ADVERTISEMENT

ಪೊಲೀಸ್ ಕಮಿಷನರೇಟ್‌ನಲ್ಲಿ ಅಧಿಕಾರಿಗಳ ಬರ

ಮಂಗಳೂರು: ಸಾಲು ಸಾಲಾಗಿ ಹಿರಿಯ ಅಧಿಕಾರಿಗಳ ವರ್ಗಾವಣೆ ತಂದಿಟ್ಟ ಸಮಸ್ಯೆ

ವಿ.ಎಸ್.ಸುಬ್ರಹ್ಮಣ್ಯ
Published 18 ಸೆಪ್ಟೆಂಬರ್ 2018, 19:30 IST
Last Updated 18 ಸೆಪ್ಟೆಂಬರ್ 2018, 19:30 IST
ಮಂಗಳೂರು ಪೊಲೀಸ್‌ ಕಮಿಷನರೇಟ್‌ ಕಚೇರಿ
ಮಂಗಳೂರು ಪೊಲೀಸ್‌ ಕಮಿಷನರೇಟ್‌ ಕಚೇರಿ   

ಮಂಗಳೂರು: ಕರಾವಳಿ ಹೃದಯ ಭಾಗವಾದ ಮಂಗಳೂರು ನಗರ ಮತ್ತು ಮೂಡುಬಿದಿರೆ ತಾಲ್ಲೂಕಿನ ಬಹುಭಾಗದ ವ್ಯಾಪ್ತಿ ಹೊಂದಿರುವ ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನಲ್ಲಿ ಈಗ ಅಧಿಕಾರಿಗಳ ಬರ ಕಾಡುತ್ತಿದೆ. ಕೆಳಹಂತದ ಸಿಬ್ಬಂದಿಯ ಕೊರತೆ ಸುಧಾರಿಸಿದ ಬೆನ್ನಲ್ಲೇ ಹಿರಿಯ ಅಧಿಕಾರಿಗಳ ಹುದ್ದೆಗಳು ಸಾಲು ಸಾಲಾಗಿ ಖಾಲಿಯಾಗುತ್ತಿವೆ.

ಮೂರು ಉಪ ವಿಭಾಗಗಳು ಹಾಗೂ ಕಾನೂನು ಸುವ್ಯವಸ್ಥೆಯ 15 ಮತ್ತು ಸಂಚಾರ ವಿಭಾಗದ ಮೂರು ಪೊಲೀಸ್‌ ಠಾಣೆಗಳು ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿವೆ. ಇವುಗಳ ಜೊತೆಯಲ್ಲೇ ಸಿಸಿಆರ್‌ಬಿ, ಸಿಸಿಬಿ, ಸೈಬರ್‌ ಅಪರಾಧ, ಆರ್ಥಿಕ ಅಪರಾಧ ಮತ್ತು ಮಾದಕವಸ್ತು ನಿಯಂತ್ರಣಕ್ಕೆ ಸಂಬಂಧಿಸಿದ ವಿಶೇಷ ಘಟಕಗಳಿವೆ. ನಗರ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯೂ (ಸಿಎಆರ್‌) ಕಮಿಷನರೇಟ್‌ ಅಧೀನದಲ್ಲಿದೆ. ಈ ಪೈಕಿ ಹಲವು ಘಟಕಗಳ ಮುಖ್ಯಸ್ಥರ ಹುದ್ದೆಗಳು ಕೆಲವೇ ದಿನಗಳ ಅಂತರದಲ್ಲಿ ಖಾಲಿಯಾಗಿವೆ.

ಐಪಿಎಸ್‌ ಅಧಿಕಾರಿಯಾಗಿ ಬಡ್ತಿ ಹೊಂದಿರುವ ಕಾರಣಕ್ಕೆ ಹೈದರಾಬಾದ್‌ನ ರಾಷ್ಟ್ರೀಯ ಪೊಲೀಸ್ ಅಕಾಡೆಮಿಗೆ 40 ದಿನಗಳ ತರಬೇತಿಗೆ ತೆರಳಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ಅವರನ್ನು ಯಾದಗಿರಿ ಜಿಲ್ಲೆಯ ಎಸ್‌ಪಿ ಹುದ್ದೆಗೆ ವರ್ಗಾವಣೆ ಮಾಡಿ ಕಳೆದ ವಾರ ಆದೇಶ ಹೊರಡಿಸಲಾಗಿದೆ. ಸಿಎಆರ್‌ ಡಿಸಿಪಿ ಹುದ್ದೆ ಖಾಲಿಯಾಗಿ ಹಲವು ದಿನಗಳಾಗಿದೆ. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್‌ ಮೂರೂ ವಿಭಾಗಗಳನ್ನು ನಿಭಾಯಿಸಬೇಕಾದ ಸ್ಥಿತಿ
ಸೃಷ್ಟಿಯಾಗಿದೆ.

