ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಪೌರ ಕಾರ್ಮಿಕ ಮಹಿಳೆ ಲಕ್ಷ್ಮಿಬಾಯಿ

ಸ್ವಚ್ಛತಾ ಯಜ್ಞ: ಸಂತೃಪ್ತ ಜೀವನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:31 IST
Last Updated 31 ಡಿಸೆಂಬರ್ 2020, 19:31 IST
ಲಕ್ಷ್ಮಿಬಾಯಿ
ಲಕ್ಷ್ಮಿಬಾಯಿ   

ಮಂಗಳೂರು: ‘ಸ್ವಚ್ಛತೆ ಕನಿಷ್ಠ ಕೆಲಸವಲ್ಲ. ಸಮಾಜ ಸೇವೆಗೆ ಸಿಕ್ಕ ಅವಕಾಶ. ಕಸ ಬಳಿಯುವಾಗ ನನಗೆ ಯಾವತ್ತೂ ರೇಜಿಗೆ ಅನ್ನಿಸಲಿಲ್ಲ’ ಎಂದರು ಪೌರ ಕಾರ್ಮಿಕ ಮಹಿಳೆ ಲಕ್ಷ್ಮಿಬಾಯಿ.

ಮಹಾನಗರ ಪಾಲಿಕೆಯ 47ನೇ ವಾರ್ಡ್‌ನ ಗಲ್ಲಿಯಲ್ಲಿ ವಾಕಿಂಗ್ ಮಾಡುತ್ತಿದ್ದರೆ ಸೂರ್ಯ ಕಿರಣಗಳು ಭೂಮಿ ತಲುಪುವ ಹೊತ್ತಿಗೆ ಈ ಮಹಿಳೆ ನಿತ್ಯ ಕಾಣುತ್ತಾರೆ. ಕೈಯಲ್ಲಿ ಪೊರಕೆ ಹಿಡಿದು, ದಶಕದಿಂದ ಸ್ವಚ್ಛತಾ ಯಜ್ಞ ನಡೆಸುತ್ತಿರುವ ಲಕ್ಷ್ಮಿಬಾಯಿ ಕೆಲಸದಲ್ಲಿ ಸಂತೃಪ್ತಿ ಕಂಡವರು. ಕೋವಿಡ್ ಲಾಕ್‌ಡೌನ್ ವೇಳೆಗೂ ಕರ್ತವ್ಯಕ್ಕೆ ಹಾಜರಾಗಲು ಹಿಂದೇಟು ಹಾಕಿದವರಲ್ಲ.

‘ನಮ್ಮ ಊರು ಬಳ್ಳಾರಿ. ಲಾಕ್‌ಡೌನ್ ಸಡಿಲಗೊಂಡ ಮೇಲೆ ಊರಿಗೆ ಹೋಗುವ ಬಸ್ ಹೊರಟಿತು. ಊರಿಗಿಂತ ಕರ್ತವ್ಯ ಪ್ರಧಾನವೆಂದು ಭಾವಿಸಿದೆ ನಾನು. ಬೀದಿಯಲ್ಲಿ ಕೆಲಸ ಮಾಡುವವರು ನಾವು. ನಮ್ಮನ್ನು ಕಂಡರೆ ಜನರು ದೂರ ಸರಿಯುತ್ತಿದ್ದರು. ಅವರ ಆತಂಕ ಸಹಜವೆಂದು ಭಾವಿಸಿದೆ. ಆ ಕಷ್ಟದ ನಡುವೆಯೂ ಹಲವರು ನಮಗೆ ಚಹಾ ಮಾಡಿಕೊಟ್ಟು, ನೀರುಕೊಟ್ಟು ಹಸಿವನ್ನು ತಣಿಸಿದರು. ಹೀಗೆ ನೆರವಾಗುವವರ ಋಣ ತೀರಿಸುವ ಕೆಲಸವೇ ಹಾದಿ–ಬೀದಿ ಸ್ವಚ್ಛತೆ’ ಎಂಬುದು ಲಕ್ಷ್ಮಿಬಾಯಿ ನಿಲುವು.

ADVERTISEMENT

‘ನಮ್ಮ ಪಾಲಿಗೆ ದೊರೆತ ಕೆಲಸದ ಬಗ್ಗೆ ಬೇಸರ ಮಾಡಿಕೊಳ್ಳುವುದು ಏನಿದೆ? ಮಾಡುವ ಕೆಲಸವನ್ನು ಪ್ರೀತಿಸಬೇಕು’ ಎನ್ನುವ ಅಮ್ಮನಂಥ ಅಂತಃಕರಣ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.