ಮಂಗಳೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಹಿರಿಯ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮವು ಮಂಗಳವಾರ ಇಲ್ಲಿನ ನದಿ ಹಾಗೂ ಕಡಲಲ್ಲಿ ಸಂಚರಿಸುತ್ತಿರುವ ಅಬ್ಬಕ್ಕ ಕ್ವೀನ್ ಕ್ರೂಸ್‌ನಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಮಾತನಾಡಿ, ‘ಕಟ್ ಆಂಡ್ ಪೇಸ್ಟ್’ ಪತ್ರಿಕೋದ್ಯಮ ಅಲ್ಲ. ತನಿಖೆ, ವಸ್ತುನಿಷ್ಠ ವರದಿ, ನಿಷ್ಠುರತೆ, ಹೊಸ ವಿಚಾರಗಳು ಪತ್ರಿಕೋದ್ಯಮದ ಘನತೆ ಹೆಚ್ಚಿಸಿವೆ’ ಎಂದರು.
‘ಮಂಗಳೂರಿನ ಕಡಲ ಹಾಗೂ ನದಿ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.
ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ‘ಸತ್ಯವನ್ನು ಸಮಾಜಕ್ಕೆ ತೋರಿಸುವವರು ಪತ್ರಕರ್ತರು. ಜಾಗೃತಿ ಮೂಡಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು. ಮಂಗಳೂರು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೊಸ ಯೋಜನೆಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಪತ್ರಕರ್ತರಾದ ರಿಚರ್ಡ್ ಲಸ್ರಾದೋ, ಜನಾರ್ದನ ಎಸ್. ಪುರಿಯ, ಆರ್.ಎನ್. ಪೂವಣಿ ಉಜಿರೆ, ರಾಜಾ ಬಂಟ್ವಾಳ್, ಹಮೀದ್ ವಿಟ್ಲ, ಜಯಪ್ರಕಾಶ್ ಕುಕ್ಕೇಟಿ, ಯು.ಎಲ್. ಉದಯಕುಮಾರ್ ಮತ್ತು ಲಕ್ಷ್ಮಣ್ ಕುಂದರ್ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಬಂಟ್ವಾಳ್, ರಾಜ್ಯ ಘಟಕದ ಅಧ್ಯಕ್ಷ ಬಿ. ನಾರಾಯಣ, ಗೌರವಾಧ್ಯಕ್ಷ ಕೆ.ವಿ. ರಾಜೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ನರೇಂದ್ರನಾಥ್, ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, ಉಪಾಧ್ಯಕ್ಷ ಈ.ಟಿ.ಕೇರ್ ರಾಜು, ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಜಯಕುಮಾರ್ ಕೆ., ಜಿಲ್ಲಾ ಸಮಿತಿಯ ಕೋಶಾಧಿಕಾರಿ ಜ್ಯೋತಿಪ್ರಕಾಶ್ ಪುಣಚ, ಜೊತೆ ಕಾರ್ಯದರ್ಶಿ ಈಶ್ವರ ವಾರಣಾಸಿ, ಉಪಾಧ್ಯಕ್ಷ ಗಿರಿಧರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಕೆನ್ಯೂಟ್ ಪಿಂಟೊ, ಗೌತಮ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್, ಜ್ಯೋತಿ ಪ್ರಕಾಶ್ ಪುಣಚ ಇದ್ದರು.
ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರ ಪೂಜಾರಿ, ‘ಅಭಿವ್ಯಕ್ತಿ -ತತ್ವ ಮತ್ತು ಆಚರಣೆ’ ಎನ್ನುವ ವಿಚಾರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಅಬ್ಬಕ್ಕ ಕ್ವೀನ್ ಕ್ರೂಸ್ ಮೂಲಕ ಮಂಗಳೂರಿನ ಬೊಕ್ಕಪಟ್ಣದಿಂದ ಆರಂಭಿಸಿ ನದಿ-ಕಡಲ ನೀರ ನಡುವೆ ಸಂಚರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.