ಕಡಬ (ಉಪ್ಪಿನಂಗಡಿ): ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ಅವರ ಬಾಳು ಬೆಳಗಿಸಿದ ಕಡಬ ತಾಲ್ಲೂಕಿನ 2 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಈ ವರ್ಷದ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಶೂನ್ಯ ದಾಖಲಾತಿಯಿಂದ ಬಾಗಿಲು ಮುಚ್ಚಿದೆ. ಶಿಕ್ಷಕರ ಕೊರತೆಯಿಂದಾಗಿ ಶಾಲೆಗೆ ಈ ಸ್ಥಿತಿ ಬಂದಿರುವ ಬಗ್ಗೆ ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕಡಬ ತಾಲ್ಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಬಿಳಿನೆಲೆ ಗ್ರಾಮದ ಚೇರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷ ಮಕ್ಕಳ ದಾಖಲಾತಿ ಕೊರತೆಯಿಂದ ಚಟುಟವಟಿಕೆ ಸ್ತಬ್ಧವಾಗಿದೆ.
ಸುವರ್ಣ ಮಹೋತ್ಸವ ಆಚರಿಸಿದ ಶಾಲೆ: ಸುಮಾರು 60 ವರ್ಷ ದಾಟಿದ, ವಜ್ರ ಮಹೋತ್ಸವದ ಹೊಸ್ತಿಲಲ್ಲಿದ್ದ ಮೀನಾಡಿ ಸರ್ಕಾರಿ ಶಾಲೆಗೆ ಈ ಶೈಕ್ಷಣಿಕ ವರ್ಷ ದಾಖಲಾತಿ ನಡೆದಿಲ್ಲ. ಕಳೆದ ವರ್ಷ ಇಲ್ಲಿ ನಾಲ್ವರು ವಿದ್ಯಾರ್ಥಿಗಳಿದ್ದರು. ಈ ಮಕ್ಕಳ ಮನೆಯ ಇಬ್ಬರು 5 ಮತ್ತು 6ನೇ ತರಗತಿಯಲ್ಲಿ ಬೇರೆ ಶಾಲೆಗೆ ಸೇರಿದ್ದರಿಂದ ಅವರೂ ಈ ಶಾಲೆ ಬಿಟ್ಟಿದ್ದಾರೆ.
ಕೆಲವು ವರ್ಷಗಳ ಹಿಂದೆ ಈ ಶಾಲೆಗೆ ರೈಲುಬೋಗಿಗಳ ಬಣ್ಣ ಬಳಿದು ಮಕ್ಕಳನ್ನು ಆಕರ್ಷಿಸುವಂತೆ ಮಾಡಿ ‘ಮೀನಾಡಿ ಎಕ್ಸ್‌ಪ್ರೆಸ್’ ಎಂದು ನಾಮಕರಣ ಮಾಡಲಾಗಿತ್ತು. ಶಾಲಾ ಶಿಕ್ಷಕರು, ಎಸ್‌ಡಿಎಂಸಿಯವರು ಮತ್ತು ಸ್ಥಳೀಯ ಶಿಕ್ಷಣ ಪ್ರೇಮಿಗಳು ಮಕ್ಕಳ ದಾಖಲಾತಿ ಹೆಚ್ಚಿಸಲು ಮಾಡಿದ ಪ್ರಯತ್ನ ಫಲ ನೀಡಿಲ್ಲ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರನ್ನೂ ಬೇರೆ ಶಾಲೆಗೆ ನಿಯೋಜಿಸಲಾಗಿದೆ.
ಬಿಳಿನೆಲೆ ಶಾಲೆ: ಚೇರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ 5ನೇ ತರಗತಿಯಲ್ಲಿ ಇಬ್ಬರು, 3 ಹಾಗೂ 4ನೇ ತರಗತಿಯಲ್ಲಿ ತಲಾ ಇಬ್ಬ ವಿದ್ಯಾರ್ಥಿಗಳಿದ್ದರು. 5ನೇ ತರಗತಿಯಲ್ಲಿದ್ದ ಇಬ್ಬರು 6ನೇ ತರಗತಿಗೆ ಬೇರೆ ಶಾಲೆಗೆ ತೆರಳಿದ್ದು, ಈ ವರ್ಷ ಹೊಸ ಸೇರ್ಪಡೆ ಆಗದೆ ಇದ್ದುದರಿಂದ ಆ ಮಕ್ಕಳ ಪೋಷಕರು ಅವರನ್ನು ಬೇರೆ ಶಾಲೆಗೆ ಸೇರಿಸಿದ್ದಾರೆ.
