ADVERTISEMENT

ಅಧಿಕಾರ, ಹಣ, ಜನಪ್ರಿಯತೆಯ ದಾಹ ಬೇಡ: ವಿವೇಕ್‌ರಾಜ್ ಸಲಹೆ

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ‘ಯುಪಿಎಸ್‌ಸಿ ಪರೀಕ್ಷೆ; ಯಶಸ್ಸಿನ ಮಂತ್ರ’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 16:56 IST
Last Updated 12 ನವೆಂಬರ್ 2021, 16:56 IST
‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ‘ಇನ್‌ಸೈಟ್ಸ್‌ ಐಎಎಸ್’ ಸಂಸ್ಥೆಯ ಸಹಯೋಗದಲ್ಲಿ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಯುಪಿಎಸ್‌ಸಿ ಪರೀಕ್ಷೆ; ಯಶಸ್ಸಿನ ಮಂತ್ರ’ ತರಬೇತಿ ಕಾರ್ಯಾಗಾರವನ್ನು ಉದ್ಯಮಿ ವಿವೇಕ್‌ ರಾಜ್‌ ಉದ್ಘಾಟಿಸಿದರು. (ಎಡದಿಂದ) ಮಂಜುನಾಥ್‌, ಇನ್‌ ಸೈಟ್‌ನ ಶಮಂತ್‌ ಗೌಡ, ಪ್ರಸರಣ ವಿಭಾಗದ ಎಜಿಎಂ ಸುರೇಶ್‌, ಇನ್‌ ಸೈಟ್‌ನ ಸ್ಥಾಪಕ ಹಾಗೂ ನಿರ್ದೇಶಕ ವಿನಯ್‌ ಕುಮಾರ್‌ ಜಿ ಬಿ, ಮಂಗಳೂರು ಡಿಸಿಪಿ ಹರಿರಾಮ್‌ ಶಂಕರ್‌, ಅಲೋಷಿಯಸ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್‌ ಮಾರ್ಟಿಸ್‌ ಇದ್ದರು –ಪ್ರಜಾವಾಣಿ ಚಿತ್ರ
‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ‘ಇನ್‌ಸೈಟ್ಸ್‌ ಐಎಎಸ್’ ಸಂಸ್ಥೆಯ ಸಹಯೋಗದಲ್ಲಿ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಯುಪಿಎಸ್‌ಸಿ ಪರೀಕ್ಷೆ; ಯಶಸ್ಸಿನ ಮಂತ್ರ’ ತರಬೇತಿ ಕಾರ್ಯಾಗಾರವನ್ನು ಉದ್ಯಮಿ ವಿವೇಕ್‌ ರಾಜ್‌ ಉದ್ಘಾಟಿಸಿದರು. (ಎಡದಿಂದ) ಮಂಜುನಾಥ್‌, ಇನ್‌ ಸೈಟ್‌ನ ಶಮಂತ್‌ ಗೌಡ, ಪ್ರಸರಣ ವಿಭಾಗದ ಎಜಿಎಂ ಸುರೇಶ್‌, ಇನ್‌ ಸೈಟ್‌ನ ಸ್ಥಾಪಕ ಹಾಗೂ ನಿರ್ದೇಶಕ ವಿನಯ್‌ ಕುಮಾರ್‌ ಜಿ ಬಿ, ಮಂಗಳೂರು ಡಿಸಿಪಿ ಹರಿರಾಮ್‌ ಶಂಕರ್‌, ಅಲೋಷಿಯಸ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್‌ ಮಾರ್ಟಿಸ್‌ ಇದ್ದರು –ಪ್ರಜಾವಾಣಿ ಚಿತ್ರ   

