ಮೂಡುಬಿದಿರೆ: ‘ಕಣ್ಣು ನಮ್ಮ ದೇಹದ ಪ್ರಮುಖ ಅಂಗ. ಜಗತ್ತಿನಲ್ಲಿರುವ ಎಲ್ಲಾ ವಸ್ತುಗಳನ್ನು ನೋಡಲು, ಸೌಂದರ್ಯ ಆಸ್ವಾದಿಸಲು ಕಣ್ಣುಬೇಕು. ಕಣ್ಣಿನ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಪ್ರಸಾದ್ ನೇತ್ರಾಲಯದ ಕೇಂದ್ರವು ಮೂಡುಬಿದಿರೆಯಲ್ಲಿ ಆರಂಭವಾಗಿರುವುದು ಇಲ್ಲಿನ ಜನರಿಗೆ ವರಪ್ರಸಾದವಾಗಲಿದೆ’ ಎಂದು ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಬಡಗಬಸದಿ ಬಳಿಯ ಫಾರ್ಚೂನ್-2 ಕಟ್ಟಡಲ್ಲಿ ಭಾನುವಾರ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಆಸ್ಪತ್ರೆಯನ್ನು ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ ಆಳ್ವ ಮಾತನಾಡಿ, ‘ಕಣ್ಣಿನ ಆರೋಗ್ಯವು ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ದೇಶದಲ್ಲಿ ಸುಮಾರು ಮೂರೂವರೆ ಕೋಟಿ ಜನರಿಗೆ ಕಣ್ಣಿನ ಸಮಸ್ಯೆ ಇದೆ. ಕಣ್ಣಿನ ಆರೋಗ್ಯ ಕಾಯ್ದುಕೊಳ್ಳುವುದು ಅಗತ್ಯ’ ಎಂದರು.
‘ವೈದ್ಯರು ರೋಗಿಯನ್ನು ತಾಳ್ಮೆಯಿಂದ ಪರೀಕ್ಷಿಸಿ ಆತನಿಗೆ ಧೈರ್ಯ ತುಂಬಿದಾಗ ರೋಗಿ ಆತಂಕ ಪಡುವುದು ಕಡಿಮೆಯಾಗುತ್ತದೆ. ಪ್ರಸಾದ್ ನೇತ್ರಾಲಯದಿಂದ ಮೂಡುಬಿದಿರೆಉ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಸಿಗಲಿ ಎಂದು ಶಾಸಕ ಉಮಾನಾಥ ಕೋಟ್ಯಾನ್ ಆಶಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ, ಪುರಸಭೆ ಸದಸ್ಯ ಪಿ.ಕೆ ಥಾಮಸ್, ಉದ್ಯಮಿ ಮಹೇಂದ್ರವರ್ಮ ಜೈನ್, ರಘುರಾಮ ರಾವ್, ಪ್ರಸಾದ್ ನೇತ್ರಾಲಯದ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ಡಾ.ಸ್ಮೃತಿ, ಡಾ.ವಿಕ್ರಮ್ ಜೈನ್, ಡಾ.ಹರೀಶ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕೂಡ್ಲು ಪ್ರಾಸ್ತಾವಿಕವಾಗಿ ಮಾತನಾಡಿ, ‘ ಕಣ್ಣಿನ ಚಿಕಿತ್ಸೆಗೆ ಸಂಬಂಧಿಸಿದ ಉತ್ಕೃಷ್ಟ ದರ್ಜೆಯ ವೈದ್ಯಕೀಯ ಸೌಲಭ್ಯ ನಮ್ಮಲ್ಲಿ ಸಿಗಲಿದೆ’ ಪ್ರೊ.ಬಾಲಕೃಷ್ಣ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.