ನಿಯಾಜ್
ಮಂಗಳೂರು: ಉರ್ವಾ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ದಾಖಲಾಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ಪ್ರಮುಖ ಆರೋಪಿ ನಿಯಾಜ್ ಅಲಿಯಾಸ್ ನಿಯಾ ಎಂಬಾತ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಆತನನ್ನು ಬೆಂಗಳೂರಿನ ಹುಳಿಮಾವು ಅರಕೆರೆ ಎಂಬಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಆರೋಪಿ ನಿಯಾಜ್ ವಿರುದ್ಧ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮತ್ತು ಉಡುಪಿ ಜಿಲ್ಲೆಯ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 13 ಪ್ರಕರಣಗಳು ದಾಖಲಾಗಿದ್ದವು. ಆರೋಪಿ ಬಂಧನಕ್ಕೆ ಬೇರೆ ಬೇರೆ ನ್ಯಾಯಾಲಯಗಳು ವಾರೆಂಟ್ ಹೊರಡಿಸಿದ್ದವು.
ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದ ನ್ಯಾಯಾಲಯಕ್ಕೆ ಎರಡು ವರ್ಷಗಳಿಂದ ಈಚೆಗೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಒಟ್ಟು 52 ಪ್ರಕರಣಗಳ ಆರೋಪಿಗಳನ್ನು ಮೂರು ತಿಂಗಳ ಈಚೆಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರಲ್ಲಿ ಕೋಮು ಗಲಭೆ ಪ್ರಕರಣಗಳಿಗೆ ಸಂಬಂಧಿಸಿದ 7, ರೌಡಿಶೀಟರ್‌ಗಳು 9, ಮಾದಕ ಪದಾರ್ಥ ಕಳ್ಳಸಾಗಣೆ ಮತ್ತು ಮಾರಾಟ ಪ್ರಕರಣಗಳಿಗೆ ಸಂಬಂಧಿಸಿದ 7, ಕೊಲೆ ಯತ್ನ ಪ್ರಕರಣದ 6 ಹಾಗೂ ಕೊಲೆ ಪ್ರಕರಣದ ಒಬ್ಬ ಆರೋಪಿ ಸೇರಿದ್ದಾರೆ.
ಬಂಧಿತರಲ್ಲಿ ಚಂದ್ರಹಾಸ ಕೇಶವ್ ಶೆಟ್ಟಿಗಾರ್, ಲೀಲಾಧರ್, ಖಾದರ್ ಕುಳಾಯಿ, ಶಾಕೀಬ್, ಮೊಹಮ್ಮದ್ ಹುಸೇನ್, ರಮೀಜ್ ಸೇರಿದಂತೆ ಏಳು ಮಂದಿ ಕೋಮು ಗಲಭೆ ಪ್ರಕರಣಗಳ ಆರೋಪಿಗಳು. ಆದಿತ್ಯ ಕುಮಾರ್, ಭರತ್ ಬಾಲು, ಮೊಹಮ್ಮದ್ ಸುಹೈಬ್, ಮೊಹಮ್ಮದ್ ಮುಸ್ತಾಫ್, ಮೊಹಮ್ಮದ್ ನಜೀಮ್, ಉಮ್ಮರ್ ನವಾಫ್, ಉಮ್ಮರ್ ಫಾರೂಕ್, ಫರಾಜ್ ಹಾಗೂ ಮೊಹಮ್ಮದ್ ನಿಯಾಜ್ ರೌಡಿ ಶೀಟರ್‌ಗಳು. ಪುಂಪಾ ಕಾಶಿ, ದೀಪ ನಾರಾಯಣ, ಮೊಹಮ್ಮದ್ ನಿಹಾಲ್, ಮೊಹಮ್ಮದ್ ಶಫೀಕ್, ಬಾಬರ್ ಪಾಷಾ, ಮೊಹಮ್ಮದ್ ಇಕ್ಬಾಲ್, ಅಬೂಬಕರ್ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಆರೋಪಿಗಳು. ಗಣೇಶ್ ಲಕ್ಷ್ಮಣ್ ಸಾಕೇತ್, ಆದಿತ್ಯ ಕುಮಾರ್, ಅಬ್ದುಲ್ ನಾಸೀರ್, ಇಮ್ರಾನ್ ಅಲಿಯಾಸ್ ಇಂಬು, ರಮೀಜ್ ಹಾಗೂ ಮೊಹಮ್ಮದ್ ನಜೀಮ್ ಕೊಲೆ ಯತ್ನ ಪ್ರಕರಣಗಳ ಆರೋಪಿಗಳು ಹಾಗೂ ಶಾನವಾಜ್ ಅಲಿಯಾಸ್ ಶಾನ್ ಕೊಲೆ ಪ್ರಕರಣದ ಆರೋಪಿ.
ದೀರ್ಘಾವಧಿಯಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡ ಆರೋಪದ ಮೇಲೆ ವಿಶಾಲ್ ಕುಮಾರ್, ಮೊಹಮ್ಮದ್ ನಿಹಾಲ್, ಇರ್ಷಾದ್, ಹನೀಫ್ ಕೊಕ್ಕಡ ಸೇರಿದಂತೆ 12 ಆರೋಪಿಗಳ ವಿರುದ್ಧ ಹೆಚ್ಚುವರಿಯಾಗಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 208 ಮತ್ತು 209 ಹಾಗೂ ಸೆಕ್ಷನ್ 269ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.