ADVERTISEMENT

ನ್ಯಾಪ್‌ಕಿನ್ ತ್ಯಾಜ್ಯ: ಸುಡದಿರಲಿ ಭೂಮಿ ಒಡಲು

ಸಂಧ್ಯಾ ಹೆಗಡೆ
Published 2 ಫೆಬ್ರುವರಿ 2026, 2:02 IST
Last Updated 2 ಫೆಬ್ರುವರಿ 2026, 2:02 IST
   

ಮಂಗಳೂರು: ‘ತಿಂಗಳ ಆ ನಾಲ್ಕು ದಿನಗಳೆಂದರೆ ಯಮಯಾತನೆ. ಮನೆಯಲ್ಲೂ ಇರಲಾಗದ, ಕ್ಲಾಸ್‌ಗಳನ್ನೂ ಮಿಸ್ ಮಾಡಲಾಗದ ಸಂದಿಗ್ಧ. ಬೆಳಗಿನಿಂದ ಸಂಜೆಯವರೆಗೆ ಕಾಲೇಜಿನಲ್ಲಿ ಸಮಯ ಕಳೆಯಬೇಕು, ಪಾಠ– ಪ್ರವಚನಗಳಲ್ಲಿ ಗಮನ ಕೇಂದ್ರೀಕರಿಸುವಷ್ಟರಲ್ಲಿ ಮನಸ್ಸು ಆತಂಕದಲ್ಲಿ ಮುದುಡುತ್ತದೆ, ಕುಳಿತ ಜಾಗ ಕೆಂಪಾಗದಿದ್ದರೆ ಸಾಕೆಂದು ಬೇಡಿಕೊಳ್ಳುತ್ತದೆ. ಕಾಲೇಜಿನ ಶೌಚಾಲಯವಂತೂ ಕೆಲವೊಮ್ಮೆ ಬಳಸಲೂ ಅಸಹ್ಯವಾಗುವ ಸ್ಥಿತಿಯಲ್ಲಿರುತ್ತದೆ...’

ನಗರದ ಪಿಯು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತೀರಾ ಮುಜುಗರದಿಂದಲೇ ತನ್ನ ತಲ್ಲಣಗಳನ್ನು ಹೇಳಿಕೊಂಡಳು. ಇದು ಆಕೆಯೊಬ್ಬಳ ಸಮಸ್ಯೆಯಲ್ಲ, ಶಾಲೆ– ಕಾಲೇಜುಗಳಿಗೆ ಹೋಗುವ ಹದಿಹರೆಯದ ಎಲ್ಲ ಹೆಣ್ಣು ಮಕ್ಕಳ ತುಮುಲಗಳಿವು.

ಮಾಸಿಕ ಋತುಚಕ್ರದ ಆ ನಾಲ್ಕು ದಿನಗಳನ್ನು ನಿಭಾಯಿಸುವುದು ಶಾಲೆ– ಕಾಲೇಜುಗಳಿಗೆ ಹೋಗುವ ಹೆಣ್ಣು ಮಕ್ಕಳಿಗೆ ಸವಾಲೇ ಸರಿ. 2–3 ದಶಕಗಳ ಹಿಂದೆ ಮುಟ್ಟಿನ ವೇಳೆ ಬಟ್ಟೆಯ ಬಳಕೆಯೇ ಹೆಚ್ಚಿತ್ತು, ಆಧುನಿಕತೆ ಬೆಳೆದ ಹಾಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳು, ಟ್ಯಾಂಪೂನ್‌ಗಳು, ಮುಟ್ಟಿನ ಕಪ್‌ಗಳು, ಮರುಬಳಕೆಯ ಪ್ಯಾಡ್‌ಗಳು ಹೀಗೆ ಅನೇಕ ಆಯ್ಕೆಗಳು ಹೆಣ್ಣು ಮಕ್ಕಳ ಮುಂದಿವೆ. ಆದರೆ, ಶೇ 90ರಷ್ಟು ವಿದ್ಯಾರ್ಥಿನಿಯರು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನೇ ಬಳಕೆ ಮಾಡುತ್ತಾರೆ. ಇವುಗಳ ವಿಲೇವಾರಿಯ ಗೋಳು ಹೆಣ್ಣು ಮಕ್ಕಳನ್ನಷ್ಟೇ ಅಲ್ಲ, ಶಾಲೆ–ಕಾಲೇಜುಗಳ ಮುಖ್ಯಸ್ಥರನ್ನೂ ಕಾಡುತ್ತಿದೆ.

