ADVERTISEMENT

ವಿವಿಧ ಕಡೆಗಳಲ್ಲಿ ಗಣರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 16:28 IST
Last Updated 26 ಜನವರಿ 2023, 16:28 IST
ಮಂಗಳೂರಿನ ಎನ್‌ಎಂಪಿಎಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಅಧ್ಯಕ್ಷ ರಮಣ ಮಾತನಾಡಿದರು
ಮಂಗಳೂರಿನ ಎನ್‌ಎಂಪಿಎಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಅಧ್ಯಕ್ಷ ರಮಣ ಮಾತನಾಡಿದರು   

ಮಂಗಳೂರು: ನಗರದ ವಿವಿಧ ಕಡೆಗಳಲ್ಲಿ ಸಂಭ್ರಮ ಮತ್ತು ಸಡಗರದಿಂದ ಗಣರಾಜ್ಯೋತ್ಸವವನ್ನು ಗುರುವಾರ ಆಚರಿಸಲಾಯಿತು. ಧ್ವಜಾರೋಹಣ, ಪಥಸಂಚಲನ, ಗಣ್ಯರ ಭಾಷಣ, ದೇಶಭಕ್ತಿಗೀತೆಗಳ ಗಾಯನ ಇತ್ಯಾದಿ ಕಾರ್ಯಕ್ರಮಗಳು ಉತ್ಸವಕ್ಕೆ ರಂಗು ತುಂಬಿದವು.

ನವಮಂಗಳೂರು ಬಂದರು ನಿಗಮದಲ್ಲಿ (ಎನ್‌ಎಂಪಿಎ) ನಡೆದ ಕಾರ್ಯಕ್ರಮದಲ್ಲಿ ನಿಮಗದ ಅಧ್ಯಕ್ಷ ಡಾ.ಎ.ವಿ.ರಮಣ ಧ್ವಜಾರೋಹಣ ಮಾಡಿದರು. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಪಣಂಬೂರು ಘಟಕ, ಎನ್‌ಎಂಪಿಎ ಅಗ್ನಿಶಾಮಕ ಘಟಕ, ಎನ್‌ಎಂಪಿಎ ಶಾಲೆ ಮತ್ತು ಕೇಂದ್ರೀಯ ವಿದ್ಯಾಲಯದ ಭಾರತ್‌ ಸ್ಕೌಟ್ಸ್ ಮತ್ತು ಗೈಡ್ಸ್‌, ಖಾಸಗಿ ಭದ್ರತಾ ಸಿಬ್ಬಂದಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ರಮಣ ಅವರು ಭಾರತವು ಶೀಘ್ರದಲ್ಲೇ ವಿಶ್ವದ ಅತ್ಯುತ್ತಮ ಆರ್ಥಿಕ ವ್ಯವಸ್ಥೆ ಹೊಂದಿದ ದೇಶವಾಗಲಿದ್ದು ಕೆಲವೇ ವರ್ಷಗಳಲ್ಲಿ ಸೂಪರ್ ಪವರ್ ಆಗುವ ಭರವಸೆ ಇದೆ ಎಂದರು.

ADVERTISEMENT

ರಾಷ್ಟ್ರೀಯ ಬೆಂಚ್ ಪ್ರೆಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ನಿಮಗದ ಉದ್ಯೋಗಿ ಅಕ್ಷತಾ ಪೂಜಾರಿ ಅವರನ್ನು ಗೌರವಿಸಲಾಯಿತು. ನಿಗಮದ ಉಪಾಧ್ಯಕ್ಷ ಕೆ.ಜಿ.ನಾಥ್‌ ಇದ್ದರು.

