ADVERTISEMENT

ಫ್ರಾನ್ಸ್‌ನಲ್ಲಿ ಹಸಿವು ತಣಿಸುವ ಇಂದ್ರಭವನದ ಅವಲಕ್ಕಿ

ಟೀಮ್‌ ಮಂಗಳೂರಿಗೆ ಊಟ ನಿರ್ವಹಣೆಯೇ ಸವಾಲು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2018, 14:44 IST
Last Updated 6 ಸೆಪ್ಟೆಂಬರ್ 2018, 14:44 IST
ಇಂದ್ರಭವನದ ಅವಲಕ್ಕಿ 
ಇಂದ್ರಭವನದ ಅವಲಕ್ಕಿ    

ಮಂಗಳೂರು: ಫ್ರಾನ್ಸ್‌ನಲ್ಲಿ ನಡೆಯುವಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲು ತೆರಳುವ ಮಂಗಳೂರಿನ ಹವ್ಯಾಸಿ ಗಾಳಿಪಟ ತಂಡದ ಹಸಿವನ್ನು ನೀಗಿಸಲಿದೆ ಬಲ್ಮಠದಲ್ಲಿರುವ ಇಂದ್ರಭನವದ ಅವಲಕ್ಕಿ.

ಗಾಳಿಪಟ ತಂಡ ‘ಟೀಮ್‌ ಮಂಗಳೂರು’ ಸದಸ್ಯರ ಲಗೇಜ್‌ನಲ್ಲಿ ಗಾಳಿಪಟದ ಜೊತೆ ಚಿತ್ರಕಲಾಕೃತಿಗಳು ಮತ್ತು ಆಹಾರ ವಸ್ತುಗಳ ಪೊಟ್ಟಣಗಳಿವೆ. ಅದರಲ್ಲಿ ಇಂದ್ರಭವನದಲ್ಲಿ ಹುರಿದು ಮಾಡಿದ ಮಸಾಲೆ ಅವಲಕ್ಕಿ , ಸಪ್ಪೆ ಅವಲಕ್ಕಿಯನ್ನೇ ಹೆಚ್ಚಿನ ಪ್ರಮಾಣದಲ್ಲಿ ಇರಿಸಿಕೊಂಡಿದ್ದಾರೆ. ಒಂದು ಮುಷ್ಟಿ ಅವಲಕ್ಕಿಗೆ ಅಲ್ಲಿ ಮೊಸರು ಸೇರಿಸಿ ತಿಂದು ಹಸಿವು ನೀಗಿಸಿಕೊಳ್ಳುತ್ತೇವೆ ಎನ್ನುತ್ತಾರೆ ಫ್ರಾನ್ಸ್‌ಗೆ ಹೊರಟು ನಿಂತ ಸತೀಶ್‌ ರಾವ್‌.

ವಿಮಾನದಲ್ಲಿ ಲಗೇಜ್‌ ಕೊಂಡೊಯ್ಯಲು ಮಿತಿ ಇರುತ್ತದೆ. ಕಲಾಕೃತಿಗಳು ಮತ್ತು ಗಾಳಿಪ‍ಟವನ್ನು ಕೊಂಡೊಯ್ಯುವುದೇ ಸವಾಲಿನ ಕೆಲಸ. ಆದ್ದರಿಂದ ಅಕ್ಕಿ ಕೊಂಡೊಯ್ಯುತ್ತಿಲ್ಲ. ‘ಫ್ರಾನ್ಸ್‌ನಲ್ಲಿ ಡೀಪಿ ನಗರದಲ್ಲಿ ಅತ್ಯುತ್ತಮ ರೀತಿಯಲ್ಲಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗುತ್ತದೆ. ಆದರೆ ಭಾರತೀಯರಿಗೆ ಅಲ್ಲಿನ ಆಹಾರ ಪದ್ಧತಿಗೆ ಹೊಂದಿಕೊಳ್ಳುವುದು ಸಾಧ್ಯವಾಗುವುದಿಲ್ಲ’ ಎನ್ನುತ್ತಾರೆ ಟೀಮ್‌ ಮಂಗಳೂರಿನ ಮುಖ್ಯಸ್ಥ ಸರ್ವೇಶ್‌ ರಾವ್‌.

ADVERTISEMENT

‘2016ರಲ್ಲಿನಾನು ಅಲ್ಲಿಗೆ ತೆರಳಿದಾಗ ಇಂದ್ರಭವನದ ಅವಲಕ್ಕಿ ಮತ್ತು ಉತ್ತರ ಕರ್ನಾಟಕದ ಒಣ ಜೋಳದ ರೊಟ್ಟಿ ತೆಗೆದುಕೊಂಡು ಹೋಗಿದ್ದೆ. ಅಲ್ಲಿನ ಸಸ್ಯಾಹಾರದಲ್ಲಿ ಉಪ್ಪು ಹುಳಿ ಮೆಣಸಿನ ಪ್ರಮಾಣ ಕಮ್ಮಿ. ಅದು ನಮ್ಮ ರುಚಿಗೆ ಹೊಂದಿಕೆಯಾಗುವುದಿಲ್ಲ. ಕರಾವಳಿಯ ತೆಂಗಿನ ಕಾಯಿ ಮಸಾಲೆಯನ್ನು ತಿಂದು ರೂಢಿಯಾದ ನಮಗೆ ಅಲ್ಲಿ ಎರಡೇ ದಿನಕ್ಕೆ ಬೇಸರ ಬರುತ್ತದೆ. ಗಟ್ಟಿ ಬ್ರೆಡ್‌ ತಿಂದು ದವಡೆ ನೋಯುತ್ತದೆ ’ ಎಂದು ಅವರು ಹೇಳಿದರು.