ಮಂಗಳೂರು: ‘ಜನರ ಸೇವೆ ಮಾಡಬೇಕೆಂಬ ತುಡಿತ ಮತ್ತು ಸಂವಿಧಾನದ ಆಶಯಗಳನ್ನು ರಕ್ಷಿಸುವ ಬದ್ಧತೆ ಇದ್ದರೆ ಮಾತ್ರ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಮುಂದಾಗಿ’ ಎಂದು ಯುಪಿಎಸ್‌ಸಿ ಪರೀಕ್ಷೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ನೂರಾರು ವಿದ್ಯಾರ್ಥಿಗಳಿಗೆ ಯುವ ಉದ್ಯಮಿ, ‘ಪನಾಮಾ ಕಾರ್ಪೊರೇಷನ್’ ಅಧ್ಯಕ್ಷ ವಿವೇಕ್‌ರಾಜ್ ಸಲಹೆ ನೀಡಿದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ‘ಇನ್‌ಸೈಟ್ಸ್‌ ಐಎಎಸ್’ ಸಂಸ್ಥೆಯ ಸಹಯೋಗದಲ್ಲಿ ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಯುಪಿಎಸ್‌ಸಿ ಪರೀಕ್ಷೆ; ಯಶಸ್ಸಿನ ಮಂತ್ರ’ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಧಿಕಾರ, ಹಣ ಅಥವಾ ಪ್ರಚಾರ ಗಿಟ್ಟಿಸುವ ಉದ್ದೇಶ ಇಟ್ಟುಕೊಂಡು ನಾಗರಿಕ ಸೇವೆಯನ್ನು ಆಯ್ಕೆ ಮಾಡಬಾರದು. ಪ್ರಜಾಪ್ರಭುತ್ವದ ಮೌಲ್ಯ, ಜಾತ್ಯತೀತ ತತ್ವಗಳನ್ನು ರಕ್ಷಿಸುವ ಕಾಳಜಿಯುಳ್ಳವರು ಮಾತ್ರ ಇದನ್ನು ಆಯ್ಕೆ ಮಾಡಬೇಕು. ನಾಗರಿಕ ಸೇವೆಯಲ್ಲಿರುವರಿಗೆ ರಾಜಕೀಯ ಒತ್ತಡಗಳು ಸಾಮಾನ್ಯ. ಅದಕ್ಕೆ ಜಗ್ಗದೆ, ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿ ಕೆಲಸ ಮಾಡುವ ಮನೋಭಾವ ಇರಬೇಕು. ಪ್ರಚಾರ ಪಡೆಯಲು, ಹಣ ಗಳಿಸಲು ಬೇರೆ ಉದ್ಯೋಗಗಳಿವೆ’ ಎಂದರು.

ADVERTISEMENT

‘ನಾನೂ 2010ರಲ್ಲಿ ನಾಗರಿಕ ಸೇವೆ ಪರೀಕ್ಷೆಯನ್ನು ಎದುರಿಸಿದ್ದೆ. ಆದರೆ, ತೇರ್ಗಡೆ ಹೊಂದಲು ಸಾಧ್ಯವಾಗಲಿಲ್ಲ. ನಂತರ ಸ್ವಂತ ಉದ್ಯಮ ಆರಂಭಿಸಿ ಇಂದು ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದೇನೆ’ ಎಂದರು.

ಸಂತ ಅಲೋಶಿಯಸ್ ಕಾಲೇಜಿನ ಪ್ರಾಚಾರ್ಯ ಡಾ. ಪ್ರವೀಣ್ ಮಾರ್ಟಿಸ್ ಮಾತನಾಡಿ, ‘ಯುಪಿಎಸ್‌ಸಿ ಪರೀಕ್ಷೆ ತಯಾರಿ’ ಕುರಿತು ನಮ್ಮ ಕಾಲೇಜಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಖುಷಿಯ ವಿಚಾರ. ನಾಗರಿಕ ಸೇವೆ ದೇಶಸೇವೆ ಮಾಡಲು ಸಿಗುವ ಬಹುದೊಡ್ಡ ಅವಕಾಶ. ಕಾಲೇಜು ಹಂತದಲ್ಲಿ ಸಮಯ ವ್ಯರ್ಥ ಮಾಡದೆ, ಅವಕಾಶಗಳನ್ನು ಬಳಸಿಕೊಂಡು ನಾಗರಿಕ ಸೇವೆಗೆ ಸಿದ್ಧತೆ ಮಾಡಬೇಕು. ಸಮಾಜ ಸೇವೆಗೆ ಇದಕ್ಕಿಂತ ದೊಡ್ಡ ಅವಕಾಶ ಸಿಗುವುದಿಲ್ಲ’ ಎಂದರು.

