ಮಂಗಳೂರು: ನಗರದ ಶರಬತ್‌ಕಟ್ಟೆ ಬಳಿ ಬುಧವಾರ ಸಂಜೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯನ್ನು ಹತ್ತಿರಕ್ಕೆ ಕರೆದು ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ಪ್ರದರ್ಶಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂದೂರು ಮರ್ಕೆರಾ ಹಿಲ್ಸ್ ನಿವಾಸಿ ಡೆವಿನ್ ಪಿಂಟೊ (29) ಬಂಧಿತ ಆರೋಪಿ. ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಈತ ಶರಬತ್‌ಕಟ್ಟೆ ಬಳಿ ಇದ್ದ. ಅಲ್ಲಿನ ರಸ್ತೆಯಲ್ಲಿ ಯುವತಿಯೊಬ್ಬಳು ನಡೆದು ಹೋಗುತ್ತಿದ್ದರು. ಆಕೆಯನ್ನು ಈತ ಕರೆದಿದ್ದ. ಸಹಾಯ ಯಾಚಿಸಬಹುದು ಎಂದು ತಿಳಿದು ಯುವತಿ ಆತನ ಸಮೀಪ ಹೋಗಿದ್ದರು. ಆಗ ಮೊಬೈಲ್‌ನಿಂದ ಆಕೆಗೆ ಅಶ್ಲೀಲ ವಿಡಿಯೊ ತೋರಿಸಿದ್ದ.
ತಕ್ಷಣ ಯುವತಿ ಕೂಗಿಕೊಳ್ಳುತ್ತಿದ್ದಂತೆ ಸಾರ್ವಜನಿಕರು ಗುಂಪುಗೂಡಿದರು. ಬಳಿಕ ನಡೆದ ಸಂಗತಿಯನ್ನು ಆಕೆ ತಿಳಿಸಿದರು. ಅಲ್ಲಿದ್ದವರು ಆರೋಪಿಯನ್ನು ಹಿಡಿದು ಮಂಗಳೂರು ಪೂರ್ವ (ಕದ್ರಿ) ಠಾಣೆ ಪೊಲೀಸರ ವಶಕ್ಕೆ ನೀಡಿದರು. ಬಳಿಕ ಯುವತಿ ಪಾಂಡೇಶ್ವರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ನಂತರ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.