ADVERTISEMENT

ಮಳೆ ಮುಂದುವರಿಕೆ: ಯುವಕನ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:00 IST
Last Updated 7 ಜುಲೈ 2022, 4:00 IST
ಅಶ್ವಿತ್ ಗಾಣಿಗ
ಅಶ್ವಿತ್ ಗಾಣಿಗ   

ಮಂಗಳೂರು: ನಗರ ಮತ್ತು ಜಿಲ್ಲೆಯಲ್ಲಿ ಬುಧವಾರವೂ ಧಾರಾಕಾರ ಮಳೆ ಸುರಿಯಿತು. ಮಂಗಳವಾರ ರಾತ್ರಿಯಿಡೀ ಮುಸಲಧಾರೆಯಾಗಿತ್ತು. ಬುಧವಾರ ಬೆಳಿಗ್ಗೆ ಸ್ವಲ್ಪ ಬಿಡುವು ಕೊಟ್ಟಿದ್ದ ಮಳೆ ನಂತರ ಮುಂದುವರಿಯಿತು. ಆಗಾಗ ಭಾರಿ ಗಾಳಿಯೊಂದಿಗೆ ಜೋರಾಗಿ ಸುರಿಯಿತು.

ಜಿಲ್ಲೆಯಲ್ಲಿ 24 ತಾಸುಗಳಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದ್ದು ಎಂಟು ಮನೆಗಳು ಭಾಗಶಃ ನಾಶವಾಗಿವೆ. ಒಂಬತ್ತು ಟ್ರಾನ್ಸ್‌ಫಾರ್ಮರ್ ಮತ್ತು 81 ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ತುಂಬೆ ಅಣೆಕಟ್ಟೆಯ ಎಲ್ಲ 30 ಗೇಟುಗಳನ್ನು ತೆರೆಯಲಾಗಿದೆ.

ನೀರುಪಾಲಾದ ಯುವಕನ ಶವ ಪತ್ತೆ

ADVERTISEMENT

ಬಂಟ್ವಾಳದ ಸಜಿಪಪಡು ಗ್ರಾಮದ ತಲೆಮೊಗರಿನಲ್ಲಿ ನದಿಗೆ ಬಿದ್ದಿದ್ದ ಯುವಕನ ಶವ ಉಳ್ಳಾಲ ಸಮೀಪದ ಕೋಟೆಪುರ ಕೋಡಿಯಲ್ಲಿ ಬುಧವಾರ ಪತ್ತೆಯಾಗಿದೆ. ರತ್ನಾಕರ ಯಾನೆ ರುಕ್ಮಯ್ಯ ಸಪಲ್ಯ ಇವರ ಪುತ್ರ ಅಶ್ವಿತ್ ಗಾಣಿಗ (19) ಸಾವಿಗೀಡಾದವರು.

ಚಿಕ್ಕಪ್ಪ ನಾಗೇಶ ಗಾಣಿಗ ಅವರ ಮನೆಯಲ್ಲಿ ಕಳೆದ ಭಾನುವಾರ ಮಗುವನ್ನು ತೊಟ್ಟಿಲಿಗೆ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಶ್ವಿತ್‌ ನಾಲ್ವರು ಗೆಳೆಯರೊಂದಿಗೆ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಆಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಮೂರು ದಿನಗಳಿಂದ ಪೊಲೀಸರು ಮತ್ತು ಅಗ್ನಿಶಾಮಕದಳದವರು ಸ್ಥಳೀಯರ ಸಹಾಯದೊಂದಿಗೆ ಹುಡುಕಾಡಿದ್ದರು. ಸಮುದ್ರದ ಸಮೀಪದಲ್ಲೇ ಇರುವ ಬಂಡೆಯಲ್ಲಿ ಮೃತದೇಹ ಸಿಲುಕಿಕೊಂಡಿತ್ತು. ದಪ್ಪವಾಗಿ ಕೊಳೆತ ಸ್ಥಿತಿಯಲ್ಲಿತ್ತು.

ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಹರ್ಷಿತ್‌ ಗಾಣಿಗ ಅಪಾಯದಿಂದ ಪಾರಾಗಿದ್ದಾರೆ. ಆದರೆ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ ಎಂದು ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

ಶಾಲೆ–ಕಾಲೇಜುಗಳಿಗೆ ರಜೆ

ಕರಾವಳಿ ಕರ್ನಾಟಕದಲ್ಲಿ ಗುರುವಾರವೂ ಮಳೆ ಮುಂದುವರಿಯುವ ಸಾಧ್ಯತೆ ಇದ್ದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಆದೇಶ ಹೊರಡಿಸಿದ್ದಾರೆ.

ಬುಧವಾರ ಸಂಜೆ ಕೊನೆಗೊಂಡ 24 ತಾಸುಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 110.8 ಮಿ ಮೀ ಮಳೆಯಾಗಿದ್ದು ಜನವರಿಯಿಂದ ಇಲ್ಲಿಯ ವರೆಗೆ ಸರಾಸರಿ 1591.9 ಮಿ ಮೀ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.