ಮಂಗಳೂರು: ಪರಿಶಿಷ್ಟರಿಗೆ ಮೀಸಲಿಟ್ಟ ಭೂಮಿ ಅತಿಕ್ರಮಣ, ಸರ್ಕಾರಿ ಜಾಗ ಕಬಳಿಕೆಗೆ ಯತ್ನ, ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನಿಡದೆ ಅಲದಾಡಿಸಿರುವುದು, ಸಾರಾಯಿ ಅಂಗಡಿಯಲ್ಲಿ ಬೆಳಿಗ್ಗೆ ಅವಧಿಗೂ ಮೊದಲು ಮತ್ತು ರಾತ್ರಿ ಅವಧಿ ಮೀರಿಯೂ ವ್ಯವಹಾರ ಮಾಡುತ್ತಿರುವುದು ಮುಂತಾದ ವಿಷಯಗಳು ಬುಧವಾರ ನಡೆದ ತಾಲ್ಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆಯಲ್ಲಿ ಚರ್ಚೆಗೆ ಒಳಗಾದವು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಳಮೀಸಲಾತಿಯ ವಿರುದ್ಧದ ಧ್ವನಿಯೂ ಕೇಳಿಬಂದಿತು.
ಮುಖಂಡರಾದ ಶೀನ ಮತ್ತು ಅಸೋಕ್ ಕೊಂಚಾಡಿ ಒಳಮೀಸಲಾತಿಗೆ ವಿರೋಧ ವ್ಯಕ್ತಪಿಸಿದರು. ‘ಗೊಂದಲ ಇದೆ ಎಂಬ ಕಾರಣದಿಂದ ಹಿಂದಿನ ಅನೇಕ ಮುಖ್ಯಮಂತ್ರಿಗಳು ಒಳಮೀಸಲಾತಿ ವಿಷಯದಲ್ಲಿ ನಿರ್ಲಿಪ್ತರಾಗಿದ್ದರು. ಈಗ ಸರ್ಕಾರ ಒಳಮಿಸಲಾತಿ ಜಾರಿಗೆ ಮುಂದಾಗಿದೆ. ಇದು ಸಂಸತ್ತಿಗೆ ಮಾತ್ರ ಇರುವ ಅಧಿಕಾರ. ಆದರೂ ರಾಜ್ಯಸರ್ಕಾರ ಇದರ ಪ್ರಸ್ತಾಪ ಮುಂದಿಟ್ಟು ಪರಿಶಿಷ್ಟರ ಒಡಕಿಗೆ ಕಾರಣವಾಗಿದೆ’ ಎಂದು ಶೀನ ದೂರಿದರು.
‘ಒಳಮೀಸಲಾತಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ರೀತಿಯ ಹೋರಾಟ ನಡೆಸಲಾಗುವುದು. ಇಲ್ಲವಾದರೆ ಇಲ್ಲಿ ಪರಸ್ಪರ ಕಚ್ಚಾಟ ನಡೆಯಲಿದೆ. ಈ ಕಾರಣದಿಂದ ಕುಂದುಕೊರತೆ ಸಭೆಯ ನಡಾವಳಿಯಲ್ಲಿ ಈ ವಿಷಯವನ್ನು ಸೇರಿಸಬೇಕು’ ಎಂದು ಅವರು ಆಗ್ರಹಿಸಿದರು.
ಅಶೋಕ್ ಕೊಂಚಾಡಿ ಮಾತನಾಡಿ ‘ಒಳಮೀಸಲಾತಿಗೆ ಸಂಬಂಧಿಸಿದ ಮಾಹಿತಿಯಲ್ಲಿ ಆದಿದ್ರಾವಿಡ, ಆದಿ ಕರ್ನಾಟಕ ಮತ್ತು ಆದಿ ಆಂಧ್ರ ಪಂಗಡಗಳ ಕುರಿತು ಗೊಂದಲ ಇದೆ. ಸಂಘಟನೆಗಳು ಮತ್ತು ಮುಖಂಡರಿಗೆ ಮೊದಲೇ ತಿಳಿಸಿದ್ದರೆ ಈ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಮಾಡಬಹುದಾಗಿತ್ತು. ಮೊಗೇರ ಸಮುದಾಯಕ್ಕೆ ಸಂಬಂಧಿಸಿಯೂ ಗೊಂದಲ ಇದೆ. ಮೊಗೇರರ ಹೆಸರಿನಲ್ಲಿ 17 ಸಾವಿರ ಮೀನುಗಾರ ಮೊಗೇರರನ್ನು ಕುಡ ಪರಿಶಿಷ್ಟರ ಪಟ್ಟಿಗೆ ಸೇರಿಸುವ ಹುನ್ನಾರ ನಡೆದಿದೆ’ ಎಂದು ಆರೋಪಿಸಿದರು.
