ADVERTISEMENT

ಧರ್ಮಸ್ಥಳ ಲಕ್ಷದೀಪೋತ್ಸವ: ಸರ್ವಧರ್ಮ ಸಮ್ಮೇಳನದ 93ನೇ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 6:27 IST
Last Updated 19 ನವೆಂಬರ್ 2025, 6:27 IST
ಧರ್ಮಸ್ಥಳದಲ್ಲಿ ಮಂಗಳವಾರ ನಡೆದ ಸರ್ವಧರ್ಮ ಸಮ್ಮೇಳನದ 93ನೇ ಅಧಿವೇಶನದಲ್ಲಿ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು
ಧರ್ಮಸ್ಥಳದಲ್ಲಿ ಮಂಗಳವಾರ ನಡೆದ ಸರ್ವಧರ್ಮ ಸಮ್ಮೇಳನದ 93ನೇ ಅಧಿವೇಶನದಲ್ಲಿ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿದರು   

ಉಜಿರೆ: ‘ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾರತದ ಸರ್ವಧರ್ಮಗಳೂ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿ ವಿಶ್ವವೇ ಒಂದು ಕುಟುಂಬ ಎಂದು ಭಾವಿಸಿವೆ. ಮಾನವ ಸೇವೆಯೇ ಶ್ರೇಷ್ಠ ಧರ್ಮ’ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.

ಧರ್ಮಸ್ಥಳದ ಲಕ್ಷದೀಪೋತ್ಸವ ಸಂದರ್ಭದಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದ 93ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಧರ್ಮವನ್ನು ಪ್ರೀತಿಸಿ ಅನುಷ್ಠಾನಗೊಳಿಸುವುದರೊಂದಿಗೆ ಇತರ ಧರ್ಮವನ್ನೂ ಗೌರವಿಸುವುದು ನಮ್ಮ ಸನಾತನ ಧರ್ಮ, ಸಂಸ್ಕೃತಿಯ ಜೀವಾಳ.  ಸರ್ವಧರ್ಮ ಸಮನ್ವಯ ಕೇಂದ್ರವಾಗಿ ಸರ್ವಧರ್ಮೀಯರಿಗೂ ಸೇವೆ ನೀಡುವ ಧರ್ಮಸ್ಥಳ ಅನುಪಮ ಶ್ರದ್ಧಾ-ಭಕ್ತಿಯ ಕೇಂದ್ರವಾಗಿದೆ. ಇಲ್ಲಿನ ಧರ್ಮಸಹಿಷ್ಣುತೆ, ಚತುರ್ವಿಧ ದಾನ ಪರಂಪರೆ, ಮಾನವೀಯ ಸೇವೆ ವಿಶ್ವಕ್ಕೆ ಮಾದರಿ ಎಂದರು.

ADVERTISEMENT

ಮಾನವೀಯತೆಯೇ ಸಕಲ ಧರ್ಮಗಳ ಸಾರ: ಮಾನವೀಯತೆಯೇ ಸಕಲ ಧರ್ಮಗಳ ಸಾರ. ಧರ್ಮ ಎಂಬ ಪದಕ್ಕೆ ಧಾರಣೆ ಮಾಡುವುದು ಎಂಬ ಅರ್ಥವೂ ಇದೆ. ಮಾನವ ತನ್ನ ಜೀವನದಲ್ಲಿ ನೈತಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ಉನ್ನತ ಆದರ್ಶ ಬದುಕನ್ನು ನಡೆಸಲು ದಾರಿ ತೋರುವುದೇ ಧರ್ಮದ ಉದ್ದೇಶವಾಗಿದೆ ಎಂದು ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮವು ಪೂಜೆಗಳು ಹಾಗೂ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಸತ್ಯ, ಅಹಿಂಸೆ, ಕರುಣೆ, ಶಾಂತಿ, ನೆಮ್ಮದಿ, ಪರೋಪಕಾರ, ಸಮಾನತೆ ಮೊದಲಾದ ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಳಿಸಬೇಕು. ಧರ್ಮವು ಸತ್ಯದ ಹುಡುಕಾಟದೊಂದಿಗೆ ವಿಶ್ವಸಾಮರಸ್ಯವನ್ನು ಮೂಡಿಸಬೇಕು. ಭಾರತೀಯತೆಯು ಧರ್ಮದ ತಳಹದಿಯ ಮೇಲೆ ನಿಂತಿದೆ. ನಾವು ಆಳವಾದ ಅಧ್ಯಯನ ಮಾಡಿ ಧರ್ಮದ ಮರ್ಮವನ್ನರಿತು ಅನುಷ್ಠಾನಗೊಳಿಸಿದರೆ ಧರ್ಮವು ನಾವು ಬಯಸಿದ್ದನ್ನು ಕೊಡುವ ಕಾಮಧೇನುವಾಗಿದೆ ಎಂದರು.

ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮಾನವೀಯತೆ ಹಾಗೂ ಮಾನವೀಯ ಸಂಬಂಧ ಕ್ಷೀಣಿಸುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ ಅವರು, ಧರ್ಮವು ಮಾನವನ ಜೀವನದ ಅಸ್ತಿತ್ವಕ್ಕೆ ಆಧಾರವಾಗಿದ್ದು, ಧರ್ಮದ ಅನುಷ್ಠಾನದಿಂದ ಸಮಾಜದಲ್ಲಿ ದ್ವೇಷ, ಹಿಂಸೆ ಮತ್ತು ಅಸಮಾನತೆ ನಿವಾರಣೆಯಾಗಿ ಮನುಷ್ಯತ್ವವು ದೈವತ್ವದ ಕಡೆಗೆ ಸಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸತ್ಯ ಒಂದೇ ಆದರೂ ಮಾರ್ಗಗಳು ಅನೇಕ. ನಮಗೆ ಇಷ್ಟವಾಗದೆ ಇರುವ ವಿಚಾರವನ್ನು ನಾವು ಇತರರಿಗೂ ತಲುಪಿಸಬಾರದು. ಸುಳ್ಳು ಹೇಳುವುದು, ಅವಮಾನ, ಶೋಷಣೆ, ನಮಗೆ ಇಷ್ಟವಾಗುವುದಿಲ್ಲ. ಆದ್ದರಿಂದ ಇದನ್ನು ನಾವು ಇತರರಿಗೂ ಮಾಡಬಾರದು. ಮಾನವೀಯತೆ ಮೂಲಕ ಇಡೀ ವಿಶ್ವವೇ ಒಂದು ಕುಟುಂಬ ಎಂದು ಭಾವಿಸಬೇಕು ಎಂದು ಸಲಹೆ ನೀಡಿದರು.

‘ಪ್ರಜಾವಾಣಿ’ ಪತ್ರಿಕೆಯ ಮುಖ್ಯ ಉಪಸಂಪಾದಕ ಎಸ್.ಸೂರ್ಯಪ್ರಕಾಶ್ ಪಂಡಿತ್, ಸನಾತನ ಧರ್ಮವು ಶಾಶ್ವತವೂ, ನೂತನವೂ ಆಗಿದ್ದು ಸರ್ವರಿಗೂ ಸಾಮರಸ್ಯಕ್ಕೆ ಸಮಾನ ಅವಕಾಶ ನೀಡುತ್ತದೆ. ಸಮುದಾಯದ ಚಿಂತನೆಯೊಂದಿಗೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು ಎಂದರು.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಬಂದ ಚಿಂತಕ ತನ್ವೀರ್ ಅಹಮ್ಮದ್ ಉಲ್ಲಾ ಮಾತನಾಡಿ, ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದರು.

ಹೇಮಾವತಿ ಹೆಗ್ಗಡೆ ಅವರು ಮಂಜುವಾಣಿ ಮಾಸಪತ್ರಿಕೆಯಲ್ಲಿ ಪ್ರಕಟಿಸಿದ ‘ಮಗಳಿಗೊಂದು ಪತ್ರ’ ಅಂಕಣ ಬರಹಗಳ ಸಂಕಲವನ್ನು ಸಚಿವ ಎಂ.ಬಿ.ಪಾಟೀಲ ಬಿಡುಗಡೆ ಮಾಡಿದರು. ಡಿ.ವೀರೇಂದ್ರ ಹೆಗ್ಗಡೆ ಅವರ ಅಂಕಣ ಬರಹಗಳ ಸಂಗ್ರಹ ‘ಧರ್ಮದರ್ಶನ’ವನ್ನು ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಬಿಡುಗಡೆ ಮಾಡಿದರು.

ಹೇಮಾವತಿ ವಿ.‌ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಡಿ.ಹರ್ಷೇಂದ್ರ ಕುಮಾರ್, ಪೂರನ್ ವರ್ಮ ಭಾಗವಹಿಸಿದ್ದರು. ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕ ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಬೆಳಾಲು ತಿಮ್ಮಪ್ಪ ಗೌಡ ವಂದಿಸಿದರು.

ಧರ್ಮಸ್ಥಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಸಮ್ಮೇಳನಕ್ಕೂ ಮುನ್ನ ಅತಿಥಿಗಳನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.