ಸೇಂಟ್ ಅಲೋಷಿಯಸ್ ಕಾಲೇಜು:

ಸೇಂಟ್ ಅಲೋಷಿಯಸ್ ಪಿಯು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಿಗೇಡಿಯರ್ ಐ.ಎನ್‌.ರೈ ಮಾತನಾಡಿ ದೇಶದ ಭದ್ರತೆ, ಗೌರವ ಮತ್ತು ಸಮೃದ್ಧಿಗೆ ಪ್ರತಿಯೊಬ್ಬರೂ ಪ್ರತಿ ಸಂದರ್ಭದಲ್ಲೂ ಆದ್ಯತೆ ನೀಡಬೇಕು, ವೈಯಕ್ತಿಕ ಹಿತಾಸಕ್ತಿ ನಂತರದ ಆದ್ಯತೆಯಾಗಬೇಕು ಎಂದರು ಸಲಹೆ ನೀಡಿದರು.

ಐಪಿಯುನ ವಿಷ್ಣು ನಂದನ್‌, ಪ್ರಾಂಶುಪಾಲ ರೆವರೆಂಢ್ ಫಾದರ್‌ ಕ್ಲಿಫರ್ಡ್‌ ಸಿಕ್ವೇರ, ಹಣಕಾಸು ಅಧಿಕಾರಿ ರೆವರೆಂಡ್ ಫಾದರ್‌ ಪ್ರದೀಪ್‌ ಸಿಕ್ವೇರ, ಕ್ಯಾಂಪಸ್ ಮಿನಿಸ್ಟರ್ ರೆವರೆಂಡ್ ಫಾದರ್‌ ಸುಜಯ್‌ ಡ್ಯಾನಿಯಲ್‌, ಉಪ ಪ್ರಾಂಶುಲರಾದ ಚಾರ್ಲೊಟ್ ಡಿಸೋಜಾ ಮತ್ತು ಮುರಳಿಕೃಷ್ಣ ಜಿ.ಎಂ, ಡೀನ್‌ಗಳಾದ ಪ್ರದೀಪ್ ಮತ್ತು ಕಿರಣ್ ಶೆಟ್ಟಿ ಇದ್ದರು.

ಶಾರದಾ ವಿದ್ಯಾಲಯ:

ನಗರದ ಶಾರದಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಸ್. ಪ್ರದೀಪ ಕುಮಾರ ಕಲ್ಕೂರ ಮಾತನಾಡಿ ಭಾಷಾ ವೈವಿಧ್ಯ, ಪ್ರಕೃತಿ ಸಂಪತ್ತು, ಭೌಗೋಳಿಕ ಭಿನ್ನತೆ ಒಳಗೊಂಡ ಭಾರತ ಹಲವು ಜಾತಿ, ಮತ, ಪಂಗಡಗಳ ಜನರನ್ನು ಒಳಗೊಂಡಿದ್ದರೂ ಸಾಂಸ್ಕೃತಿಕವಾಗಿ ಏಕತೆಯನ್ನು ಸಾಧಿಸಿದೆ ಎಂದರು.

ಶಾರದಾ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ವಿಶ್ವಸ್ಥ ಸುಧಾಕರ ರಾವ್ ಪೇಜಾವರ, ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಾಬಲೇಶ್ವರ ಭಟ್, ಪ್ರಾಂಶುಪಾಲೆ ಸುನೀತಾ ವಿ.ಮಡಿ, ಆಡಳಿತ ವಿಭಾಗದ ಪ್ರಾಂಶುಪಾಲ ದಯಾನಂದ ಕಟೀಲ್, ಉಪ ಪ್ರಾಂಶುಪಾಲೆ ಲಕ್ಷ್ಮಿ ಉಡುಪ, ಸಹಾಯಕ ಉಪ ಪ್ರಾಂಶುಪಾಲೆ ಕೆ.ಲಕ್ಷ್ಮಿ ಪೈ ಇದ್ದರು.

ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಲೋಕ್ ಗಣರಾಜ್ಯೋತ್ಸವ ಆಚರಣೆಯ ಮಹತ್ವದ ಕುರಿತು ಮಾತನಾಡಿದರು. ಓಜಸ್ ಸಾಮಗ ಸ್ವಾಗತಿಸಿ ತನ್ವಿ ವಂದಿಸಿದರು. ಅನಘಾ ರಾವ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.