ADVERTISEMENT

ಕಕ್ಯಪದವು: ‘ಸತ್ಯ-ಧರ್ಮ ಜೋಡುಕರೆ ಕಂಬಳ’ಕ್ಕೆ ಸಿದ್ಧತೆ

ಮೋಹನ್ ಕೆ.ಶ್ರೀಯಾನ್
Published 29 ನವೆಂಬರ್ 2024, 6:23 IST
Last Updated 29 ನವೆಂಬರ್ 2024, 6:23 IST
ಬಂಟ್ವಾಳ ತಾಲ್ಲೂಕಿನ ಉಳಿ ಗ್ರಾಮದ ಕಕ್ಯಪದವು ಮೈರ ಬರ್ಕೆಜಾಲು ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ 12ನೇ ವರ್ಷದ ಹೊನಲು ಬೆಳಕಿನ ‘ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ’ಕ್ಕೆ ಕರೆ ಸಿದ್ಧತೆಯಲ್ಲಿದೆ
ಬಂಟ್ವಾಳ ತಾಲ್ಲೂಕಿನ ಉಳಿ ಗ್ರಾಮದ ಕಕ್ಯಪದವು ಮೈರ ಬರ್ಕೆಜಾಲು ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ 12ನೇ ವರ್ಷದ ಹೊನಲು ಬೆಳಕಿನ ‘ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ’ಕ್ಕೆ ಕರೆ ಸಿದ್ಧತೆಯಲ್ಲಿದೆ   

ಬಂಟ್ವಾಳ: ಇಲ್ಲಿನ ಉಳಿ ಗ್ರಾಮದ ಕಕ್ಯಪದವು ಮೈರ ಬರ್ಕೆಜಾಲು ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ 12ನೇ ವರ್ಷದ ಹೊನಲು ಬೆಳಕಿನ ‘ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳ‘ ನ.30ರಂದು ನಡೆಯಲಿದ್ದು, ಭರದಿಂದ ಸಿದ್ಧತೆ ನಡೆಯುತ್ತಿದೆ.

ಈಗಾಗಲೇ ಗೆಳೆಯರ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು ಕರೆ ದುರಸ್ತಿ ಮತ್ತು ಪರಿಸರ ಸ್ವಚ್ಛಗೊಳಿಸಲು ಶ್ರಮದಾನ ನಡೆಸುತ್ತಿದ್ದಾರೆ.

12 ವರ್ಷಗಳಿಂದ ಕಕ್ಯಪದವು ಮೈರ ಬರ್ಕೆಜಾಲು ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಹೆಸರಿನಲ್ಲಿ ಕಂಬಳ ಕೂಟ ನಡೆಯುತ್ತಿದ್ದು, ಪ್ರಸಕ್ತ ಸಾಲಿನ 25 ಕಂಬಳ ಕೂಟಗಳ ಪೈಕಿ ಯುವಕ ಸಂಘವೊಂದು ಕಂಬಳ ಆಯೋಜಿಸುತ್ತಿರುವ ಏಕೈಕ ಕಂಬಳ ಇದಾಗಿದೆ. ಈ ಕಾರಣದಿಂದ ಕಕ್ಯಪದವು ಕಂಬಳ ವಿಶೇಷ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕಂಬಳ ತೀರ್ಪುಗಾರ ವಿಜಯ ಕುಮಾರ್ ಕಂಗಿನ ಮನೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

30ರಂದು ನಡೆಯುವ ಕಂಬಳಕ್ಕೆ ರಾಘವೇಂದ್ರ ಭಟ್ ಕೊಡಂಬೆಟ್ಟು ಪೌರೋಹಿತ್ಯದಲ್ಲಿ ಉದ್ಯಮಿ ವಿಜಯ ವಿ.ಕೋಟ್ಯಾನ್ ಮತ್ತು ರೋಹಿತ್ ಪೂಜಾರಿ ಉಡ್ಕುಂಜ ಚಾಲನೆ ನೀಡುವರು. ಕೃಷಿಕ ಶಿವಪ್ಪ ಪೂಜಾರಿ ಜೇಡರಬೆಟ್ಟು ಮತ್ತು ಗೆಳೆಯರ ಬಳಗದ ಅಧ್ಯಕ್ಷ ದಿನೇಶ್ ಪೂಜಾರಿ ಕುಕ್ಕಾಜೆ ಸಭಾ ಕಾರ್ಯಕ್ರಮ ಉದ್ಘಾಟಿಸುವರು.

ಸಂಜೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದು, ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲು, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮುಖ್ಯಮಂತ್ರಿಯ ಮಾಜಿ ಆಪ್ತ ಕಾರ್ಯದರ್ಶಿ ಜಗನ್ನಾಥ ಬಂಗೇರ ನಿರ್ಮಾಲ್‌ ಭಾಗವಹಿಸಲಿದ್ದಾರೆ.

ಈ ಬಾರಿ ಒಟ್ಟು 200 ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ ಬಜ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅವಿಭಜಿತ ಜಿಲ್ಲೆಯಲ್ಲಿ ಈ ಹಿಂದೆ ಲಯನ್ಸ್ ಕ್ಲಬ್ ವತಿಯಿಂದ ಕಂಬಳದ ಬಹುಮಾನವನ್ನು ಪ್ರಾಯೋಜಿಸಲಾಗುತ್ತಿತ್ತು. ಬಂಟ್ವಾಳ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಕಳೆದ ತಿಂಗಳು ಸಬ್ ಜ್ಯೂನಿಯರ್ ವಿಭಾಗದಲ್ಲಿ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ‘ಮರಿ ಕೋಣಗಳ ಕಂಬಳ ಕೂಟ’ ಆಯೋಜಿಸಿ ಗಮನ ಸೆಳೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.