ADVERTISEMENT

ಎಸ್‌ವೈಎಸ್‌ನಿಂದ ಪ್ರವಾದಿಯ ‍ಸ್ಮರಣೆ; ‘ಹುಬ್ಬುರ್ರಸೂಲ್’ಗೆ ರ‍್ಯಾಲಿಯ ಮೆರುಗು

ಭಕ್ತಿಭಾವದ ವಾತಾವರಣ ಸೃಷ್ಟಿಸಿದ ಮೌಲೂದ್‌

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 4:17 IST
Last Updated 2 ಸೆಪ್ಟೆಂಬರ್ 2025, 4:17 IST
ಹುಬ್ಬುರ್ರಸೂಲ್ ಸಮಾವೇಶದಲ್ಲಿ ಉಡುಪಿ ಖಾಝಿ ಮಾಣಿ ಅಬ್ದುಲ್ ಹಮೀದ್ ಮಾತನಾಡಿದರು
ಹುಬ್ಬುರ್ರಸೂಲ್ ಸಮಾವೇಶದಲ್ಲಿ ಉಡುಪಿ ಖಾಝಿ ಮಾಣಿ ಅಬ್ದುಲ್ ಹಮೀದ್ ಮಾತನಾಡಿದರು   

ಮಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ, ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್‌ ಮತ್ತು ಮುಸ್ಲಿಂ ಜಮಾತ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಗಳು ಪ್ರವಾದಿಯ 1500ನೇ ಜನ್ಮದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಹುಬ್ಬುರ್ರಸೂಲ್ ಸಮಾವೇಶಕ್ಕೆ ಇಲಲ್ ಹಬೀಬ್ ಮಿಲಾದ್ ರ‍್ಯಾಲಿ ಮೆರುಗು ತುಂಬಿತು.

ಸೇಂಟ್ ಅಲೋಶಿಯಸ್ ಕಾಲೇಜು ಮುಂಭಾಗದಿಂದ ಸಂಜೆ ಆರಂಭಗೊಂಡ ಮೆರವಣಿಗೆ ಹಂಪನಕಟ್ಟೆಯ ಮೂಲಕ ಪುರಭವನದಲ್ಲಿ ಕೊನೆಗೊಂಡಿತು. ದಫ್‌ನ ಲಯಕ್ಕೆ ಹೆಜ್ಜೆ ಹಾಕಿದ ಸ್ಕೌಟ್ ವಿದ್ಯಾರ್ಥಿಗಳು ಶಿಸ್ತಿನಿಂದ ಮುನ್ನಡೆದರೆ, ತಾಲೀಮ್ ಮೂಲಕ ಸಮರ ಕಲೆಯನ್ನು ಪ್ರದರ್ಶಿಸಿದ ಯುವಕರು ನೋಡುಗರ ಕಣ್ಮನ ತಣಿಸಿದರು. 

ಸಮಾವೇಶದ ದುವಾದಲ್ಲಿ ಉಲೆಮಾ ಮತ್ತು ಉಮರಾಗಳ ಭಾಷಣಕ್ಕೂ ಮೊದಲು ನಡೆದ ಮೌಲೂದ್‌ ಭಕ್ತಿಭಾವದ ವಾತಾವರಣ ಸೃಷ್ಟಿಸಿತು. ಉಡುಪಿ ಖಾಜಿ ಮಾಣಿ ಅಬ್ದುಲ್ ಹಮೀದ್ ಮಾತನಾಡಿ ಸಮಾಜದಲ್ಲಿ ಸೌಹಾರ್ದ ತುಂಬಬೇಕು, ಆ ಮೂಲಕ ಎಲ್ಲರೂ ಸನ್ಮಾರ್ಗದಲ್ಲಿ ನಡೆಯುವಂತಾಗಬೇಕು ಎಂದರು.

ADVERTISEMENT

ಸಮಾವೇಶ ಉದ್ಘಾಟಿಸಿದ ಎಸ್‌ವೈಎಸ್‌ ರಾಜ್ಯ ಘಟಕದ ಕಾರ್ಯದರ್ಶಿ ಕೆಎಂ ಅಬೂಬಕ್ಕರ್ ಸಿದ್ದಿಕ್ ಮೋಂಟುಗೋಳಿ ಪ್ರವಾದಿಯ ಸಂದೇಶಗಳು ನಿರ್ದಿಷ್ಟ ಸಮುದಾಯಕ್ಕೆ ಸೀಮಿತ ಅಲ್ಲ ಎಂದರು.

‘ಬಡವರ ಸೇವೆ ಮಾಡುವುದೇ ಇಸ್ಲಾಂನ ಮೂಲ ತತ್ವ. ಸೇವೆಯ ಜೊತೆಯಲ್ಲಿ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಸುತ್ತ ಇರುವ ಹಿಂದೂಗಳನ್ನು ಬದುಕಲು ಬಿಡಬೇಕು, ಅವರು ದೇವಾಲಯಗಳಿಗೆ ಹೋಗಲು ಅನುವು ಮಾಡಿಕೊಡಬೇಕು’ ಎಂದರು. 

