ಮಂಗಳೂರು: ತುರ್ತು ಪರಿಸ್ಥಿತಿ ಸಂದರ್ಭವನ್ನು ಕರಾಳ ದಿನವೆಂದು ಬಿಂಬಿಸುತ್ತಿರುವ ಬಿಜೆಪಿಯವರಿಗೆ ಅದರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ದೇಶದಲ್ಲಿ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ವಿರೋಧ ಪಕ್ಷದವರನ್ನೇ ಗುರಿಯಾಗಿಸಿ ಇಡಿ ದಾಳಿ ನಡೆಸಲಾಗುತ್ತಿದೆ. ಮಣಿಪುರ ಗಲಭೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ' ಎಂದರು.
ತುರ್ತು ಪರಿಸ್ಥಿತಿ ವೇಳೆ ಬಡವರು, ದುರ್ಬಲ ವರ್ಗದವರಿಗೆ ಯಾರಿಗೂ ತೊಂದರೆ ಆಗಿಲ್ಲ. ಬ್ಯಾಂಕ್ ರಾಷ್ಟ್ರೀಕರಣ, ಭೂ ಮಸೂದೆ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಬಡವರಿಗೆ ಲಾಭವಾಗಿದೆ. ಇಂದಿರಾ ಗಾಂಧಿ ತಂದ ಕಾರ್ಯಕ್ರಮಗಳ ಮೂಲಕ ಈ ಜಿಲ್ಲೆಯಲ್ಲಿ ಸಾಮಾಜಿಕ ಬದಲಾವಣೆ ಆಗಿದೆ.
ಇಂದಿರಾ ಗಾಂಧಿಯವರ ದೃಢ ನಿರ್ಧಾರದಿಂದ 20 ಅಂಶಗಳ ಆರ್ಥಿಕ ಕಾರ್ಯಕ್ರಮಗಳು ಮತ್ತಿತರ ಅನೇಕ ಪ್ರಗತಿಪರ ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿವೆ. ಈ ವಿಚಾರವನ್ನು ನಾವು ಜನರಿಗೆ ತಿಳಿಸಬೇಕಾಗಿದೆ. ಆದರೆ, ತುರ್ತು ಪರಿಸ್ಥಿತಿ ಹೆಸರಿಟ್ಟು ಕೊಂಡು ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವ ಇಂದಿರಾ ಗಾಂಧಿ ಅಪಮಾನಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಹೇಳಿದರು.
ತುರ್ತು ಪರಿಸ್ಥಿತಿ ವಿರೋಧಿಸಿದ ವಿರೋಧ ಪಕ್ಷದವರಿಗೆ ತೊಂದರೆ ಆಗಿರಬಹುದು, ಆದರೆ ದುರ್ಬಲ ವರ್ಗದವರಿಗೆ ಯಾರಿಗೂ ತೊಂದರೆ ಆಗಿಲ್ಲ. ಇಂದಿರಾ ಗಾಂಧಿ ಅಧಿಕಾರದಲ್ಲಿದ್ದಾಗ ಪ್ರಯೋಜನ ಪಡೆದವರಿಗೆ ಅವರ ಋಣ ಇದೆ. ಈ ಋಣ ಇಟ್ಟುಕೊಂಡ ಜಿಲ್ಲೆಯ ಜನರು ಇಂದಿರಾ ಗಾಂಧಿಗೆ ಗೌರವ ನೀಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಜಯಶೀಲ ಅಡ್ಯಂತಾಯ, ಅಪ್ಪಿಲತಾ, ಪೃಥ್ವಿರಾಜ್, ಸಲೀಂ, ಇಬ್ರಾಹಿಂ ನವಾಜ್, ಸುಹಾನ್ ಆಳ್ವ, ಶಬ್ಬೀರ್, ಪ್ರಕಾಶ್ ಸಾಲಿಯಾನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.