ADVERTISEMENT

ಕಲ್ಲಬೆಟ್ಟು ಸಹಕಾರ ಸಂಘ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:29 IST
Last Updated 28 ಸೆಪ್ಟೆಂಬರ್ 2025, 5:29 IST
ಮೂಡುಬಿದಿರೆಯ ಕಲ್ಲಬೆಟ್ಟು ಸಹಕಾರ ಸಂಘದ ಸಿಇಒ ಅವರ ಹಿಂಬಡ್ತಿ ವಿರೋಧಿಸಿ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು
ಮೂಡುಬಿದಿರೆಯ ಕಲ್ಲಬೆಟ್ಟು ಸಹಕಾರ ಸಂಘದ ಸಿಇಒ ಅವರ ಹಿಂಬಡ್ತಿ ವಿರೋಧಿಸಿ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು   

ಮೂಡುಬಿದಿರೆ: ಕಲ್ಲಬೆಟ್ಟು ಸೇವಾ ಸಹಕಾರ ಸಂಘದ ಸಿಇಒ ಅವರಿಗೆ ಹಿಂಬಡ್ತಿ ನೀಡಿದ್ದನ್ನು ಖಂಡಿಸಿ ಸಂಘದ ಸದಸ್ಯರು ಶನಿವಾರ ಸಂಘದ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ರೆಜಿಸ್ಟ್ರಾರ್‌ ತ್ರಿವೇಣಿ ಅವರಿಗೆ ಕರೆ ಮಾಡಿ ಕಲ್ಲಬೆಟ್ಟು ಸಹಕಾರ ಸಂಘದ ಸಿಇಒ ಅವರಿಗೆ ಹಿಂಬಡ್ತಿ ನೀಡಿರುವ ಕಾರಣ ಕೇಳಿದರು.

‘ಶುಕ್ರವಾರ ಸಂಜೆ ಎರಡು ಬಾರಿ ಕರೆ ಮಾಡಿ ಮಾಹಿತಿ ಕೇಳಿದಾಗ ಕರೆ ಸ್ವೀಕರಿಸದೆ ಅಗೌರವ ತೋರಿದ್ದೀರಿ. ಪ್ರಕರಣವನ್ನು ಸರಿಯಾಗಿ ತನಿಖೆ ಮಾಡದೆ ಒತ್ತಡಕ್ಕೊಳಗಾಗಿ ಸಿಇಒ ವಿರುದ್ಧ ಕ್ರಮ ಕೈಗೊಂಡಿದ್ದೀರಿ. ನಿಮ್ಮ ವಿರುದ್ಧ ದೂರು ನೀಡುತ್ತೇನೆ. ಶಾಸಕರಿಗೆ ಅಗೌರವ ತೋರಿದಕ್ಕೆ ಹಕ್ಕುಚ್ಯುತಿ ಮಂಡಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಸಿಇಒ ವಿರುದ್ಧ ಹೊರಡಿಸಿದ ಆದೇಶವನ್ನು ಹಿಂಪಡೆಯುವಂತೆ ಅವರು ತಿಳಿಸಿದರು.

ಸಂಘದ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಮಾತನಾಡಿ, ಕಲ್ಲಬೆಟ್ಟು ಸಹಕಾರ ಸಂಘದ ಸಿಇಒ ಅವರನ್ನು ನೇಮಕ ಮಾಡುವುದು ಅಥವಾ ಅಮಾನತು ಮಾಡುವ ಅಧಿಕಾರ ಇರುವುದು ಆಡಳಿತ ಮಂಡಳಿಗೆ. ಆದರೆ, ಆಡಳಿತಾಧಿಕಾರಿ ಮೇಲಧಿಕಾರಿಗಳ ಒತ್ತಡಕ್ಕೆ ಮಣಿದು ಶಿಸ್ತುಕ್ರಮ ಕೈಗೊಂಡಿದ್ದಾರೆ. ಅದಕ್ಕೆ ಸಮರ್ಪಕ ಕಾರಣ ನೀಡಿಲ್ಲ. ಹಿಂಬಡ್ತಿ ಆದೇಶವನ್ನು ರದ್ದುಪಡಿಸದಿದ್ದರೆ ಕಲ್ಲಬೆಟ್ಟು ಸಹಕಾರ ಸಂಘವನ್ನು ಉಳಿಸಲು ನಾವು ಕಾನೂನು ರೀತಿಯಲ್ಲಿ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

ಬ್ಯಾಂಕ್‌ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಮಾಜಿ ಉಪಾಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ, ನಿರ್ದೇಶಕರು, ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.