ಸಮಾವೇಶ ಸಮಿತಿಯ ಕಾರ್ಯದರ್ಶಿ ಶೇಕ್‌ ಬಾವಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಜಮೀಯತ್ ಉಲ್ ಉಲೆಮಾದ ಕಾರ್ಯದರ್ಶಿ ಪೇರೂಡ್‌ ಅಬ್ದುಲ್‌ ರಹಿಮಾನ್ ಸಂದೇಶ ಭಾಷಣ ಮಾಡಿದರು. ವಕ್ಫ್‌ ಮಂಡಳಿ ಜಿಲ್ಲಾ ಅಧ್ಯಕ್ಷ ನಾಸಿರ್ ಲಕ್ಕಿ ಸ್ಟಾರ್, ಎಸ್‌ವೈಎಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ, ಎಂಎಸ್‌ಎಂ ಅಬ್ದುಲ್ ರಶೀದ್ ಗೈನಿ ಉಸ್ತಾದ್‌, ಕೆಕೆಎಂ ಮೊಹಿದಿನ್‌, ಅಶ್ರಫ್ ಮಲ್ಲೂರು, ಸೂರಿಬೈಲ್ ಮಹಮ್ಮದ್‌ ಅಲಿ, ಹೈದರ್ ಪರ್ತಿಪಾಡಿ, ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ, ಬಶೀರ್ ಅಹಮದ್ ಪಂಜಿಮೊಗರು, ಹನೀಫ್ ಬಜಪೆ, ಹನೀಫ್ ಉಳ್ಳಾಲ, ಮುಹಮ್ಮದ್ ಆಶಿಫ್ ಕೃಷ್ಣಾಪುರ, ರವೂಫ್ ಹಿಮಮಿ ಹಳೆಯಂಗಡಿ ಮತ್ತಿತರರು ಪಾಲ್ಗೊಂಡಿದ್ದರು.

ಜಿಲ್ಲಾ ಮಟ್ಟದ ಸಾಂತ್ವನ ಇಸಾಬಾ ಕೇಂದ್ರ ಶೀಘ್ರ ಆರಂಭ. ಈಗಾಗಲೇ ವೆನ್ಲಾಕ್ ಆಸ್ಪತ್ರೆ ಮತ್ತಿತರ ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅನಾರೋಗ್ಯಕ್ಕೆ ತುತ್ತಾಗುವವರಿಗೆ ನೆರವು ನೀಡಲಾಗುತ್ತಿದೆ. ಅದಕ್ಕಾಗಿ ಇಸಾಬಾ ಹೆಲ್ಪ್‌ ಡೆಸ್ಕ್‌ ಕಾರ್ಯನಿರ್ವಹಿಸುತ್ತಿದೆ ಎಂದು ಸಮಾವೇಶದಲ್ಲಿ ಘೋಷಿಸಲಾಯಿತು.

ದುಂದುವೆಚ್ಚದ ಮದುವೆಗಳನ್ನು ನಿಲ್ಲಿಸುವುದಕ್ಕಾಗಿ ಸರಳ ವಿವಾಹಗಳಿಗೆ ಎಸ್‌ವೈಎಸ್‌ ಪ್ರೋತ್ಸಾಹ ನೀಡುತ್ತಿದೆ. ಮಾದರಿ ಮದುವೆ ಎಂಬ ನೂರು ದಿನಗಳ ಅಭಿಯಾನ ಸದ್ಯದಲ್ಲೇ ಆರಂಭವಾಗಲಿದೆ.
ಅಬೂಬಕ್ಕರ್ ಸಿದ್ದಿಕ್ ಮೋಂಟುಗೋಳಿ ಎಸ್‌ವೈಎಸ್‌ ಕಾರ್ಯದರ್ಶಿ

‘ಇಸ್ಲಾಂ ಕುರಿತು ವಿವರ ನೀಡಿ’:

ಧರ್ಮ ಎಂಬ ಪದ ಈಚೆಗೆ ವಿವಾದಗಳನ್ನು ಹುಟ್ಟುಕಾಕುತ್ತಿದೆ. ಧರ್ಮ ಬೇಕೇ ಬೇಡವೇ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಇಸ್ಲಾಂ ಧರ್ಮದ ಅಗತ್ಯ ಏನಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಸ್ಲಾಂ ಬಗ್ಗೆ ಅಪನಂಬಿಕೆಯ ಮಾತುಗಳೂ ಹರಡುತ್ತಿವೆ. ಇಂಥ ಸಂದರ್ಭದಲ್ಲಿ ಈ ಧರ್ಮದ ತಿರುಳನ್ನು ಎಲ್ಲರಿಗೂ ತಿಳಿಯಪಡಿಸುವ ಕಾರ್ಯ ಆಗಬೇಕು ಎಂದು ಎಸ್‌ವೈಎಸ್‌ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದಿಕ್ ಮೋಂಟುಗೋಳಿ ಹೇಳಿದರು. ಮಾತುಗಳು ಈಗ ಜಗಳವನ್ನು ಹುಟ್ಟುಹಾಕುತ್ತಿವೆ. ಮನೆಯಿಂದ ಹಿಡಿದು ರಾಷ್ಟ್ರಗಳ ನಡುವಿನ ಜಗಳಕ್ಕೂ ಕೊಳಕು ಮಾತುಗಳೇ ಕಾರಣ ಆಗುತ್ತಿವೆ. ಇದು ಇಲ್ಲದಾಗಬೇಕಾದರೆ ಒಳ್ಳೆಯ ಮಾತುಗಳನ್ನಾಡಬೇಕು ಎಂಬ ಸಿದ್ಧಾಂತ ಹೊಂದಿರುವ ಇಸ್ಲಾಂ ಧರ್ಮ ಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.