ADVERTISEMENT

‘ಹೆಚ್ಚಿನ ಸರ್ಕಾರಿ, ಅನುದಾನಿತ ಪಿಯು ಕಾಲೇಜುಗಳಲ್ಲಿ ಗ್ರೂಪ್ ‘ಡಿ’ ಹುದ್ದೆಗಳು ಖಾಲಿ ಇವೆ. ಶೌಚಾಲಯ ಸ್ವಚ್ಛತೆಗೆ ಪ್ರ‌ತ್ಯೇಕ ಅನುದಾನ ಲಭ್ಯವಿಲ್ಲ. ಶೌಚಾಲಯ ಶುಚಿಗೊಳಿಸುವುದೇ ದೊಡ್ಡ ಸಮಸ್ಯೆ. ಹೊರಗುತ್ತಿಗೆ ಕೆಲಸಗಾರರನ್ನು ನೇಮಿಸಿಕೊಂಡರೆ, ತಿಂಗಳಿಗೆ ಕನಿಷ್ಠ ₹5 ಸಾವಿರ ವೆಚ್ಚವಾಗುತ್ತದೆ. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದೆ. ವರ್ಷಕ್ಕೆ 2–3 ಬಾರಿ ಬ್ಲಾಕ್ ಆಗುವ ಇವುಗಳನ್ನು ಸ್ವಚ್ಛಗೊಳಿಸುವುದು ಹೊರೆಯಾಗುತ್ತಿದೆ. ಬಳಸಿದ ಸ್ಯಾನಿಟರಿ ನ್ಯಾಪ್‌ಕಿನ್ ಹಾಕಲು ಪ್ರತ್ಯೇಕ ಬಿನ್ ಇಡಲಾಗಿದೆ. ಆದರೆ, ಕೆಲವರು ಅರಿವಿನ ಕೊರತೆ ಅಥವಾ ಮುಜುಗರದಿಂದ ಶೌಚಾಲಯದೊಳಗೆ ಹಾಕಿ ಬಿಡುತ್ತಾರೆ’ ಎಂದು ಪಿಯು ಕಾಲೇಜಿನ ಪ್ರಾಂಶುಪಾಲರೊಬ್ಬರು ಸಮಸ್ಯೆ ವಿವರಿಸಿದರು.

‘ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಇನ್ಸಿನರೇಟರ್‌ಗಳನ್ನು ಅಳವಡಿಸಿ, ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ವಿಲೇವಾರಿ ಮಾಡುವ ವ್ಯವಸ್ಥೆ ರೂಪಿಸಲಾಗಿತ್ತು. ಈ ಯಂತ್ರಗಳು ಬಹುಬೇಗ ದುರಸ್ತಿಗೆ ಬರುತ್ತವೆ. ಅಲ್ಲದೆ, ವಿದ್ಯಾರ್ಥಿನಿಯರಿಂದ ಪೂರ್ಣ ಪ್ರಮಾಣದ ಸಹಕಾರ ದೊರೆಯದ ಕಾರಣ, ಈಗ ಶೌಚಾಲಯದಲ್ಲಿ ಪ್ರತ್ಯೇಕ ಬಿನ್ ಇಟ್ಟು, ಸಂಗ್ರಹಿಸಿ, ಮಹಾನಗರ ಪಾಲಿಕೆಯ ಕಸ ಸಂಗ್ರಹ ವಾಹನಕ್ಕೆ ಕೊಡುತ್ತಿದ್ದೇವೆ’ ಎಂದು ನಗರ ಪ್ರಮುಖ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರೊಬ್ಬರು ಹೇಳಿದರು.

‘ಸಂಸ್ಥೆಯೊಂದು ಇನ್ಸಿನರೇಟರ್‌ ಯಂತ್ರವನ್ನು ನಮ್ಮ ಕಾಲೇಜಿಗೆ ಉಚಿತವಾಗಿ ನೀಡಿತ್ತು. ಕೆಲವು ತಿಂಗಳುಗಳಲ್ಲಿ ಯಂತ್ರ ಹಾಳಾಯಿತು. ಯಂತ್ರದ ಮಾದರಿಯಲ್ಲಿ ತುಸು ಬದಲಾವಣೆ ಮಾಡಿದರೆ, ಬಾಳಿಕೆ ಹೆಚ್ಚು ಬರಬಹುದು. ಯಂತ್ರ ಇರುವಾಗ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿತ್ತು. ಒಂದು ಕಾಲೇಜಿಗೆ ಕನಿಷ್ಠ ಎರಡು ಯಂತ್ರಗಳನ್ನಾದರೂ ಒದಗಿಸಿದರೆ ಅನುಕೂಲ’ ಎನ್ನುತ್ತಾರೆ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರೊಬ್ಬರು.

