
ಸಹ್ಯಾದ್ರಿ ಸಂಚಯದ ಪ್ರತಿನಿಧಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂಪಿ. ಅವರಿಗೆ ಸೋಮವಾರ ಗಿಡವನ್ನು ನೀಡಿ, ಜಿಲ್ಲೆಯಲ್ಲಿ ಹಸಿರು ಬೆಳೆಸಲು ಕಾಳಜಿ ವಹಿಸುವ ಕುರಿತ ಕೋರಿಕೆ ಪತ್ರವನ್ನು ಸಲ್ಲಿಸಿದರು
ಮಂಗಳೂರು: ‘ಹಸಿರು ಚಾದರ ವಿಶಾಲವಾಗಿ ಬೆಳೆದು ತಾಪ ಕಡಿಮೆಯಾಗಿ ತಂಪು ಹೆಚ್ಚಾಗಲಿ’ ಎಂಬ ಜಾಗೃತಿ ಮೂಡಿಸುವ ಆಶಯದಿಂದ 'ಸಹ್ಯಾದ್ರಿ ಸಂಚಯ' ಬಳಗವು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೇರಿದಂತೆ ಜಿಲ್ಲೆಯ ಪ್ರಮುಖ ಅಧಿಕಾರಿಗಳಿಗೆ ಹೊಸ ವರ್ಷದ ಮೊದಲ ದಿನವಾದ ಸೋಮವಾರ ಗಿಡಗಳನ್ನು ಉಡುಗೊರೆಯಾಗಿ ನೀಡಿತು.
'ಹಸಿರು ಉಳಿಸುವ ಕಾರ್ಯದಲ್ಲಿ ಆಡಳಿತ ವರ್ಗ ಕಾರ್ಯಪ್ರವೃತ್ತರಾಗಬೇಕು. ಅವರ ಮೂಲಕ ಮತ್ತು ಜನರಿಗೆ ಪ್ರೇರಣೆ ಸಿಗಬೇಕು ಎಂಬ ಉದ್ದೇಶದಿಂದ ನಾವು ಮೂರು ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಜಿಲ್ಲಾಧಿಕಾರಿ, ಪೋಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಪೊಲೀಸ್ ಠಾಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಂದು ಗಿಡಗಳನ್ನು ವಿತರಿಸಿ ಹಸಿರು ಉಳಿಸಿ, ಬೆಳೆಸಲು ಕಾಳಜಿ ವಹಿಸುವಂತೆ ಕೋರಿದ್ದೇವೆ’ ಎಂದು ಸಹ್ಯಾದ್ರಿ ಸಂಚಯದ ದಿನೇಶ ಹೊಳ್ಳ ’ಪ್ರಜಾವಾಣಿ‘ಗೆ ತಿಳಿಸಿದರು.
‘ಜಿಲ್ಲೆಯಲ್ಲಿ ಈ ಸಲ ಮಳೆ ಕಡಿಮೆಯಾಗಿದ್ದು ತಾಪ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲೂ ಬರಗಾಲದ ಕರಾಳ ಛಾಯೆ ಆವರಿಸಿದೆ. ನವೆಂಬರ್ ತಿಂಗಳಲ್ಲೇ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ದಾಟಿದೆ. ಮುಂಬರುವ ಬೇಸಿಗೆ ಎಷ್ಟು ಕರಾಳವಾಗಿರುತ್ತದೆ ಎಂಬುದರ ಸೂಚನೆ ಇದು. ಭವಿಷ್ಯದಲ್ಲಿ ನೀರಿನ ಅಭಾವ ತಡೆಯಲು ಇರುವ ಏಕೈಕ ಮಾರ್ಗವೆಂದರೆ ಆದಷ್ಟು ಗಿಡಗಳನ್ನು ನೆಟ್ಟು ಈ ನೆಲದ ಹಸಿರು ಕವಚವನ್ನು ಹೆಚ್ಚಿಸುವುದು. ಆಡಳಿತ ವರ್ಗವು ಈ ನಿಟ್ಟಿನಲ್ಲಿ ಕ್ರಮವಹಿಸಬೇಕು. ಜನರಿಗೂ ಪ್ರೇರಣೆ ನೀಡಬೇಕು ಎಂಬುದು ನಮ್ಮ ಕೊರಿಕೆ’ ಎಂದರು.
ಅಧಿಕಾರಿಗಳಿಗೆ ಗಿಡಗಳನ್ನು ನೀಡುವ ಕಾರ್ಯದಲ್ಲಿ ಸಹ್ಯಾದ್ರಿ ಸಂಚಯದ ದಿನೇಶ್ ಕೋಡಿಯಾಲ್ ಬೈಲ್, ರಾಜೇಶ್ ದೇವಾಡಿಗ, ಕೇಶವ ರಾಮಕುಂಜ, ಅಖಿಲಾ ಕದ್ರಿ ಮತ್ತಿತರರು ಭಾಗಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.