ಹಿರಿಯರು ಕಷ್ಟಪಟ್ಟು ಕಟ್ಟಿದ ಸರ್ಕಾರಿ ಶಾಲೆಗಳು ಇಂದು ವಿವಿಧ ಕಾರಣಗಳಿಂದ ಮುಚ್ಚುತ್ತಿರುವುದು ಬೇಸರದ ವಿಷಯ. ಈ ನಡುವೆ ಮುಚ್ಚಿರುವ ಶಾಲೆಗಳ ಆಸ್ತಿ, ಸ್ವತ್ತು ರಕ್ಷಿಸಲು ಇಲಾಖೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಿಕ್ಷಕರ ಕೊರತೆಯಿಂದಾಗಿ ಮುಚ್ಚುವಂತಾಯಿತು: ಕೆಲ ವರ್ಷಗಳಿಂದ ಇಲ್ಲಿ ಖಾಯಂ ಶಿಕ್ಷಕರೇ ಇಲ್ಲ, ಒಬ್ಬರನ್ನು ಬೇರೆ ಶಾಲೆಯಿಂದ ನಿಯೋಜನೆ ಮಾಡಲಾಗಿತ್ತು. ಅವರು ಶಿಕ್ಷಣ ಸಂಯೋಜಕರಾಗಿದ್ದರು. ಅವರು ಅದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಕಲಿಕಾ ವ್ಯವಸ್ಥೆಯೇ ಸರಿ ಇರಲಿಲ್ಲ, ಖಾಸಗಿ ಶಾಲೆಗಳ ಅಬ್ಬರವೂ ಅಧಿಕವಾಗಿತ್ತು. ಕಳೆದ ಹಲವಾರು ವರ್ಷಗಳಿಂದ ಶಾಲಾಭಿವೃದ್ಧಿ ಸಮಿತಿ ಸದಸ್ಯನಾಗಿ, ದಾನಿಗಳ ಸಹಕಾರ ಪಡೆದು ಶಾಲೆಗೆ ಆವರಣ ಗೋಡೆ, ಕುಡಿಯುವ ನೀರಿನ ವ್ಯವಸ್ಥೆ, ಟೈಲ್ಸ್ ಅಳವಡಿಕೆ, ಆಕರ್ಷಕ ಬಣ್ಣ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿ ಶಾಲೆಯನ್ನು ಉಳಿಸಲು ಬಹಳ ಪ್ರಯತ್ನಿಸಿದೆವು. ಆದರೆ, ಅದು ಫಲ ಕೊಡಲಿಲ್ಲ, ಮುಂದೆ ಶಿಕ್ಷಕರ ವ್ಯವಸ್ಥೆ ಮಾಡಿದರೆ ಮೊದಲಿನಂತೆ ಶಾಲೆಯನ್ನು ಮುನ್ನಡೆಸಬಹುದು ಎಂದು ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಜೆ. ಥಾಮಸ್ ಹೇಳಿದರು.
ತಾತ್ಕಾಲಿಕವಾಗಿ ಮುಚ್ಚಲಾಗಿದೆ: ಕಡಬ ತಾಲ್ಲೂಕಿನ ಮೀನಾಡಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಚೇರು ಕಿರಿಯ ಪ್ರಾಥಮಿಕ ಶಾಲೆ ಈ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ಕೊರತೆ, ಮಕ್ಕಳ ದಾಖಲಾತಿ ಆಗದ ಕಾರಣ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮುಂದೆ ಶಿಕ್ಷಕರನ್ನು ವ್ಯವಸ್ಥೆ ಮಾಡಿ ಶಾಲೆಯನ್ನು ತೆರೆಯಲಾಗುವುದು ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.