ADVERTISEMENT

ಮಂಗಳೂರು | ಬ್ಯಾಡ್ಮಿಂಟನ್‌ ಹಣಾಹಣಿ– ರಂಗೇರಿದೆ ಕಡಲ ನಗರಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 5:52 IST
Last Updated 27 ಅಕ್ಟೋಬರ್ 2025, 5:52 IST
ಮಂಗಳೂರಿನಲ್ಲಿ ಸೋಮವಾರದಿಂದ ಪ್ರಾರಂಭವಾಗಲಿರುವ ‘ಚೀಫ್‌ ಮಿನಿಸ್ಟರ್ಸ್‌ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ 2025’ ಬ್ಯಾಡ್ಮಿಂಟನ್ ಟೂರ್ನಿಗಾಗಿ ಸಜ್ಜಾಗಿರುವ ಉರ್ವ ಒಳಾಂಗಣ ಕ್ರೀಡಾಂಗಣ  ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಂಗಳೂರಿನಲ್ಲಿ ಸೋಮವಾರದಿಂದ ಪ್ರಾರಂಭವಾಗಲಿರುವ ‘ಚೀಫ್‌ ಮಿನಿಸ್ಟರ್ಸ್‌ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ 2025’ ಬ್ಯಾಡ್ಮಿಂಟನ್ ಟೂರ್ನಿಗಾಗಿ ಸಜ್ಜಾಗಿರುವ ಉರ್ವ ಒಳಾಂಗಣ ಕ್ರೀಡಾಂಗಣ  ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್   

ಮಂಗಳೂರು: ಬ್ಯಾಡ್ಮಿಂಟನ್ ವರ್ಲ್ಡ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಆಶ್ರಯದಲ್ಲಿ ಸೋಮವಾರದಿಂದ ನಡೆಯುವ ‘ಚೀಫ್ ಮಿನಿಸ್ಟರ್ಸ್‌ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್‌ ಚಾಲೆಂಜ್‌ 2025’ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿ ಸಲುವಾಗಿ ಕಡಲ ನಗರಿ ಸಜ್ಜಾಗಿದೆ.  ಬಿಡಬ್ಲ್ಯುಎಫ್‌ ಅಂತರರಾಷ್ಟ್ರೀಯ ಟೂರ್ನಿಯು ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ, ಕರ್ನಾಟಕ ರಾಜ್ಯದಲ್ಲೇ ಮೊದಲ ಬಾರಿಗೆ ಈ ನಗರದಲ್ಲಿ ಆಯೋಜನೆಗೊಂಡಿದೆ.  

ಝಗಮಗಿಸುವ ವಿದ್ಯುದ್ದೀಪಗಳಿಂದ ಕಂಗೋಳಿಸುತ್ತಿರುವ ನಗರದ ಉರ್ವ ಪರಿಸರ ಈ ಟೂರ್ನಿಯಿಂದಾಗಿ ರಂಗೇರಿದೆ. ಉರ್ವ ಮಾರುಕಟ್ಟೆ ವೃತ್ತದಲ್ಲಿ ಬ್ಯಾಡ್ಮಿಂಟನ್‌ ಪಟುಗಳು ರ‍್ಯಾಕೆಟ್‌ ಬೀಸುತ್ತಿರುವ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಸೋಮವಾರ ಅನಾವರಣಗೊಳ್ಳಲಿದೆ. ಈ ಟೂರ್ನಿಗೆ ಆತಿಥ್ಯ ವಹಿಸಲಿರುವ ನಗರದ ಉರ್ವ ಒಳಾಂಗಣ ಕ್ರೀಡಾಂಗಣ ಸಕಲ ರೀತಿಯಲ್ಲಿ ಅಣಿಯಾಗಿದೆ.

ಭಾರತ ಬ್ಯಾಂಡ್ಮಿಂಟನ್‌ ಸಂಸ್ಥೆ, ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಹಾಗೂ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಆಶ್ರಯದಲ್ಲಿ ಇದೇ 27ರಿಂದ ನವೆಂಬರ್ 2ರವರೆಗೆ ನಡೆಯುವ ಈ ಟೂರ್ನಿಯು ಪುರುಷರ ಸಿಂಗಲ್ಸ್‌, ಡಬಲ್ಸ್‌, ಮಹಿಳೆಯರ ಸಿಂಗಲ್ಸ್‌, ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ ಹಣಾಹಣಿಗೆ ವೇದಿಕೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೂರ್ನಿಯನ್ನು ಸೋಮವಾರ ಉದ್ಘಾಟಿಸಲಿದ್ದಾರೆ. 

