ADVERTISEMENT

ಭಾಷೆಗೆ ಸಂಸ್ಕಾರ ದೊರೆತಾಗ ಸಂಸ್ಕೃತ: ಅದಮಾರು ಶ್ರೀ

ಶ್ರೀನಿವಾಸ ವಿವಿಯಲ್ಲಿ ನಡೆದ ಸಂಸ್ಕೃತ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:45 IST
Last Updated 14 ಡಿಸೆಂಬರ್ 2025, 7:45 IST
ಶ್ರೀನಿವಾಸ ವಿವಿಯಲ್ಲಿ ನಡೆದ ಸಂಸ್ಕೃತ ಸಮ್ಮೇಳನದಲ್ಲಿ ಅದಮಾರು ಶ್ರೀ ಮಾತನಾಡಿದರು
ಶ್ರೀನಿವಾಸ ವಿವಿಯಲ್ಲಿ ನಡೆದ ಸಂಸ್ಕೃತ ಸಮ್ಮೇಳನದಲ್ಲಿ ಅದಮಾರು ಶ್ರೀ ಮಾತನಾಡಿದರು   

ಮಂಗಳೂರು: ಅಕ್ಕಿಗೆ ಸಂಸ್ಕಾರವಾದಾಗ ಅನ್ನವಾಗುತ್ತದೆ. ಹಸಿವಾದಾಗ ಅಕ್ಕಿಯನ್ನು ತಿನ್ನಲು ಸಾಧ್ಯವಿಲ್ಲ, ಅದು ಸಂಸ್ಕಾರ ಹೊಂದಿ ಅನ್ನವಾಗಬೇಕು. ಅದೇ ರೀತಿ ಭಾಷೆಗೆ ಸಂಸ್ಕಾರವಾದಾಗ ಅದು ಸಂಸ್ಕೃತವಾಗುತ್ತದೆ. ನಾವು ಭಾರತೀಯರು ಎಂದಿಗೂ ಸಂಸ್ಕಾರಯುತ ಜೀವನ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಅದಮಾರು ಮಠದ ಹಿರಿಯ ಮಠಾಧೀಶ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಭಾರತೀಯ ಜ್ಞಾನ ವ್ಯವಸ್ಥೆ ಮತ್ತು ಸಂಸ್ಕೃತ ಪರಂಪರೆಯ ಮೂಲಕ ಸ್ಥಿರತೆ’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಗೋಸ್ವಾಲ್ ಸಂಸ್ಥಾಪಕ ಉತ್ತರ ಪ್ರದೇಶದ ತನ್ಮಯ ಗೋಸ್ವಾಮಿ ಮಾತನಾಡಿ, ರಷ್ಯನ್ ಮತ್ತು ಜಪಾನಿನ ಭಾಷೆಗಳ ಬೇರು ಸಂಸ್ಕೃತದಲ್ಲಿದೆ. ಇಂಗ್ಲಿಷ್ ಭಾಷೆಯ ಅನೇಕ ಪದಗಳು ಸಂಸ್ಕೃತದಿಂದ ಬಂದಿವೆ. ಭಾರತೀಯ ವಿಜ್ಞಾನ, ವೈದ್ಯಕೀಯ, ಆಯುರ್ವೇದ ಹಾಗೂ ತಂತ್ರಜ್ಞಾನ ಎಲ್ಲವೂ ಸಂಸ್ಕೃತದೊಂದಿಗೆ ಆಳವಾದ ಸಂಬಂಧ ಹೊಂದಿವೆ ಎಂದರು.

ADVERTISEMENT

ಭರತ್ ಕನ್‌ಸ್ಟ್ರಕ್ಷನ್‌ ಮಾಲೀಕ ಮುಸ್ತಫಾ ಮಾತನಾಡಿ, ಯೋಗದಿಂದ ಮನಸ್ಸಿನಲ್ಲಿ ಯೋಚಿಸುವ ವಿಚಾರಗಳು ಹೃದಯದ ಮೂಲಕ ಮನಸ್ಸಿಗೆ ತಲುಪುತ್ತವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಎ. ರಾಘವೇಂದ್ರ ರಾವ್ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಸಂಶೋಧನೆ ನಡೆಯುತ್ತಿದೆ ಎಂದರು.

ಶ್ರೀನಿವಾಸ ವಿವಿ ಸಹ ಕುಲಾಧಿಪತಿ ಎ. ಶ್ರೀನಿವಾಸ ರಾವ್, ಕುಲಪತಿ ಪ್ರೊ. ಕೆ. ಸತ್ಯನಾರಾಯಣ ರೆಡ್ಡಿ, ಕುಲಸಚಿವರಾದ ಅನಿಲ್ ಕುಮಾರ್, ಅಜಯ್ ಕುಮಾರ್, ರಷ್ಯಾದ ಮನಃಶಾಸ್ತ್ರಜ್ಞೆ ಎಕಟೆರಿನಾ ಇಜೆಂಡೀವಾ ಹಾಗೂ ಚರ್ಮರೋಗ ತಜ್ಞೆ ಅನಸ್ತಾಸಿಯಾ ಪಶಲೋವಾ ಉಪಸ್ಥಿತರಿದ್ದರು.

ಸಮ್ಮೇಳನದ ಸಂಯೋಜಕ ಎ. ರಾಮಕೃಷ್ಣ ಶಬರಾಯ ಸ್ವಾಗತಿಸಿದರು. ಪ್ರವೀಣ್ ಬಿ.ಎಂ. ವಂದಿಸಿದರು. ವಿಜಯಲಕ್ಷ್ಮಿ ನಾಯಕ್, ಪ್ರೊ. ರೋಹನ್ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

ಪೂರ್ವದ ಆತ್ಮೀಯತೆ ಯೋಗ ಮತ್ತು ಪಶ್ಚಿಮದ ತಂತ್ರಜ್ಞಾನ ಒಂದಾಗುವ ಮೂಲಕ ನಿಜವಾದ ಜ್ಞಾನ ಲಭಿಸುತ್ತದೆ.
– ಪ್ರೊ. ಅಂಜಯ್ ಕುಮಾರ್, ನೇಪಾಳ ಮಧೇಶ್ ವಿಶ್ವವಿದ್ಯಾಲಯದ ಡೀನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.