ADVERTISEMENT

ಉಜಿರೆ | ಗ್ರಾಮೀಣ ಉದ್ಯಮದಿಂದ ಗ್ರಾಮದ ಅಭಿವೃದ್ಧಿ: ಶ್ರೀಪಡ್ರೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 6:21 IST
Last Updated 6 ಜನವರಿ 2026, 6:21 IST
ಚಿತ್ರ: ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಉಪನ್ಯಾಸ ನೀಡಿದರು
ಚಿತ್ರ: ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಉಪನ್ಯಾಸ ನೀಡಿದರು   

ಉಜಿರೆ: ತೆಂಗು, ಅಡಿಕೆ, ಭತ್ತದ ಕೃಷಿಯಲ್ಲಿ ಬೆಳೆಗಿಂತಲೂ ಅವುಗಳ ಸಿಪ್ಪೆ, ಗೆರಟೆ, ಹಾಳೆ ಮೊದಲಾದ ತ್ಯಾಜ್ಯಗಳಿಗೆ ಬೆಲೆ ಹಾಗೂ ಬೇಡಿಕೆ ಹೆಚ್ಚಾಗಿದೆ. ಅಡಿಕೆ ಮರದ ಹಾಳೆ ತಟ್ಟೆಯಲ್ಲಿ ಇಂದು ಶ್ರೀಮಂತರು ಹಾಗೂ ಪ್ರತಿಷ್ಠಿತ ಜನರು ಊಟ ಮಾಡುತ್ತಾರೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿ ಆದಾಗ ನಗರಗಳಿಂದ ಜನರು ಮತ್ತೆ ಹಳ್ಳಿಗಳ ಕಡೆಗೆ ವಲಸೆ ಬರುತ್ತಾರೆ ಎಂದು ಕೃಷಿ ತಜ್ಞ ಶ್ರೀಪಡ್ರೆ ಹೇಳಿದರು.

ಬೆಳ್ತಂಗಡಿ ತಾಲ್ಲೂಕಿನ ನಿಡ್ಲೆ ಗ್ರಾಮದ ಅಗ್ರಿಲೀಫ್ ಸಂಸ್ಥೆಯ ಆಶ್ರಯದಲ್ಲಿ ನಡೆದ ‘ರೈತರ ಜೊತೆ ವಿಶ್ವದ ಕಡೆ’ ತತ್ವದಲ್ಲಿ ಆಯೋಜಿಸಿದ್ದ ‘ರೈತ-ಸಂಸ್ಥೆ ಸಮನ್ವಯ ಸಭೆ’ಯಲ್ಲಿ ಉಪನ್ಯಾಸ ನೀಡಿದರು.

ಅಡಿಕೆ ಹಾಳೆತಟ್ಟೆಯಿಂದ ಮೊಬೈಲ್ ಕವಚ, ಸೂಟ್‌ಕೇಸ್, ಪಾದರಕ್ಷೆ, ಆಕರ್ಷಕ ಕಲಾಕೃತಿಗಳನ್ನು ತಯಾರಿಸಬಹುದು ಎಂದು ಕಂಡು ಹಿಡಿದಿದ್ದಾರೆ. ಅಧಿಕ ಕೀಟನಾಶಕಗಳ ಬಳಕೆ, ಔಷಧಿಗಳ ಸಿಂಪಡಣೆಯಿಂದ ಮಣ್ಣಿನ ಆರೋಗ್ಯ ಹಾಳಾಗಿದ್ದು ಸಾರವೂ ಕಡಿಮೆ ಆಗಿದೆ. ಸ್ಥಳೀಯವಾಗಿ ಲಭ್ಯ ಇರುವ ಸಂಪನ್ಮೂಲಗಳು ಹಾಗೂ ಕಚ್ಚಾ ವಸ್ತುಗಳನ್ನು ಬಳಸಿ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮಗಳನ್ನು ಆರಂಭಿಸಿದಾಗ ಊರಿನ ಅಭಿವೃದ್ಧಿ ಜೊತೆಗೆ ಸ್ಥಳೀಯರಿಗೆ ಉದ್ಯೋಗವೂ ದೊರಕುತ್ತದೆ. ನಗರಗಳಿಗೆ ಜನರು ವಲಸೆ ಹೋಗುವುದು ತಪ್ಪುತ್ತದೆ ಎಂದು ಅವರು ಹೇಳಿದರು.

ADVERTISEMENT

ಅಗ್ರಿಲೀಫ್ ಸಂಸ್ಥೆಯ ಮೂಲಕ ಅಡಿಕೆ ಹಾಳೆತಟ್ಟೆ ತಯಾರಿ ಉದ್ಯಮ ಪ್ರಾರಂಭಿಸಿ ಯಶಸ್ವಿಯಾದ ಅವಿನಾಶ್ ರಾವ್ ಮತ್ತು ಅತಿಶಯ ಜೈನ್ ಅವರನ್ನು ಅಭಿನಂದಿಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ಅನಂತ ಭಟ್ ಮಚ್ಚಿಮಲೆ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎಸ್.ಚಂದ್ರಶೇಖರ್ ಮಾತನಾಡಿದರು.

ಹಾಳೆತಟ್ಟೆ ಸಂಗ್ರಹದಲ್ಲಿ ವಿಶೇಷ ಸಾಧನೆ ಮಾಡಿದ ಲೋಕಯ್ಯ ಗೌಡ ಕೊಯ್ಯೂರು, ಬಾಬು ಸುಳ್ಯೋಡಿ, ಪ್ರೇಮ ಕರಾಯ, ನಂದಿನಿ ಕುದ್ರಡ್ಕ, ನಿರಂಜನ ಗೌಡ ಬಂದಾರು ಅವರನ್ನು ಅಭಿನಂದಿಸಲಾಯಿತು.

ನಂದಿನಿ ಮತ್ತು ನಿರಂಜನ ಗೌಡ ಬಂದಾರು ಅನುಭವ ಹಂಚಿಕೊಂಡರು.

ಅವಿನಾಶ್ ರಾವ್ ಸ್ವಾಗತಿಸಿದರು. ಅತಿಶಯ ಜೈನ್ ವಂದಿಸಿದರು. ಪೃಥ್ವಿ ಕಾರಿಂಜೆ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.