ADVERTISEMENT

ಟೂರ್ನಿಯಲ್ಲಿ ಭಾರತದ ಪ್ರಮುಖ ಬ್ಯಾಡ್ಮಿಂಟನ್ ಪಟುಗಳ ಜೊತೆಗೆ ಅಮೆರಿಕ, ಕೆನಡಾ, ಸಿಂಗಪುರ, ಥಾಯ್ಲೆಂಡ್‌ ಮತ್ತಿತರ ದೇಶಗಳ 400ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದಾರೆ. ಕೆಲವು ಆಟಗಾರರು ಈಗಾಗಲೇ ನಗರಕ್ಕೆ ಬಂದಿದ್ದು, ಅಭ್ಯಾಸದಲ್ಲಿ ನಿರತರಾಗಿದ್ದಾರೆ. 

ಮಾಲ್ಡೀವ್ಸ್‌ನ ಅಲಿ ಅಬ್ದುಲ್‌ ಕರೀಂ ಮುಖ್ಯ ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಬಾಲ ರಾಮಮೂರ್ತಿ ಮತ್ತು ರಾಜೀವ ಮೆಹ್ತಾ ಡೆಪ್ಯುಟಿ ರೆಫ್ರಿಯಾಗಿ, ಶಶಿರ್‌ಕಾಂತ್‌ ಖರೆ ಮ್ಯಾಚ್ ಕಂಟ್ರೋಲರ್‌ ಆಗಿ, ರಾಕೇಶ್ ಶೇಖರ್‌ ಕಾಂಪಿಟೀಷನ್‌ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಕಾರ್ಯದರ್ಶಿ ಸುಪ್ರೀತ್ ಆಳ್ವ ತಿಳಿಸಿದರು. 

ಸುಸಜ್ಜಿತ ಸೌಲಭ್ಯ: ಅಂತರರಾಷ್ಟ್ರೀಯ ದರ್ಜೆಯ ಟೂರ್ನಿಯನ್ನು ಆಯೋಜಿಸಲು ಅಗತ್ಯ ಇರುವ ಎಲ್ಲ ಸೌಕರ್ಯಗಳು ಸ್ಮಾರ್ಟ್‌ಸಿಟಿ ಯೋಜನೆಯಡಿ ಉರ್ವದಲ್ಲಿ ಒಟ್ಟು ₹39 ಕೋಟಿಯಲ್ಲಿ ನಿರ್ಮಾಣವಾಗಿರುವ ಈ ಒಳಾಂಗಣ ಕ್ರೀಡಾಂಗಣದಲ್ಲಿವೆ. ನೆಲ ಮಹಡಿಯ ಆರು ಹಾಗೂ ಮೂರನೇ ಮಹಡಿಯಲ್ಲಿ ಐದು ವುಡನ್‌ ಕೋರ್ಟ್‌ಗಳಿವೆ. ಅವುಗಳಿಗೆ ಸಿಂಥೆಟಿಕ್ ಮ್ಯಾಟ್ ಅಳವಡಿಸಲಾಗಿದೆ. ನೆಲಮಹಡಿಯಲ್ಲಿ 850 ಹಾಗೂ ಮೂರನೇ ಮಹಡಿಯಲ್ಲಿ 450 ಸೇರಿ ಒಟ್ಟು 1300 ಮಂದಿ ಪಂದ್ಯ ವೀಕ್ಷಿಸುವ ವ್ಯವಸ್ಥೆ ಇಲ್ಲಿದೆ. ಮಲ್ಟಿ ಜಿಮ್‌ ಸೌಕರ್ಯ, ನಾಲ್ಕು ಡಾರ್ಮೆಟ್ರಿಗಳು, ಕಾನ್ಫರೆನ್ಸ್‌ ಸಭಾಂಗಣ, ಬ್ಯಾಂಕ್ವೆಟ್‌ ಹಾಲ್ ಮತ್ತಿತರ ಸೌಕರ್ಯಗಳೂ ಇಲ್ಲಿವೆ ಎಂದು ಅವರು ಮಾಹಿತಿ ನೀಡಿದರು.

‘ಹುರುಪು ತುಂಬಲಿದೆ ಟೂರ್ನಿ’

ಈ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಯಾಗಿ ವರ್ಷ ಕಳೆಯುವ ಮುನ್ನವೇ ರಾಜ್ಯ ಮಟ್ಟದ ರಾಷ್ಟ್ರ ಮಟ್ಟದ ಟೂರ್ನಿಗಳನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈಗ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಯನ್ನೂ ಆಯೋಜಿಸಿದ್ದೇವೆ.  ಜಾಗತಿಕ ಮಟ್ಟದ ಪಂದ್ಯಗಳಲ್ಲಿ ಶ್ರೇಷ್ಠ ಆಟಗಾರರ ನಡುವಿನ ಸೆಣಸಾಟಗಳು ಈ  ಪ್ರದೇಶದ ಬ್ಯಾಡ್ಮಿಂಟನ್‌ ಪ್ರತಿಭೆಗಳಿಗೆ ಹುರುಪು ತುಂಬಲು ಹೊಸ ಆಟಗಾರರನ್ನು ಸೆಳೆಯಲು  ನೆರವಾಗಲಿವೆ’ ಎಂದು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.