ಮಾಂಸದಡುಗೆಗೂ ಅವರು ಕರಿಮೆಣಸಿನ ಪುಡಿ ಮತ್ತು ಉಪ್ಪು ಮಾತ್ರ ಸೇರಿಸುವುದು ವಾಡಿಕೆ.

‘ಸತೀಶ್‌ ರಾವ್ ಈ ಹಿಂದೆಯೂ ಫ್ರಾನ್ಸ್‌ಗೆ ತೆರಳಿದ್ದರು. ಆಗ ಆಹಾರ ವ್ಯತ್ಯಾಸದಿಂದ ಡೀಪಿ ನಗರದಲ್ಲಿ ಆಸ್ಪತ್ರೆ ಸೇರಬೇಕಾದ ಪರಿಸ್ಥಿತಿ ಬಂದಿತ್ತು. ಈ ಬಾರಿ ಭಾರತೀಯ ಆಹಾರ ನೀಡುವಂತೆ ಅಲ್ಲಿನ ಆಯೋಜಕರಿಗೆ ವಿಶೇಷ ಮನವಿ ಸಲ್ಲಿಸಿದ್ದೇವೆ. ಅಲ್ಲಿ ಏಕೈಕ ಭಾರತೀಯ ಹೋಟೆಲ್‌ ಇದೆ. ದುಬಾರಿ ಬೆಲೆ ಆದ್ದರಿಂದ 8 ದಿನಗಳ ಕಾಲ ಅಲ್ಲಿ ಆಹಾರ ಸೇವಿಸುವುದು ಕಷ್ಟ’ ಎನ್ನುತ್ತಾರೆ ದಿನೇಶ್‌ ಹೊಳ್ಳ.

ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ನಡೆಯುವ ಗಾಳಿಪಟ ಉತ್ಸವಗಳನ್ನು ನೋಡಿದ್ದೇನೆ. ಫ್ರಾನ್ಸ್‌ನಲ್ಲಿ ವ್ಯವಸ್ಥೆ ಬಹಳ ಉತ್ತಮವಾಗಿರುತ್ತದೆ. ಆದರೆ ತೀವ್ರ ಚಳಿ ಮತ್ತು ಆಹಾರದ ಸಮಸ್ಯೆ ನಿಭಾಯಿಸುವುದೇ ಕಷ್ಟ . ಆದ್ದರಿಂದ ನೆಸ್‌ಕೆಫೆ ಪೊಟ್ಟಣಗಳು, ವೇಫರ್‌, ಬಿಸ್ಕೆಟ್ಸ್‌, ಮೂಂಗ್‌ ದಾಲ್‌,ಚಪಾತಿ, ಚಕ್ಕುಲಿ, ಚಿಪ್ಸ್‌ ಕೊಂಡೊಯ್ಯುತ್ತಿದ್ದೇವೆ. ಬ್ರೆಡ್‌ ತಿನ್ನುತ್ತ ಪ್ರತಿದಿನ ಕಳೆಯುವುದು ಬೇಜಾರು. ಒಳ್ಳೆ ಕಾಫಿ ಸಿಗದೇ ದಿನವೇ ಹಾಳಾದಂತೆ ಅನಿಸುತ್ತದೆ’ ಎಂದು ಅವರು ಹೇಳಿದರು.

ಆದರೆ ಜಗತ್ತಿನ ವಿವಿಧ ದೇಶಗಳಿಂದ ಬರುವ ಗಾಳಿಪಟ ಪ್ರಿಯರು, ಅವರ ಜೀವನಾಸಕ್ತಿ, ಕಲಿಕೆ, ಸಂಶೋಧನೆಗಳನ್ನು ನಾವು ಕಲಿಯಲು ಯತ್ನಿಸುತ್ತೇವೆ. ಆಗ ಈ ಆಹಾರದ ಸಮಸ್ಯೆ ಬದಿಗೆ ಸರಿದು ನಿಲ್ಲುತ್ತದೆ. ಗಾಳಿಪಟ ಉತ್ಸವ ಒಂದು ಅದ್ಭುತ ಜಗತ್ತು ಎಂದು ಅವರು ಹೇಳಿದರು.

ಈ ಹಿಂದೆ ಉತ್ಸವದಲ್ಲಿ ಭಾಗವಹಿಸಿದ್ದ ಪ್ರಶಾಂತ್‌, ಶಶಾಂಕ್‌, ಪ್ರಾಣ್‌ ಹೆಗ್ಡೆ ಅವರೂ ಇದೇ ಅಭಿಪ್ರಾಯವೂ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.