ಮಂಗಳೂರು ಡಿಸಿಪಿ ಹರಿರಾಂ ಶಂಕರ್‌, ‘ಇನ್‌ಸೈಟ್ಸ್‌ ಐಎಎಸ್’ ಸಂಸ್ಥೆಯ ಸ್ಥಾಪಕ ವಿನಯ್ ಕುಮಾರ್ ಜಿ.ಬಿ, ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ಪತ್ರಿಕೆಗಳ ಪ್ರಸರಣ ವಿಭಾಗದ ಎಜಿಎಂ ಎಂ.ವಿ.ಸುರೇಶ್‌, ಹಿರಿಯ ವ್ಯವಸ್ಥಾಪಕ ಮುರಳೀಧರ, ಪ್ರಜಾವಾಣಿ ಬ್ಯುರೊ ಮುಖ್ಯಸ್ಥ ಉದಯ ಯು., ಡೆಕ್ಕನ್‌ ಹೆರಾಲ್ಡ್‌ ಬ್ಯುರೊ ಮುಖ್ಯಸ್ಥ ಹರ್ಷ, ‘ಇನ್‌ಸೈಟ್ಸ್‌ ಐಎಎಸ್’ ಸಂಸ್ಥೆಯ ಶರತ್‌ ಕುಮಾರ್‌, ಶಮಂತ್ ಗೌಡ ಇದ್ದರು. ಮಂಜುನಾಥ್‌ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳ ಸಾಲು
ಮಂಗಳೂರು: ‘
ಯುಪಿಎಸ್‌ಸಿ ಪರೀಕ್ಷೆಯ ಸಿದ್ಧತೆ, ಪೂರ್ವತಯಾರಿ ಹೇಗಿರಬೇಕು ಎಂಬ ಮಾಹಿತಿ ಪಡೆಯುವ ಉದ್ದೇಶದಿಂದ ಬೆಳಿಗ್ಗೆ 8 ಗಂಟೆಗೆ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದ ಎದುರು ವಿದ್ಯಾರ್ಥಿಗಳ ದಂಡು ನೋಂದಣಿಗಾಗಿ ಸರದಿ ಸಾಲಿನಲ್ಲಿ ನೆರೆದಿತ್ತು.

ದೂರದೂರದ ಊರುಗಳಿಂದ ವಿದ್ಯಾರ್ಥಿಗಳು ಬಂದಿದ್ದರು. ‘ಯುಪಿಎಸ್‌ಸಿ ಪರೀಕ್ಷೆ; ಯಶಸ್ಸಿನ ಸಿದ್ಧತೆಗೆ ಪ್ರಾತ್ಯಕ್ಷಿಕೆಗಾಗಿ ಎರಡು ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 10 ಗಂಟೆಗೆಗಾಗಲೇ ಸುಮಾರು 700ಕ್ಕೂ ಹೆಚ್ಚು ಮಂದಿ ಸ್ಥಳದಲ್ಲಿಯೇ ಹೆಸರು ನೋಂದಣಿ ಮಾಡಿಕೊಂಡಿದ್ದರು. ಸ್ಪರ್ಧಾತ್ಮಕ ಪರೀಕ್ಷೆಯ ಒಲವು, ಹಸಿವು, ತಿಳಿದುಕೊಳ್ಳುವ ಉತ್ಸಾಹ ಎಲ್ಲ ವಿದ್ಯಾರ್ಥಿಗಳ ಮುಖದಲ್ಲಿ ಮಡುವು ಗಟ್ಟಿತ್ತು.

ಸುಳ್ಯ, ವಿಟ್ಲ, ಬಿ.ಸಿ. ರೋಡ್‌, ಬೈಂದೂರು, ಪಡುಬಿದ್ರಿ, ಮಂಗಳೂರು, ಕಟೀಲ್‌ ಹಾಗೂ ಮಿಲಾಗ್ರಿಸ್‌, ಕೆನರಾ, ಪದುವಾ, ಅಲೋಶಿಯೇಸ್‌ ಕಾಲೇಜುಗಳಿಂದ ಪದವಿ, ಸ್ನಾತಕೋತ್ತರ, ಪಿಯುಸಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಬಂದಿದ್ದರು. ವಿದ್ಯಾರ್ಥಿಗಳ ಜತೆಗೆ ಪೋಷಕರು ಕೂಡ ಬಂದದ್ದು ವಿಶೇಷವಾಗಿತ್ತು, 2 ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಜತೆಗೆ ಎಲ್ಇಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಸಂವಾದ ಮುಗಿದ ಕೂಡಲೇ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಇದ್ದ ಗೊಂದಲಗಳನ್ನು ಪರಿಹರಿಸಿಕೊಳ್ಳಲು ವಿದ್ಯಾರ್ಥಿಗಳಿಂದ ಚಿಮ್ಮಿ ಬಂದ ಪ್ರಶ್ನೆಗಳಿಗೆ ಅತಿಥಿಗಳಿಂದ ಉತ್ತರವೂ ಸಿಕ್ಕವು.

***

ನಾಗರಿಕ ಸೇವೆಗೆ ಹೋಗಲು ಇಂದಿನ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜಕ್ಕೆ ಉನ್ನತ ಕೊಡುಗೆ ನೀಡಬೇಕು.
-ವಿವೇಕ್‌ರಾಜ್,ಪನಾಮಾ ಕಾರ್ಪೊರೇಷನ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.