ADVERTISEMENT

ಶಾಲೆ ದತ್ತುಪಡೆಯದ ಶಾಸಕರನ್ನು ಪ್ರಶ್ನಿಸಿ: ದೊರೆಸ್ವಾಮಿ

ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ಬೇಸರ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 22:06 IST
Last Updated 27 ಜನವರಿ 2023, 22:06 IST
ಪ್ರೊ.ಎಂ.ಆರ್. ದೊರೆಸ್ವಾಮಿ
ಪ್ರೊ.ಎಂ.ಆರ್. ದೊರೆಸ್ವಾಮಿ   

ಮಂಗಳೂರು: ‘ಸರ್ಕಾರಿ ಶಾಲೆಗಳನ್ನು ದತ್ತು ಪಡೆಯದ ಶಾಸಕರು ಮುಂಬರುವ ಚುನಾವಣೆಯಲ್ಲಿ ಮತ ಕೇಳಲು ಬಂದಾಗ ಮತದಾರರು ಅವರನ್ನು ಪ್ರಶ್ನಿಸಬೇಕು’ ಎಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ ಸಲಹೆ ನೀಡಿದರು.

‘ಶಾಸಕರು, ವಿಧಾನ ಪರಿಷತ್‌ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ ಮೂರು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವಂತೆ ನೀಡಿದ್ದ ಶಿಫಾರಸನ್ನು 2020–21ರ ರಾಜ್ಯ ಬಜೆಟ್‌ನಲ್ಲಿ ಸೇರಿಸಲಾಗಿದ್ದರೂ, ಶೇ 10ರಷ್ಟು ಜನಪ್ರತಿನಿಧಿಗಳು ಮಾತ್ರ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘224 ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಈ ಸಂಬಂಧ ಪತ್ರ ಬರೆದು ಗಮನ ಸೆಳೆದಿದ್ದೇನೆ. ಆದರೆ, ಬೆರಳೆಣಿಕೆ ಶಾಸಕರು ಸರ್ಕಾರಿ ಶಾಲೆ ದತ್ತು ಪಡೆದು, ಅಭಿವೃದ್ಧಿಗೊಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಕ್ಷೇತ್ರದಲ್ಲಿ ಕೆಲ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ತಿಳಿಸಿದರು.

ADVERTISEMENT

ರಾಜ್ಯದಲ್ಲಿ 48ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಶೇ 40ರಷ್ಟು ಶಾಲೆಗಳಲ್ಲಿ ಕುಡಿಯುವ ನೀರು, ಕಾಂಪೌಂಡ್ ಸೌಲಭ್ಯ ಇಲ್ಲ. ಶೇ 30ರಷ್ಟು ಶಾಲೆಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಸ್ವತಃ ಶಿಕ್ಷಣ ಸಚಿವರೇ ಈ ವಿಷಯ ಹೇಳಿದ್ದಾರೆ. ರಾಜ್ಯ ಸರ್ಕಾರವು ಮುಂಬರುವ ಬಜೆಟ್‌ನಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ₹10ಸಾವಿರ ಕೋಟಿ ಮೊತ್ತವನ್ನು ಮೀಸಲಿಟ್ಟು, ಏಕಕಂತಿನಲ್ಲಿ ಬಿಡುಗಡೆಗೊಳಿಸಿ, ಶಾಲೆಗಳ ಅಭಿವೃದ್ಧಿಗೆ ಆಸಕ್ತಿ ತೋರಬೇಕು ಎಂದು ಆಗ್ರಹಿಸಿದರು. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಎರಡು ವರ್ಷಗಳ ಹಿಂದೆ 18 ಶಿಫಾರಸುಗಳನ್ನು ನೀಡಲಾಗಿತ್ತು. ಅದರಲ್ಲಿ ಕೆಲವು ಮಾತ್ರ ಅನುಷ್ಠಾನಗೊಂಡಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.