ಮಂಗಳೂರು: ‘ಕಾಲೇಜು ಗುರುತಿನ ಚೀಟಿಯೊಂದಿಗೆ ಬಂದರೆ ಶೇ 15ರಷ್ಟು ರಿಯಾಯಿತಿ ನೀಡಲಾಗುವುದು’ ಎಂಬ ನಗರದ ಪಬ್‌ವೊಂದರ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಪೊಲೀಸರು ಪಬ್ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ‘ದೇರೆಬೈಲ್ ಕೊಂಚಾಡಿಯ ‘ಲಿಕ್ಕರ್ ಲಾಂಜ್’ ಎಂಬ ಪಬ್ ಹೆಸರಿನಲ್ಲಿ ವಿದ್ಯಾರ್ಥಿಗಳು, ಮಕ್ಕಳನ್ನು ಮದ್ಯಸೇವನೆಗೆ ಉತ್ತೇಜಿಸುವ ಪೋಸ್ಟರ್‌ವೊಂದು ವಾಟ್ಸ್‌ಆ್ಯಪ್ ಮೂಲಕ ನಮಗೆ ಗುರುವಾರ (ಜು.25) ಬಂದಿದೆ. ನಿರ್ದಿಷ್ಟ ದಿನದಂದು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಮದ್ಯ ನೀಡುವುದಾಗಿ ಈ ಪೋಸ್ಟರ್‌ನಲ್ಲಿ ನಮೂದಿಸಲಾಗಿದೆ. ಇದು ಕರ್ನಾಟಕ ಅಬಕಾರಿ ಕಾಯ್ದೆ 1965ರ ಉಲ್ಲಂಘನೆಯಾಗಿದ್ದು,ಪರವಾನಗಿ ಷರತ್ತುಗಳನ್ನೂ ಪಬ್ ಉಲ್ಲಂಘಿಸಿದೆ. ಈ ಕಾರಣಕ್ಕೆ ಅಬಕಾರಿ ಇಲಾಖೆಯು ಕರ್ನಾಟಕ ಅಬಕಾರಿ ಕಾಯ್ದೆ 1965ರ ಸೆಕ್ಷನ್ 36 ಅಡಿಯಲ್ಲಿ ಪ್ರಕರಣ ದಾಖಲಿಸಿದೆ’ ಎಂದರು.
ಈ ರೀತಿ ನಿಯಮ ಉಲ್ಲಂಘನೆಯಾದಾಗ ಪ್ರಕರಣ ದಾಖಲಿಸಲು ಅಬಕಾರಿ ಇಲಾಖೆಗೆ ಮಾತ್ರ ಅಧಿಕಾರ ಇದೆ. ಆದರೂ, ಮಂಗಳೂರು ನಗರ ಪೊಲೀಸರು ಬಾರ್ ಮತ್ತು ಪಬ್‌ಗಳಲ್ಲಿ ಇಂತಹ ಚಟುವಟಿಕೆ ತಡೆಯಲು ಬದ್ಧರಾಗಿದ್ದೇವೆ. ಈಗಾಗಲೇ ಈ ಪೋಸ್ಟರ್ ಹಂಚಿರುವ ಪಬ್ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಮುಂದೆ ಇಂತಹ ಘಟನೆ ನಡೆಯದಂತೆ ನಿಗಾವಹಿಸಲು ಎಲ್ಲ ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.