
ಪುತ್ತೂರು: ಗಾಣಿಗ ಸಮಾಜದಿಂದಾಗಿ ಭಾರತದ ಹೆಸರು ವಿಶ್ವದಲ್ಲಿಯೇ ಚಿರಸ್ಥಾಯಿಯಾಗಿದೆ. ಗಾಣಿಗ ಸಮಾಜದ ಪುತ್ರಿನಿಂದಾಗಿ ದೇಶದಲ್ಲಿ ದೊಡ್ಡ ಬದಲಾವಣೆ ಉಂಟಾಗಿದೆ. ಭ್ರಷ್ಟಾಚಾರ ನಿರ್ಮೂಲನೆ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರದಾಸ್ ಮೋದಿ ಹೇಳಿದರು.
ಪುತ್ತೂರಿನ ಸಾಲ್ಮರದ ಕೊಟೇಚಾ ಸಭಾಂಗಣದಲ್ಲಿ ಭಾನುವಾರ ನಡೆದ ಅಂತರ ಜಿಲ್ಲಾಮಟ್ಟದ ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಬ್ಕಾ ಸಾಥ್, ಸಬ್ಕಾ ವಿಕಾಸ್‌ನಿಂದ ಭಾರತವನ್ನು ವಿಶ್ವವೇ ಗುರುತಿಸುವಂತಾಗಿದೆ. ಗಾಣಿಕ ಸಮಾಜಕ್ಕೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವ ತಾಕತ್ತು ಸಿಕ್ಕಿದೆ. ದೇಶದಾದ್ಯಂತ 14 ಕೋಟಿಯಷ್ಟು ಗಾಣಿಗ ಸಮಾಜದವರಿದ್ದೇವೆ. ರಾಮಾಯಣದಲ್ಲೂ ಗಾಣಿಗರ ಪಾತ್ರವಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲೂ ಗಾಣಿಗರ ಕೊಡುಗೆ ಇದೆ. ಆದರೆ, ಗಾಣಿಗ ಸಮಾಜದವರಾದ ನಾವು ಸಂಘಟಿತರಾಗಿಲ್ಲ ಎಂಬುದು ಸತ್ಯ. ನಾವಿಂದು ನಮ್ಮ ಇತಿಹಾಸವನ್ನು ಮರೆತಿದ್ದೇವೆ ಎಂದರು.
ಸದ್ಯ ನಾವೇ ರಾಜಕೀಯ ಪಕ್ಷಗಳ ಬಾಗಿಲು ಬಡಿಯುತ್ತಿದ್ದೇವೆ. ಗಾಣಿಗ ಸಮಾಜ ಸಂಘಟಿತರಾಗುವ ಮೂಲಕ ನಾವು ಏನೆಂದು ತೋರಿಸಬೇಕಾದ ಅವಶ್ಯಕತೆ ಇದೆ. ನಾವು ಸಂಘಟಿತರಾದರೆ ರಾಜಕೀಯ ಪಕ್ಷಗಳೇ ನಮ್ಮ ಮನೆ ಬಾಗಿಲು ಬಡಿಯುತ್ತಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಯುವಜನತೆ ಹೆಚ್ಚಾಗಿ ಉದ್ಯಮ ಕ್ಷೇತ್ರಕ್ಕೆ ಬರಬೇಕು. ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಂಕಲ್ಪ ಒಬ್ಬ ವ್ಯಕ್ತಿಯದ್ದಲ್ಲ. ಅದು ಇಡೀ ಭಾರತ ದೇಶದ ಸಂಕಲ್ಪವಾಗಿದೆ. ನಾವು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಾಗಿದ್ದು, ಮಹಿಳೆಯರು ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕಾಗಿದೆ. ಗಾಣಿಗ ಸಮಾಜ ಗಟ್ಟಿಯಾಗಬೇಕಾದರೆ ಅದಕ್ಕೆ ಹಿಂದುತ್ವದ ಹಿನ್ನಲೆ ಬೇಕು. ಜಿಲ್ಲೆಯ ಸಂಸ್ಕೃತಿಗೆ ಅನುಗುಣವಾಗಿ ವಿಕಸಿತ ಭಾರತದ ಕಡೆಗೆ ಹೆಜ್ಜೆ ಹಾಕಬೇಕಾದರೆ ನಮ್ಮಲ್ಲಿ ಒಗ್ಗಟ್ಟು ಅಗತ್ಯ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಮಾತನಾಡಿ, ಸಮುದಾಯದ ಅಭಿವೃದ್ಧಿಯಾಗಬೇಕಾದರೆ ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ನಾಯಕತ್ವ ಬೆಳೆಯಬೇಕು. ನ್ಯಾಯಾಂಗ ಹಾಗೂ ಕಾರ್ಯಾಂಗದಲ್ಲಿಯೂ ಗಾಣಿಗ ಸಮಾಜದವರು ಅಧಿಕಾರಿಗಳಾಗಿ ಬರಬೇಕು. ಗಾಣಿಗ ಸಮಾಜದ ವಿದ್ಯಾರ್ಥಿಗಳು ಈ ಬಗ್ಗೆ ಚಿಂತನೆ ನಡೆಸಬೇಕು. ಹೆಸರಿಗಾಗಿ ಸಂಘಟನೆ ಬೇಡ. ಸಮಾಜದ ಅಭಿವೃದ್ಧಿಗಾಗಿ ಸಂಘಟನೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಶಾಸಕ ಅಶೋಕ್‌ಕುಮಾರ್ ರೈ, ಮುಂಬೈ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಪಲ್ಯ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಅಖಿಲ ಕರ್ನಾಟಕ ಗಾಣಿಗ ಸಂಘದ ಎಂ.ಆರ್.ರಾಜಶೇಖರ್ ಗಾಣಿಗ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್‌ಕುಮಾರ್ ದಾಸ್, ಮುಂಬೈ ಉದ್ಯಮಿ ವಸಂತ ಜಿ.ಸಪಲ್ಯ, ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪ್ರಹ್ಲಾದ್ ಮೋದಿ ಪುತ್ರಿ ಸೋನಾಲ್ ಬೆನ್ ಮೋದಿ, ಗಾಣಿಗ ಸಮಾಜದ ಪ್ರಮುಖರಾದ ಮಾಧವ ಮಾವೆ, ಹರಿರಾಮಚಂದ್ರ, ಭುವನೇಶ್ ರಘು ಸಪಲ್ಯ, ವಿನಯಕುಮಾರ್ ಬಾರ್ಕೂರು ಭಾಗವಹಿಸಿದ್ದರು.
ಜಯಂತ ಉರ್ಲಾಂಡಿ ಸ್ವಾಗತಿಸಿದರು. ಲಕ್ಷ್ಮೀಪ್ರಸಾದ್ ಬೆಟ್ಟ ವಂದಿಸಿದರು. ದೀಪಕ್ ಅಡ್ಯಾರ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.