ADVERTISEMENT

ರೈಲ್ವೆ ಪರೀಕ್ಷೆ: ಮಂಗಳಸೂತ್ರ, ಜನಿವಾರ ತೆಗೆಯಲು ಸೂಚನೆ; ವಿಎಚ್‌ಪಿ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 11:25 IST
Last Updated 27 ಏಪ್ರಿಲ್ 2025, 11:25 IST
   

ಮಂಗಳೂರು: ರೈಲ್ವೆ ನೇಮಕಾತಿ ಮಂಡಳಿಯು ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಯನ್ನು ಇದೇ 29ರಂದು ಹಮ್ಮಿಕೊಂಡಿದೆ. ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳುವಾಗ ಧಾರ್ಮಿಕ ಸಂಕೇತಗಳಾದ ಮಂಗಳಸೂತ್ರ, ಜನಿವಾರ ಮೊದಲಾವುಗಳನ್ನು ಧರಿಸುವಂತಿಲ್ಲ ಎಂದು ಪರೀಕ್ಷೆ ಕೊಠಡಿಯ ಪ್ರವೇಶಪತ್ರದಲ್ಲಿ ಉಲ್ಲೇಖಿಸಿರುವ ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದ್ದು, ಇದಕ್ಕೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ವಿರೋಧ ವ್ಯಕ್ತಪಡಿಸಿದೆ.

‘ನಗರದ ಬೋಂದೆಲ್‌ನ ಮಣೇಲ್ ಶ್ರೀನಿವಾಸ್ ನಾಯಕ್ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆ ಬರೆಯಬೇಕಾದರೆ ಹಿಂದೂಗಳು ಅವರ ಧಾರ್ಮಿಕ ಚಿಹ್ನೆಗಳಾದ ಮಂಗಳಸೂತ್ರ, ಜನಿವಾರ ಗಳನ್ನೂ ತೆಗೆಯಬೇಕೆಂದು ಸೂಚನೆ ನೀಡಿರುವುದು ಸರಿಯಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ನ ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್‌ ಸರಿಪಲ್ಲ ತಿಳಿಸಿದ್ದಾರೆ.

‘ರಾಜ್ಯದಲ್ಲಿ ಇತ್ತೀಚಿಗೆ ನಡೆದ ವೃತ್ತಿಪರ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯುವ ಹಿಂದೂ ಅಭ್ಯರ್ಥಿಗಳ ಪವಿತ್ರ ಜನಿವಾರವನ್ನು ಕಿತ್ತು ಹಾಕಿದ ಪ್ರಕರಣದಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಇದು ಇಡೀ ದೇಶದ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಮುತ್ತೈದೆ ಹೆಣ್ಣುಮಗಳು ತಾಳಿ ಸರ ಕಳಚುವಂತೆ, ಸಿಂಧೂರ ಅಳಿಸುವಂತೆ ಮಾಡುವುದು, ಪವಿತ್ರ ಜನಿವಾರವನ್ನು ಕಿತ್ತುಹಾಕುವಂತೆ ಹೇಳುವುದರಿಂದ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಾಗುತ್ತದೆ. ಹಿಂದೂ ಬಹುಸಂಖ್ಯಾತರಾಗಿರುವ ನಮ್ಮ ದೇಶದಲ್ಲಿ ಈ ರೀತಿಯ ಹಿಂದೂ ವಿರೋಧಿ ಧೋರಣೆ ಸಹಿಸಲು ಅಸಾಧ್ಯ. ಹಾಗಾಗಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕ್ರಮಕೈಗೊಳ್ಳಬೇಕು’ ಎಂದು ಅವರು ಜಿಲ್ಲಾಧಿಕಾರಿಯವರನ್ನು ಕೋರಿದ್ದಾರೆ.

ADVERTISEMENT

ವಿಎಚ್‌ಪಿಯ ದಕ್ಷಿಣ ಪ್ರಾಂತ ಕಾರ್ಯವಾಹ ಶರಣ್ ಪಂಪ್‌ವೆಲ್‌ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಈ ಪರೀಕ್ಷೆಯ ಮಾರ್ಗಸೂಚಿಗಳನ್ನು ಹಂಚಿಕೊಂಡಿದ್ದು, ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರಿಗೆ ಟ್ಯಾಗ್‌ ಮಾಡಿ ಈ ಬಗ್ಗೆ ಕ್ರಮವಹಿಸುವಂತೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.