‘ಜಿಲ್ಲೆಯಲ್ಲಿರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ಇನ್ಸಿನರೇಟರ್ ಯಂತ್ರಗಳು ಇವೆ. ಕೆಲವು ಕಾರ್ಯನಿರ್ವಹಿಸುತ್ತಿವೆ, ಇನ್ನು ಕೆಲವು ದುರಸ್ತಿಯಲ್ಲಿವೆ. ಇವುಗಳ ನಿರ್ವಹಣೆ ಸುಲಭವಲ್ಲ. ಜೊತೆಗೆ ಇವು ಬಳಕೆದಾರರ ಸ್ನೇಹಿಯಾಗಿಲ್ಲ. ಪ್ಲಾಸ್ಟಿಕ್ ತುಸು ತಾಗಿದರೂ ಅಂಟಿಕೊಂಡು ಯಂತ್ರ ಕಾರ್ಯನಿರ್ವಹಿಸುವುದಿಲ್ಲ. ಬಿಡಿ ಭಾಗಗಳು ತುಂಬಾ ದುಬಾರಿ, ಅಲ್ಲದೇ, ಸ್ಥಳೀಯವಾಗಿ ಲಭ್ಯವಾಗುವುದಿಲ್ಲ’ ಎನ್ನುತ್ತಾರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು.

ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಬೇರೆ ಬೇರೆ ಕಂಪನಿಗಳ ಸಿಎಸ್‌ಆರ್ ನಿಧಿಯಿಂದ ಅಥವಾ ಸಂಘ–ಸಂಸ್ಥೆಗಳ ನೆರವಿನಿಂದ ಇನ್ಸಿನರೇಟರ್‌ ಅಳವಡಿಸಲಾಗಿದೆ. ಅವುಗಳಲ್ಲಿ ಕೆಲವು ಕಡೆಗಳಲ್ಲಿ ಮಾತ್ರ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು.

ಸುಡುವುದು ಅಪಾಯಕಾರಿ: ಬಹಳಷ್ಟು ಕಡೆಗಳಲ್ಲಿ ಪ್ರತ್ಯೇಕ ಗುಂಡಿ ಮಾಡಿ, ಸ್ಯಾನಿಟರಿ ಪ್ಯಾಡ್‌ಗಳನ್ನು ಅಲ್ಲಿ ಹಾಕಿ ಬೆಂಕಿ ಹಚ್ಚಲಾಗುತ್ತದೆ. ಸಂಸ್ಥೆಯವರಿಗೆ ಇದು ಅನಿವಾರ್ಯ. ಪ್ಯಾಡ್‌ಗಳಿಗೆ ಬೆಂಕಿ ಹಾಕಿ ಸುಡುವುದು ಮಾಲಿನ್ಯ ಕಾರಕ ಎಂಬುದು ಗೊತ್ತಿದೆ. ಆದರೆ, ಹೀಗೆ ಮಾಡದೆ, ಬೇರೆ ವಿಧಿಯಿಲ್ಲ ಎಂದು ಶಾಲೆಯ ಮುಖ್ಯಸ್ಥರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ರೆಡ್‌ಕ್ರಾಸ್‌ ಸಂಸ್ಥೆಯವರು ನಮ್ಮ ಕಾಲೇಜಿಗೆ ಕೊಡುಗೆಯಾಗಿ ನೀಡಿದ್ದ ಇನ್ಸಿನರೇಟರ್ ಇತ್ತೀಚೆಗೆ ಹಾಳಾಗಿದ್ದು, ದುರಸ್ತಿಗೆ ಕೊಡಲಾಗಿದೆ. ಈ ಯಂತ್ರ ಇದ್ದರೆ ಹೆಣ್ಣು ಮಕ್ಕಳಿಗೆ ಅನುಕೂಲ
ಮಮತಾ ಎ. , ಕಾವೂರು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲೆ
ಮುಟ್ಟಿನ ಕಪ್ ಪರಿಸರಸ್ನೇಹಿಯಾಗಿದ್ದು, ಇದನ್ನು ಬಳಕೆ ಮಾಡುವಂತೆ ಅರಿವು ಮೂಡಿಸುತ್ತಿದ್ದೇವೆ. ಹಾಸ್ಟೆಲ್‌ನಲ್ಲಿರುವ ನರ್ಸಿಂಗ್, ಮೆಡಿಕಲ್ ವಿದ್ಯಾರ್ಥಿನಿಯರು ಸೇರಿದಂತೆ ಹಲವರು ಕಪ್ ಬಳಕೆ ಮಾಡುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.
ಬಿಂದಿಯಾ ನಾಯಕ್,>ಬಿಸಿಎಂ ಜಿಲ್ಲಾ ಅಧಿಕಾರಿ

