ADVERTISEMENT

ಕರಾವಳಿಯಲ್ಲಿ ನಿಷೇಧಿತ ಸ್ಯಾಟ್‌ಲೈಟ್‌ ಫೋನ್‌ ಸಿಗ್ನಲ್ ಪತ್ತೆ ಹಚ್ಚಿದ 'ರಾ'

ಯಾವುದೇ ಮಾಹಿತಿ ಇಲ್ಲ; ಅಧಿಕಾರಿಗಳ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 6:50 IST
Last Updated 24 ಜುಲೈ 2020, 6:50 IST
   

ಮಂಗಳೂರು: ಕರಾವಳಿಯಲ್ಲಿ ನಿಷೇಧಿತ ಸ್ಯಾಟ್‌ಲೈಟ್ ಫೋನ್‌ಗಳು ಸಕ್ರಿಯ ಆಗಿರುವ ಕುರಿತು ರಾ ಏಜೆನ್ಸಿ ಸಿಗ್ನಲ್ ಪತ್ತೆಹಚ್ಚಿದೆ. ಮೂರು ದಿನಗಳ ಹಿಂದೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು, 15 ದಿನಗಳ ಹಿಂದೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಕಿಲ್ಲೂರು ಹಾಗೂ ಕಾರ್ಕಳದ ಬಜಗೋಳಿ ಭಾಗಗಳಲ್ಲಿ ಆಗಾಗ ಸ್ಯಾಟ್‌ಲೈಟ್‌ ಫೋನ್ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿವೆ ಎಂದು ಗುಪ್ತಚರ ಸಂಸ್ಥೆ ಮಾಹಿತಿ ನೀಡಿದೆ.

ಕೊರಿಯಾದ ತುರಾಯಾ ಬ್ರಾಂಡ್‌ನ ಸ್ಯಾಟ್‌ಲೈಟ್‌ ಫೋನ್‌ ಸಕ್ರಿಯವಾಗಿದ್ದು, 6 ದಿನಗಳಲ್ಲಿ 2 ಬಾರಿ ಫೋನ್ ಸಂಪರ್ಕ ಸಾಧಿಸುವ ಪ್ರಯತ್ನ ನಡೆದಿದೆ. ಈ ಸಂಬಂಧ ಗುಪ್ತಚರ ಹಾಗೂ ಆಂತರಿಕ ಭದ್ರತಾ ಇಲಾಖೆಯ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

2019 ರಲ್ಲಿ ಜೂನ್‌ನಿಂದ ಆಗಸ್ಟ್ ಮಧ್ಯದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಗೋವಿಂದೂರಿನಲ್ಲಿ ಇಂತಹ ಘಟನೆ ನಡೆದಿತ್ತು. ಇಲ್ಲಿಗೆ ಅಧಿಕಾರಿಗಳು ಬಂದು ತನಿಖೆ ನಡೆಸಿ ಹೋಗಿದ್ದರು.

ADVERTISEMENT

2008ರ ಮುಂಬೈ ದಾಳಿ ವೇಳೆ ಭಯೋತ್ಪಾದಕರು ‘ತುರಾಯಾ’ ಸ್ಯಾಟ್‌ಲೈಟ್ ಫೋನ್ ಬಳಸಿದ್ದರು. ಈ ದಾಳಿ ನಂತರ ದೇಶದಲ್ಲಿ ‘ತುರಾಯಾ’ ಸ್ಯಾಟ್‌ಲೈಟ್ ಫೋನ್‌ಗಳನ್ನು ನಿಷೇಧ ಮಾಡಲಾಗಿದೆ. ಇದೀಗ ಮತ್ತೆ ಈ ಫೋನ್‌ಗಳು ಸಕ್ರಿಯವಾಗಿರುವ ಕುರಿತು ಆಂತರಿಕ ಭದ್ರತಾ ದಳ ತನಿಖೆ ಮುಂದುವರಿಸಿದೆ ಎಂದು ಖಚಿತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಆದರೆ, ನಕ್ಸಲ್‌ ನಿಗ್ರಹ ಪಡೆಯ ಅಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಈ ವರದಿಯನ್ನು ನಿರಾಕರಿಸಿದ್ದು, ಅಂತಹ ಯಾವುದೇ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.