ADVERTISEMENT

ವೆನ್ಲಾಕ್‌ಗೆ ಹೊರವಲಯದಲ್ಲಿ ಜಮೀನು ಕಾದಿರಿಸಿ: ಉಸ್ತುವಾರಿ ಸಚಿವ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 14:04 IST
Last Updated 1 ಜುಲೈ 2025, 14:04 IST
<div class="paragraphs"><p>ದಿನೇಶ್ ಗುಂಡೂರಾವ್</p></div>

ದಿನೇಶ್ ಗುಂಡೂರಾವ್

   

– ಪ್ರಜಾವಾಣಿ ಚಿತ್ರ

ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಭವಿಷ್ಯದ ಅಭಿವೃದ್ಧಿ ದೃಷ್ಟಿಯಿಂದ ನಗರದ  ಹೊರವಲಯದಲ್ಲಿ ಜಮೀನು ಕಾಯ್ದಿರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು. 

ADVERTISEMENT

ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಅವರು ಮಾತನಾಡಿದರು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಹರೀಶ್ ಪೂಂಜ, ‘ವೆನ್ಲಾಕ್ ಆಸ್ಪತ್ರೆಯ ಆವರಣ ಕಟ್ಟಡಗಳಿಂದ ತುಂಬಿಹೋಗಿದೆ. ಆಸ್ಪತ್ರೆಯ ವಿಸ್ತರಣೆ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಸ್ಥಳಾವಕಾಶವಿಲ್ಲ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್‌.ಆರ್‌.ತಿಮ್ಮಯ್ಯ, ‘ಮೂಡುಶೆಡ್ಡೆಯಲ್ಲಿ ಕ್ಷಯರೋಗದ ಆಸ್ಪತ್ರೆ ಸಮೀಪ 8 ಎಕರೆ ಲಭ್ಯವಿದೆ’ ಎಂದರು.

ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಸಾದ್ , ‘ವೆನ್ಲಾಕ್ ಆಸ್ಪತ್ರೆಯ ಹೊರರೋಗಿ ವಿಭಾಗವನ್ನು ತೆರವುಗೊಳಿಸಿ, 4 ಮಹಡಿಗಳ ಹೊಸ ಕಟ್ಟಡ ನಿರ್ಮಾಣ ಶೀಘ್ರದಲ್ಲಿ ಆರಂಭವಾಗಲಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಹಾಸ್ಟೆಲ್‌: ‘ಜಿಲ್ಲೆಗೆ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಎರಡು  ಹೆಚ್ಚುವರಿ ಹಾಸ್ಟೆಲ್‌ ಮಂಜೂರಾಗಿದೆ. ಬೇರೆ ಜಿಲ್ಲೆಗಳಿಗೆ ಮಂಜೂರಾದ ಹಾಸ್ಟೆಲ್‌ಗಳಿಗೆ ವಿದ್ಯಾರ್ಥಿಗಳ ಕೊರತೆ ಇದ್ದರೆ, ಅವುಗಳನ್ನು ನಮ್ಮ ಜಿಲ್ಲೆಗೆ ನೀಡುವಂತೆ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೇನೆ’ ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್ ತಿಳಿಸಿದರು.

ಮೂಲ್ಕಿಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯ ಸ್ಥಾಪನೆಗೆ ಅನುಮತಿ ಕೊಡಿಸಬೇಕು. ಅದಕ್ಕೆ  ಕಟ್ಟಡ ಲಭ್ಯ ಇದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು.

ಸಭೆಗೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಜಿಲ್ಲಾಧಿಕಾರಿಯವರ ಅನುಮತಿ ಪಡೆಯದೇ ಗೈರಾದ ಬಗ್ಗೆ ವಿಧಾನ ಪರಿಷತ್ ಸದಸ್ಯ ಎಸ್‌.ಎಲ್‌.ಭೋಜೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ನೋಟಿಸ್ ನೀಡಿ ವಿವರಣೆ ಕೇಳುವಂತೆ ಸಚಿವರು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.