ADVERTISEMENT

ಪ್ರಜಾವಾಣಿ ಕೊರೊನಾ ಸೇನಾನಿಗಳು 2021: ಪಾಂಡೇಶ್ವರ ಹೆಡ್‌ ಕಾನ್‌ಸ್ಟೆಬಲ್ ನಯನಾ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 19:31 IST
Last Updated 31 ಡಿಸೆಂಬರ್ 2020, 19:31 IST
ನಯನಾ
ನಯನಾ   

ಮಂಗಳೂರು: ಕೋವಿಡ್–19 ಲಾಕ್‌ಡೌನ್‌ ಸಂದರ್ಭದಲ್ಲಿ ನಗರದ ವೆನ್‌ಲಾಕ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡವರು ಪಾಂಡೇಶ್ವರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ನಯನಾ.

ಫೆಬ್ರುವರಿಯಲ್ಲಿ ವೆನ್‌ಲಾಕ್‌ನಲ್ಲಿ ಕರ್ತವ್ಯಕ್ಕೆ ಹಾಜರಾದವರು ನಯನಾ. ಅವರು ಅಲ್ಲಿಗೆ ಹಾಜರಾದ ಕೆಲವೇ ದಿನಗಳಲ್ಲಿ ಸಾಂಕ್ರಾಮಿಕ ಕಾಯಿಲೆ ಸಮುದಾಯದಲ್ಲಿ ಹರಡಲು ಆರಂಭವಾಯಿತು. ಎರಡು ಚಿಕ್ಕ ಮಕ್ಕಳು, ಸಹೋದರಿಯ ಮಕ್ಕಳು, ವಯಸ್ಸಾದ ಅಮ್ಮ, ಹೀಗೆ ಮನೆಯಲ್ಲಿ ಸೂಕ್ಷ್ಮ ಪರಿಸ್ಥಿತಿ ಇದ್ದರೂ ಧೃತಿಗೆಡದೇ, ಅತಿ ಹೆಚ್ಚು ಕೊರೊನಾ ಸೋಂಕಿತರು ಬರುವ ವೆನ್‌ಲಾಕ್‌ನಲ್ಲೇ ಕರ್ತವ್ಯ ಮುಂದುವರಿಸುವ ದಿಟ್ಟ ನಿರ್ಧಾರಕ್ಕೆ ಅವರು ಬಂದರು.

‘ದೊಡ್ಡ ಮಗಳಿಗೆ ತೆಲೆಸೇಮಿಯಾ ತೊಂದರೆಯಿದೆ. ಪ್ರತಿ 15 ದಿನಗಳಿಗೊಮ್ಮೆ ರಕ್ತ ನೀಡಬೇಕಾಗುತ್ತದೆ. ಇನ್ನೊಬ್ಬಳು ಮಗಳಿಗೆ ಒಂದು ವರ್ಷ. ನನ್ನೆದುರು ಹಲವಾರು ಸವಾಲುಗಳು ಇದ್ದವು. ಆದರೆ, ಕೊರೊನಾ ಸೋಂಕು ತಗುಲುವುದೇ ಆದರೆ, ಎಲ್ಲಿದ್ದರೂ ಬರಬಹುದು. ಕರ್ತವ್ಯ ನಿರ್ವಹಣೆ ಮುಖ್ಯವೆಂದು ಭಾವಿಸಿದೆ. ನಮಗೆ ರೋಗಿಗಳ ಸಾಮೀಪ್ಯ ಹೋಗುವ ಸಂದರ್ಭ ಇರುವುದಿಲ್ಲ. ಆದರೆ, ಆತಂಕ ಇದ್ದೇ ಇತ್ತು. ಯಾರಾದರೂ ಮೃತಪಟ್ಟರೆ, ತಕ್ಷಣಕ್ಕೆ ಸರ್ಕಾರಿ ವ್ಯವಸ್ಥೆಯ ವಿವಿಧ ಸ್ತರಗಳಿಗೆ ಮಾಹಿತಿ ಒದಗಿಸಬೇಕಿತ್ತು. ಅಂತಹ ಸಂದರ್ಭದಲ್ಲಿ, ಊಟ, ನಿದ್ದೆಯಿಲ್ಲದೇ ಕೆಲಸ ಮಾಡಿದ ದಿನಗಳೂ ಇವೆ’ ಎಂದು ಅವರು ನೆನಪಿಸಿಕೊಂಡರು.

ADVERTISEMENT

‘ಆ ಸಂದರ್ಭದಲ್ಲಿ ಕೆಲವರು ನನ್ನನ್ನೇ ‘ಕೊರೊನಾ’ದಂತೆ ಕಂಡರು. ಸೋಂಕನ್ನು ಹೊತ್ತು ತರುವವಳು ಎಂಬಂತೆ ನನ್ನ ಕಂಡು ಮೂಗು ಮುರಿದರು. ನಾನು ಅದಕ್ಕೆ ಕುಗ್ಗಲಿಲ್ಲ. ಕುಟುಂಬ ಮತ್ತು ಕರ್ತವ್ಯ ಎರಡಕ್ಕೂ ನ್ಯಾಯ ಒದಗಿಸಿದ ತೃಪ್ತಿಯಿದೆ’ ಎನ್ನುವಾಗ ಅವರಿಗೆ ಸಮಾಧಾನ ಭಾವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.