ಪ್ಯಾಡ್‌ಗಳಿಂದ ಶೇ 4ರಷ್ಟು ಕಸ ಉತ್ಪತ್ತಿ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿದಿನ 330 ಟನ್‌ನಷ್ಟು ಕಸ ಸಂಗ್ರಹವಾಗುತ್ತದೆ. ಇದರಲ್ಲಿ ಶೇ 3–4ರಷ್ಟು ಸ್ಯಾನಿಟರಿ ಪ್ಯಾಡ್‌ಗಳು, ಮಕ್ಕಳ ಡೈಪರ್‌ಗಳು, ಹಿರಿಯರ ಡೈಪರ್‌ಗಳು ಇರುತ್ತವೆ. ಹಸಿ ಕಸ, ಒಣ ಕಸದ ಜೊತೆಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಣ್ಣ ಇನ್ಸಿನರೇಟರ್ ಯಂತ್ರ ಇದ್ದು, ಯಂತ್ರದ ಸಾಮರ್ಥ್ಯಕ್ಕೆ ತಕ್ಕಷ್ಟು ಇಲ್ಲಿ ವಿಲೇವಾರಿಯಾಗುತ್ತದೆ. ಉಳಿದವುಗಳನ್ನು ಭೂಮಿ ಆಳಕ್ಕೆ ಸೇರಿಸಲಾಗುತ್ತಿದೆ ಎನ್ನುತ್ತಾರೆ ಮಂಗಳೂರು ಮಹಾನಗರ ಪಾಲಿಕೆಯ ಪರಿಸರ ಎಂಜಿನಿಯರ್ ದೀಪ್ತಿ. 

ಮೂರು ಬಿನ್ ಮಾದರಿ ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಸದ್ಯ ಕೆಲವರು ಮಾತ್ರ ಕಸ ಕೊಡುವಾಗ ಪ್ಯಾಡ್‌ಗಳನ್ನು ಪ್ರತ್ಯೇಕಿಸಿ ಕೊಡುತ್ತಿದ್ದಾರೆ. ಪರ್ಯಾಯ ಮಾರ್ಗಗಳ ಬಗ್ಗೆ ಯೋಜನೆ ರೂಪಿಸಲು ಸ್ವಯಂ ಸೇವಾ ಸಂಸ್ಥೆಗಳ ಜೊತೆ ಚರ್ಚಿಸುತ್ತಿದ್ದೇವೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಯೋಜನೆಗೆ ಬಾಲಗ್ರಹ ಪೀಡೆ

ನಗರ ವ್ಯಾಪ್ತಿಯಲ್ಲಿ ಉ‌ತ್ಪತ್ತಿಯಾಗುವ ಸ್ಯಾನಿಟರ್ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಮಹಾನಗರ ಪಾಲಿಕೆ ಯೋಜನೆ ರೂಪಿಸಿತ್ತು. ಎಂಟೊ ಪ್ರೊಟೀನ್ ಕಂಪನಿ ಈ ಬಗ್ಗೆ ಆಸಕ್ತಿ ತೋರಿದ್ದರಿಂದ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ನೀಡುವಂತೆ ಪಾಲಿಕೆ ಸೂಚಿಸಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹೊಸ ಯಂತ್ರ ಅಳವಡಿಕೆಗೆ ಅನುಮತಿ ದೊರೆಯದ ಕಾರಣ ಯೋಜನೆ ಆರಂಭಿಕ ಹಂತದಲ್ಲೇ ಮುಗ್ಗರಿಸಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ. 

ಸರ್ಕಾರದಿಂದ ಆಗಬೇಕಾಗಿರುವುದು ಏನು?