ADVERTISEMENT

ಹೆಚ್ಚುವರಿ ಎಸ್‌ಪಿ ಶ್ರೇಣಿಗೆ ಬಡ್ತಿ ಹೊಂದಿರುವ ಕೇಂದ್ರ ಉಪ ವಿಭಾಗದ ಎಸಿಪಿ ಎಂ.ಉದಯ ನಾಯಕ್‌ ಕೂಡ ವರ್ಗಾವಣೆ ಆದೇಶದಲ್ಲಿದ್ದಾರೆ. ಆದರೆ, ಪರ್ಯಾಯವಾಗಿ ಯಾರನ್ನೂ ನಿಯೋಜಿಸದ ಕಾರಣದಿಂದ ಇನ್ನೂ ಕರ್ತವ್ಯದಿಂದ ಬಿಡುಗಡೆ ಮಾಡಿಲ್ಲ. ನಗರ ಅಪರಾಧ ದಾಖಲೆಗಳ ವಿಭಾಗದ (ಸಿಸಿಆರ್‌ಬಿ) ಎಸಿಪಿ ಹುದ್ದೆಯೂ ಖಾಲಿ ಉಳಿದು ಹಲವು ತಿಂಗಳು ಕಳೆದಿದೆ. ಮಂಗಳೂರು ದಕ್ಷಿಣ (ಪಾಂಡೇಶ್ವರ), ಕಂಕನಾಡಿ ನಗರ ಪೊಲೀಸ್ ಠಾಣೆಗಳಲ್ಲಿ ಇನ್‌ಸ್ಪೆಕ್ಟರ್‌ಗಳೇ ಇಲ್ಲ. ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಹುದ್ದೆಯೂ ಖಾಲಿ ಉಳಿದಿದೆ.

ಸಬ್‌ ಇನ್‌ಸ್ಪೆಕ್ಟರ್‌ಗಳೇ ಇಲ್ಲ: ಪೊಲೀಸ್‌ ಠಾಣೆಗಳ ನಿರ್ವಹಣೆ ಮತ್ತು ತನಿಖೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ಗಳ ಪಾತ್ರ ದೊಡ್ಡದು. ಆದರೆ, ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನಲ್ಲಿ ಸಬ್‌ ಇನ್‌ಸ್ಪೆಕ್ಟರ್‌ಗಳ ಕೊರತೆ ತೀವ್ರವಾಗಿದೆ. ಕಮಿಷನರೇಟ್‌ನಲ್ಲಿ ಈಗ ಒಟ್ಟು 28 ಪಿಎಸ್‌ಐ ಹುದ್ದೆಗಳು ಖಾಲಿ ಇವೆ. ಈ ಪೈಕಿ 14 ಹುದ್ದೆಗಳು ಸಂಪೂರ್ಣವಾಗಿ ಖಾಲಿಯಾಗಿದ್ದರೆ, 14 ಮಂದಿ ಹೊಸದಾಗಿ ಆಯ್ಕೆಯಾದ ಸಬ್‌ ಇನ್‌ಸ್ಪೆಕ್ಟರ್‌ಗಳು ತರಬೇತಿಗೆ ತೆರಳಿದ್ದಾರೆ. ಇವರು ಇನ್ನೂ ಒಂದೂವರೆ ವರ್ಷ ಕಾಲ ತರಬೇತಿಯಲ್ಲೇ ಇರುತ್ತಾರೆ.

‘ಪಿಎಸ್‌ಐಗಳ ಕೊರತೆಯಿಂದ ಪೊಲೀಸ್‌ ಠಾಣೆಗಳ ದೈನಂದಿನ ಕೆಲಸ ಮತ್ತು ತನಿಖೆ ಮೇಲೆ ಪರಿಣಾಮ ಬೀರುತ್ತದೆ. ಈ ವಿಚಾರವನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಿರಿಯ ಅಧಿಕಾರಿಗಳ ಹುದ್ದೆಗಳು ಖಾಲಿ ಇರುವ ಬಗ್ಗೆಯೂ ಮನವರಿಕೆ ಮಾಡಲಾಗಿದೆ. ಆದಷ್ಟು ಬೇಗನೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬಹುದು ಎಂಬ ನಿರೀಕ್ಷೆ ಇದೆ’ ಎಂದು ಪೊಲೀಸ್ ಕಮಿಷನರ್‌ ಟಿ.ಆರ್.ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.