ವಿಟ್ಲ: ಉದ್ದೇಶಿತ 400 ಕೆ.ವಿ ವಿದ್ಯುತ್ ಮಾರ್ಗ ನಿರ್ಮಾಣ ಯೋಜನೆಯನ್ನು ವಿರೋಧಿಸಿ ಗುರುವಾರ ಇಲ್ಲಿನ ಮಂಗಳಪದವಿನಲ್ಲಿ ಹಿಂದೂ ಹಾಗೂ ರೈತಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.
ಧಾರ್ಮಿಕ ಚಿಂತಕ ಮಂಜುನಾಥ ಉಡುಪ ಮಾತನಾಡಿ, ಯಾವುದೇ ಕಾರಣಕ್ಕೂ ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಹೇಳಿದರು.
ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಇಲಾಖೆಗಳ ಮೂಲಕ ಹೋರಾಟಗಾರರ ಶಕ್ತಿಯನ್ನು ದಮನಿಸುವ ಕಾರ್ಯ ಮಾಡಿದರೆ, ಜನ ವಿರೋಧದ ನಡುವೆಯೂ ಅನುಷ್ಠಾನಕ್ಕೆ ಮುಂದಾದರೆ ಈ ವೇಳೆ ಉಂಟಾಗುವ ಅವಘಡಗಳಿಗೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿ ನೇರ ಹೊಣೆ ಹೊರಬೇಕು. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಈ ಯೋಜನೆ ವಿರುದ್ಧ ಬೃಹತ್ ಆಂದೋಲನ ನಡೆಸಬೇಕು. ಮಾರಕವಾದ ಯೋಜನೆಗೆ ಯಾರೂ ಬೆಂಬಲ ನೀಡಬಾರದು ಎಂದು ಮನವಿ ಮಾಡಿದರು.
ರೈತರಿಗೆ ಅನ್ಯಾಯ ಆಗುವ ಜತೆಗೆ ತುಳುನಾಡಿನ ದೈವ ದೇವರ ಪವಿತ್ರ ಸಾನಿಧ್ಯಗಳಿಗೆ ಹಾನಿಯಾಗುತ್ತಿದೆ. ದೈವಸ್ಥಾನ, ದೇವಸ್ಥಾನ, ನಾಗ ಬನ, ಮಸೀದಿ, ಚರ್ಚ್, ಶಾಲೆಗಳ ಮೇಲೆಯೇ ವಿದ್ಯುತ್ ಮಾರ್ಗ ಹಾದು ಹೋಗುತ್ತಿದೆ. ಮಿಜಾರು ಗೋಪಾಲಕೃಷ್ಣ ದೇವಸ್ಥಾನದ ಮೇಲೆ, ಕಜಂಬು ಉತ್ಸವ ನಡೆಯುವ ಕೇಪು ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲಿ ವಿದ್ಯುತ್ ಮಾರ್ಗ ಹಾದು ಹೋಗಲಿದೆ. ಇದರಿಂದ ಜನರ ಧಾರ್ಮಿಕ ಭಾವನೆ ಧಕ್ಕೆಯಾಗುವ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
‘ಉಡುಪಿಯಿಂದ ಕಾಸರಗೋಡಿಗೆ ಸಮುದ್ರ ಮೂಲಕ ಸುಮಾರು 80 ಕಿ.ಮೀ.ಯಲ್ಲಿ ವಿದ್ಯುತ್ ಮಾರ್ಗ ರಚನೆ ಮಾಡಬಹುದಿದ್ದು, ಇದಕ್ಕೆ ₹1,440 ಕೋಟಿ ಮಾತ್ರ ವೆಚ್ಚವಾಗಲಿದೆ. ಹೀಗೆ ಮಾಡುವುದರಿಂದ ಯಾರೊಬ್ಬರಿಗೂ ಸಮಸ್ಯೆಯೂ ಆಗುವುದಿಲ್ಲ. ಈ ಕಾರಣಕ್ಕೆ ಈಗಿನ ಯೋಜನೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಲಾಗಿದೆ’ ಎಂದು ಪ್ರತಿಭಟನೆಯ ಬಳಿಕ ನಡೆದ ಸಭೆಯಲ್ಲಿ ಮುಖಂಡರು ಹೇಳಿದರು.
ಹಿಂದೂ ಜಾಗರಣೆ ವೇದಿಕೆಯ ನರಸಿಂಹ ಮಾಣಿ, ಅಕ್ಷಯ ರಜಪೂತ್, ರೈತ ಸಂಘದ ಶೀಧರ ಶೆಟ್ಟಿ ಬೈಲುಗುತ್ತು, ಮಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ರೈತ ಸಂಘಟನೆಯ ಇದಿನಬ್ಬ ನಂದಾವರ, ಅಲ್ಫೊನ್ಸ್ ಡಿಸೋಜ, ಚಂದ್ರಶೇಖರ ಇನ್ನಾ ಮಾತನಾಡಿದರು. ಚಿತ್ತರಂಜನ್, ರೈತ ಸಂಘದ ಶಿವಾನಂದ, ವಿಟ್ಲದ ಸನಾತನ ಹಿಂದೂ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳ ಸಂರಕ್ಷಣಾ ಹೋರಾಟ ಸಮಿತಿ ಕಾರ್ಯದರ್ಶಿ ಬಿ.ದೇವಿಪ್ರಸಾದ್ ಶೆಟ್ಟಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ರೈತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಮನವಿ ಸ್ವೀಕರಿಸುವಂತೆ ಪಟ್ಟು ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು ಎಂದು ಪ್ರತಿಭಟನೆಕಾರರು ಪಟ್ಟು ಹಿಡಿದು ಕುಳಿತರು. ಉಪ ತಹಶೀಲ್ದಾರ್ ಅವರು ಸ್ಥಳಕ್ಕೆ ಬಂದಾಗ ಒಪ್ಪದ ರೈತರು ಜಿಲ್ಲಾಧಿಕಾರಿಯೇ ಬರಬೇಕು ಎಂದು ಹಟ ಹಿಡಿದರು. ವಿಟ್ಲ- ಕಲ್ಲಡ್ಕ ರಸ್ತೆ ಸಂಪರ್ಕ ಬಂದ್ ಮಾಡುವುದಾಗಿಯೂ ಎಚ್ಚರಿಕೆ ನೀಡಿದರು. ಬಳಿಕ ತಹಶೀಲ್ದಾರ್ ಮಂಜುನಾಥ ಪ್ರತಿಭಟನೆಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು. ವಿದ್ಯುತ್ ಪ್ರಸರಣ ಯೋಜನೆ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಗುತ್ತಿಗೆ ವಹಿಸಿಕೊಂಡವರಿಗೆ ತಿಳಿಸಲಾಗಿದೆ. ಮುಂದಿನ ವಾರದೊಳಗೆ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳನ್ನು ಒಳಗೊಂಡು ಸಾರ್ವಜನಿಕ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮಂಗಳ ಪದವಿನಲ್ಲಿ ನಡೆದ ಸಭೆಯ ಬಳಿಕ ಕೆಲಿಂಜ ಉಳ್ಳಾಲ್ತಿ ಅಮ್ಮನ ಸನ್ನಿಧಿಗೆ ಪಾದಯಾತ್ರೆ ನಡೆಯಿತು. ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.