ADVERTISEMENT

ಉಪ್ಪಿನಂಗಡಿ ಲಾಠಿ ಚಾರ್ಜ್: ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 15:47 IST
Last Updated 15 ಡಿಸೆಂಬರ್ 2021, 15:47 IST
ಪಾಪ್ಯುಲರ್ ಫ್ರಂಟ್ ನಾಯಕರ ಬಂಧನ ಖಂಡಿಸಿ ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಉಪ್ಪಿನಂಗಡಿ ಪೊಲೀಸರ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪಾಪ್ಯುಲರ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ಬುಧವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಪ್ರತಿಭಟನೆ ನಡೆಸಿತು.
ಪಾಪ್ಯುಲರ್ ಫ್ರಂಟ್ ನಾಯಕರ ಬಂಧನ ಖಂಡಿಸಿ ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಉಪ್ಪಿನಂಗಡಿ ಪೊಲೀಸರ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪಾಪ್ಯುಲರ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ಬುಧವಾರ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಪ್ರತಿಭಟನೆ ನಡೆಸಿತು.   

ಮಂಗಳೂರು: ತಾಲ್ಲೂಕಿನ ಉಪ್ಪಿನಂಗಡಿಯಲ್ಲಿ ಮಂಗಳವಾರ ರಾತ್ರಿ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗ ವ್ಯಾಪ್ತಿಯ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಬುಧವಾರದಿಂದ ಡಿ.17ರ ಮಧ್ಯರಾತ್ರಿ 12 ಗಂಟೆಯವರೆಗೆಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಉಪ ವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಆದೇಶ ಹೊರಡಿಸಿದ್ದಾರೆ.

ಉಪ್ಪಿನಂಗಡಿ ಹಳೆಗೇಟ್ ಬಳಿ ಹಿಂದೂ ಕಾರ್ಯಕರ್ತನ ಮೇಲೆ ನಡೆದ ತಲ್ವಾರ್ ದಾಳಿಗೆ ಸಂಬಂಧಿಸಿ ಪೊಲೀಸರು ವಶಕ್ಕೆ ಪಡೆದಿದ್ದ ಮೂವರು ಪಿಎಫ್ಐ (ಪಾಪ್ಯುಲರ್‌ ಫ್ರಂಟ್ ಆಫ್ ಇಂಡಿಯಾ) ಮುಖಂಡರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ, ಕಾರ್ಯಕರ್ತರು ಮಂಗಳವಾರ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು. ‘ರಾತ್ರಿ ವೇಳೆ ಮತ್ತೆ ಠಾಣೆಯ ಎದುರು ಸೇರಿದ್ದ ಪ್ರತಿಭಟನಕಾರರು ಠಾಣೆಗೆ ನುಗ್ಗಲು ಯತ್ನಿಸಿದ್ದರು. ಆ ವೇಳೆ ಅವರನ್ನು ತಡೆಯಲು ಮುಂದಾದ ಪೊಲೀಸರ ಮೇಲೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಇನ್‌ಸ್ಪೆಕ್ಟರ್ ಉಮೇಶ್, ಎಸ್‌ಐಗಳಾದ ಪ್ರಸನ್ನ, ವಾಮನ ಕುಟ್ಟಿ ಹಾಗೂ ನಾಲ್ವರು ಸಿಬ್ಬಂದಿಗೆ ಗಾಯಗಳಾಗಿವೆ’ ಎಂದು ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.

‘ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾಗ, ಪೊಲೀಸರು ಏಕಾಏಕಿ ನಡೆಸಿದ ಲಾಠಿ ಚಾರ್ಜ್‌ನಿಂದ 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ’ ಎಂದು ಪಿಎಫ್‌ಐ ರಾಜ್ಯ ಘಟಕದ ಕಾರ್ಯದರ್ಶಿ ಎ.ಕೆ. ಅಶ್ರಫ್ ಆರೋಪಿಸಿದ್ದಾರೆ.

ADVERTISEMENT

ಪಿಎಫ್‌ಐನ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಅಬ್ದುಲ್‌ ಹಮೀದ್‌ ಮೆಜೆಸ್ಟಿಕ್‌, ಎಸ್‌ಡಿಪಿಐ ನೆಕ್ಕಿಲಾಡಿ ಗ್ರಾಮ ಸಮಿತಿ ಅಧ್ಯಕ್ಷ ಝಕಾರಿಯಾ ಕೊಡಿಪ್ಪಾಡಿ ಹಾಗೂ ಉಪ್ಪಿನಂಗಡಿ ಬ್ಲಾಕ್‌ ಸಮಿತಿ ಅಧ್ಯಕ್ಷ ಮುಸ್ತಾಫ ಲತೀಫಿ ಅವರನ್ನು ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆಂದು ಪೊಲೀಸರು ವಶಕ್ಕೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.