  • ವಿದ್ಯಾರ್ಥಿನಿಯಲ್ಲಿ ಮುಟ್ಟಿನ ಮುಜುಗರ ಹೋಗಲಾಡಿಸಿ ವೈಜ್ಞಾನಿಕ ಅರಿವು ಮೂಡಿಸಲು ಕಾರ್ಯಕ್ರಮ ರೂಪಿಸಬೇಕು

  • ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಪರ್ಯಾಯವಾಗಿ ಮುಟ್ಟಿನ ಕಪ್ ಅಥವಾ ಪರಿಸರ ಸ್ನೇಹಿ ಪ್ಯಾಡ್‌ಗಳ ಬಗ್ಗೆ ಜಾಗೃತಿ ಮೂಡಿಸಬೇಕು

  • ಪ್ರತಿ ಶಾಲೆಯಲ್ಲಿ ಸ್ಯಾನಿಟರಿ ಪ್ಯಾಡ್‌ ವೈಜ್ಞಾನಿಕ ವಿಲೇವಾರಿ ವ್ಯವಸ್ಥೆ ಇರಬೇಕು

  • ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಅವುಗಳ ಶುಚಿತ್ವ ಕಾಪಾಡಿಕೊಳ್ಳುವ ಬಗ್ಗೆ ಗಂಭೀರ ಕ್ರಮ ಆಗಬೇಕು

  • ಸ್ಯಾನಿಟರಿ ಪ್ಯಾಡ್, ಡೈಪರ್‌ಗಳನ್ನು ಬಯೊ ಮೆಡಿಕಲ್ ತ್ಯಾಜ್ಯವೆಂದು ಪರಿಗಣಿಸಿ, ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು

ಇವು ಅನುಷ್ಠಾನಗೊಂಡಾಗ ಮಾತ್ರ ಮುಟ್ಟಿನ ಆರೋಗ್ಯದ ಹಕ್ಕು ಸಂವಿಧಾನ ನೀಡಿರುವ ಜೀವಿಸುವ ಹಕ್ಕಿನ ಭಾಗ. ಖಾಸಗಿ ಶಾಲೆಗಳನ್ನು ಒಳಗೊಂಡಂತೆ ಎಲ್ಲ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಮಣ್ಣಿನಲ್ಲಿ ಕರಗುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಉಚಿತವಾಗಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಾಡಿರುವ ತಾಕೀತು ನಿಜ ಅರ್ಥದಲ್ಲಿ ಸಾಕಾರಗೊಳ್ಳಬಹುದು. 

ಏಪ್ರಿಲ್‌ನಿಂದ ಹೊಸ ನಿಯಮ

ಘನ ತ್ಯಾಜ್ಯ ನಿರ್ವಹಣೆ (ಎಸ್‌ಡಬ್ಲ್ಯುಎಂ) 2016ರ ನಿಯಮದ ಪ್ರಕಾರ ಸ್ಯಾನಿಟರಿ ತ್ಯಾಜ್ಯವನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಇವು ಮನೆ ಬಳಕೆಯ ಬಯೊ ಮೆಡಿಕಲ್ ತ್ಯಾಜ್ಯ ವಿಭಾಗಕ್ಕೆ ಸೇರುವುದರಿಂದ, ಬಯೊ ಮೆಡಿಕಲ್ ತ್ಯಾಜ್ಯ ವಿಲೇವಾರಿ ಮಾಡುವ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಆದರೆ, ಇದು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಬರುವ ಏಪ್ರಿಲ್‌ನಿಂದ ಎಸ್‌ಡಬ್ಲ್ಯುಎಂ 2026 ನಿಯಮ ಜಾರಿಯಾಗಲಿದೆ. ಈ ನಿಯಮದ ಅನ್ವಯ ಪ್ರತಿಮನೆಯಿಂದ ನಾಲ್ಕು ರೀತಿಯ ಕಸಗಳನ್ನು ಕಡ್ಡಾಯವಾಗಿ ಪ್ರತ್ಯೇಕಿಸಿ ಕೊಡಬೇಕಾಗುತ್ತದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು. ಸ್ಯಾನಿಟರಿ ಪ್ಯಾಡ್, ಡೈಪರ್ ಇವೆಲ್ಲ ಬಯೊ ಮೆಡಿಕಲ್ ತ್ಯಾಜ್ಯ ಆಗಿರುವುದರಿಂದ ಪ್ರತ್ಯೇಕ ಇನ್ಸಿನರೇಟರ್ ಅಳವಡಿಕೆಗೆ ನಿಯಮದಲ್ಲಿ ಅವಕಾಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.