಎಫ್, ಕಾರ್ಡೊಲೈಟ್, ಎಂಎಸ್‌ಇಜೆಡ್, ಅದಾನಿ ವಿಲ್ಮರ್, ಲೆಮಿನಾ ಮೊದಲಾದವು ಸೇರಿ 52 ಕೈಗಾರಿಕಾ ಘಟಕಗಳಿಗೆ ಗೇಲ್ ಗ್ಯಾಸ್ ಸಂಸ್ಥೆ ನೈಸರ್ಗಿಕ ಅನಿಲವನ್ನು ಪೂರೈಸುತ್ತಿದೆ. ಈ ಪ್ರದೇಶದ ಮನೆಗಳಿಗೂ ಪಿಎನ್‌ಜಿ ಸಂಪರ್ಕ ಕಲ್ಪಿಸಲಾಗಿದೆ. ಸುರತ್ಕಲ್ ಪ್ರದೇಶದ ಸೂರಜ್ ಇಂಟನ್ಯಾಷನಲ್, ಸದಾನಂದ, ದ್ವಾರ ಅನೇಕ ಹೋಟೆಲ್‌ಗಳು ಪಿಎನ್‌ಜಿ ಬಳಸುತ್ತಿವೆ ಎಂದು ಸಾಯಿಶಂಕರ್ ತಿಳಿಸಿದರು.
ಮಂಗಳೂರಿನ ಬಳಿಕ ಮೂಡುಬಿದಿರೆ, ಪುತ್ತೂರು, ಸುಳ್ಯ ಪ್ರದೇಶಗಳಿಗೂ ಪಿಎನ್‌ಜಿ ಪೂರೈಕೆಗೆ ಗೇಲ್ ಕ್ರಮ ವಹಿಸಲಿದೆ. ಮೂಡುಬಿದಿರೆಯಲ್ಲಿ ಡಿಕಂಪ್ರೆಷನ್ ಘಟಕ ಸ್ಥಾಪನೆಗೆ ಜಾಗ ಲಭ್ವಿದೆ. ಪುತ್ತೂರು ಹಾಗೂ ಸುಳ್ಯದಲ್ಲೂ ಜಾಗ ಹುಡುಕುತ್ತಿದ್ದೇವೆ ಎಂದು ಸುಮೇಶ್ ತಿಳಿಸಿದರು.
ಪಿಎನ್‌ಜಿ ಅನುಕೂಲಗಳೇನು?
ಇಂಗಾಲದ ಡೈಆಕ್ಸೈಡನ್ನು ಹೊರಸೂಸುವುದಿಲ್ಲ ಪರಿಸರ ಸ್ನೇಹಿ
ದಿನದ 24 ಗಂಟೆ ವರ್ಷ ಪೂರ್ತಿ ಕೊಳವೆ ಮೂಲಕ ಪಿಎನ್‌ಜಿ ಲಭ್ಯ
ಎಲ್‌ಪಿಜಿಗಿಂತ ಕಡಿಮೆ ಸಾಂದ್ರತೆ ಹೊಂದಿರುವ ಪಿಎನ್‌ಜಿ ಸೋರಿಕೆಯಾದರೂ ಕೊಠಡಿಯ ತಳದಲ್ಲಿ ಸಂಗ್ರಹವಾಗದು
ಕಡಿಮೆ ಸಾಂದ್ರತೆ ಇರುವ ಕಾರಣ ಅಪಾಯವೂ ಕಡಿಮೆ
ಮನೆ ಯಲ್ಲಿ ಇದನ್ನು ಸಂಗ್ರಹಿಸುವ ಅಗತ್ಯವಿಲ್ಲ.
ಕಾಯಬೇಕಾಗಿಲ್ಲ ದರದಲ್ಲಿ ಎಲ್‌ಪಿಜಿಗಿಂತ ಪಿಎನ್‌ಜಿ ತುಸು ಅಗ್ಗ ವಿದ್ಯುತ್‌ನಂತೆ ಎಷ್ಟು ಬಳಸುತ್ತೇವೋ ಅಷ್ಟಕ್ಕೆ ಬಿಲ್ ಪಾವತಿಸಬಹುದು ಪ್ರೀ–ಪೇಯ್ಡ್ ಪೋಸ್ಟ್–ಪೇಯ್ಡ್ ಸೌಲಭ್ಯಗಳೆರಡೂ ಲಭ್ಯ
ನಿರ್ದಿಷ್ಟ ವಾಸನೆಯ ರಾಸಾಯನಿಕ ಬೆರೆಸುವುದರಿಂದ ಸೋರಿಕೆ ಪತ್ತೆ ಸುಲಭ ಸೋರಿಕೆ ಹತೋಟಿಗೆ ತರಲು ಕೊಳವೆ ಮಾರ್ಗದ ಪ್ರತಿ 1 ಕಿ.ಮೀಗೆ ಒಂದು ವಾಲ್ವ್ ಅಳವಡಿಕೆ
ಪಿಎನ್‌ಜಿ ಕೊಳವೆ ಹಾದು ಹೋಗಿರುವಲ್ಲಿ ನೆಲದ ಮೇಲೆ ಪ್ರತಿ 50 ಮೀ ದೂರಕ್ಕೊಂದು ಗುರುತು ಅಳವಡಿಕೆ
ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಸಹಾಯವಾಣಿ ಲಭ್ಯ
ಸಂಸ್ಥೆಯ ವಾಹನ ದಿನದ 24 ಗಂಟೆ ಗಸ್ತು ತಿರುಗಿ ಸೋರಿಕೆ ಮೇಲೆ ನಿಗಾವಹಿಸಲಿದೆ ಮಾಹಿತಿ: ಗೇಲ್ ಗ್ಯಾಸ್ ಲಿಮಿಟೆಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.