‘ಮೂಡುಬಿದಿರೆಯಲ್ಲಿ ಈಚೆಗೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಮೊದಲು ಮೂಡುಬಿದಿರೆಗೆ, ನಂತರ ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಜಾಗ ಇಲ್ಲ ಎಂದು ಹೇಳಿ ಹೊರಗೆ ನಿಲ್ಲಿಸಿದ ನಂತರ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿಂದ ಮೂಡುಬಿದಿರೆ ಮತ್ತು ಕಾರ್ಕಳಕ್ಕೆ ಕಳುಹಿಸಲಾಗಿದೆ. ಸೆ.2ರಂದು ವ್ಯಕ್ತಿ ಸಾವಿಗೀಡಾಗಿದ್ದಾರೆ. ಅವರ ಸಾವಿಗೆ ಯಾರು ಹೊಣೆ’ ಎಂದು ಪ್ರಶ್ನಿಸಿದ ಪ್ರೇಂ ಬಲ್ಲಾಲ್‌ಬಾಗ್ ‘ವೆನ್‌ಲಾಕ್‌ನಲ್ಲಿ ಐಸಿಯು ವಿಸ್ತರಿಸಬೇಕು. ಸೌಲಭ್ಯ ಇಲ್ಲ ಎಂದು ಹೇಳುವುದನ್ನು ನಿಲ್ಲಿಸಬೇಕು’ ಎಂದು ಕೋರಿದರು.
‘ದಲಿತರು ಉಳಿದುಕೊಳ್ಳಲು ಸಣ್ಣ ಮನೆ ಕಟ್ಟಿದರೆ ಸಾವಿರ ನಿಯಮಗಳು ಅಡ್ಡಿಬರುತ್ತವೆ. ಆದರೆ ದಲಿತರ ಭೂಮಿಯನ್ನು ಕಬಳಿಸಿದವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಡಿಸಿ ಮನ್ನಾ ಜಾಗವನ್ನು ಪರಿಶೀಲಿಸಲು ವಿಎಗಳಿಗೆ ಪುರುಸೊತ್ತೇ ಇರುವುದಿಲ್ಲ. ಇವೆಲ್ಲ ದಲಿತರಿಗೆ ಮತ್ತು ಆ ಮೂಲಕ ಅಂಬೇಡ್ಕರ್ ಅವರಿಗೆ ಮಾಡುತ್ತಿರುವ ಅನ್ಯಾಯ’ ಎಂದು ಮುಖಂಡರು ದೂರಿದರು.
‘ಕುಂದುಕೊರತೆ ಸಭೆ ಆಗಿ ಮೂರು ತಿಂಗಳು ಕಳೆದಿವೆ. ಮುಂದಿನ ಸಭೆ ಇನ್ಯಾವಾಗ ನಡೆಯುತ್ತದೆ ಎಂದು ತಿಳಿಯದು. ಅಷ್ಟರಲ್ಲಿ ಈ ಸಭೆಯಲ್ಲಿ ಚರ್ಚಿಸಿದ ವಿಷಯಗಳೆಲ್ಲ ಮರೆತುಹೋಗುತ್ತವೆ’ ಎಂಬ ಆರೋಪವೂ ಕೇಳಿಬಂತು.
ಉಪತಹಶೀಲ್ದಾರ್ ಆರ್. ಚೌಧರಿ ಮತ್ತು ಸಹಾಯಕ ಸಮಾಜ ಕಲ್ಯಾಣಾಧಿಕಾರಿ ಸುರೇಶ್ ಅಡಿಗ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.