ADVERTISEMENT

ದ.ಕ: ಹತ್ಯೆ ಪ್ರಕರಣಗಳ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪಿಸಿ –ಯು.ಟಿ.ಖಾದರ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 11:26 IST
Last Updated 1 ಆಗಸ್ಟ್ 2022, 11:26 IST
ಯು.ಟಿ.ಖಾದರ್
ಯು.ಟಿ.ಖಾದರ್   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೂರು ಹತ್ಯೆ ಪ್ರಕರಣಗಳಲ್ಲಿ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಲು ತ್ವರಿತಗತಿ ನ್ಯಾಯಾಲಯವನ್ನು ಸ್ಥಾಪಿಸಬೇಕು' ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಒತ್ತಾಯಿಸಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಈ ಹತ್ಯೆ ಪ್ರಕರಣಗಳಿಂದಾಗಿ ಕರುಳಕುಡಿಗಳನ್ನು ಕಳೆದುಕೊಂಡ ತಾಯಂದಿರ ನೋವು ಆರುವ ಮುನ್ನವೇ ಅವರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ತ್ವರಿತಗತಿ ನ್ಯಾಯಾಲಯ ಸ್ಥಾಪಿಸಿ ಆರು ತಿಂಗಳ ಒಳಗೆ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು' ಎಂದರು.

'ಪ್ರವೀಣ್ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ ಐಎ) ವಹಿಸುವುದಾಗಿ ಸರ್ಕಾರ ಹೇಳಿದೆ. ಇದರಿಂದ ಮೃತರ ಕುಟುಂಬಕ್ಕೆ ನಿಜಕ್ಕೂ ನ್ಯಾಯ ಸಿಗುತ್ತದೆಯೇ. ಈಗಾಗಲೇ ರಾಜ್ಯದಲ್ಲಿ ಎನ್ ಐಎ ಗೆ ವಹಿಸಿರುವ ಐದಕ್ಕೂ ಅಧಿಕ ಪ್ರಕರಣಗಳ ತನಿಖೆ ಎಲ್ಲಿವರೆಗೆ ಬಂದಿದೆ ಎಂಬುವುದನ್ನು ಸರ್ಕಾರ ಮೊದಲು ಬಹಿರಂಗಪಡಿಸಲಿ. ತನಿಖೆಯನ್ನು ಎನ್ ಐ ಎಗೆ ವಹಿಸುವುದಾದರೆ ಮೂರು ಪ್ರಕರಣಗಳನ್ನೂ ವಹಿಸಲಿ. ಅದಕ್ಕೂ ಮೊದಲು ಈ ಪ್ರಕರಣಗಳು ಎನ್ಐಎ ತನಿಖೆಯ ವ್ಯಾಪ್ತಿಗೆ ಬರುತ್ತವೆಯೇ ಎಂಬುದನ್ನು ಸ್ಪಷ್ಟಪಡಿಸಲಿ' ಎಂದರು.

ADVERTISEMENT

'ಪ್ರವೀಣ್ ಕೊಲೆ ಪ್ರಕರಣದ ಆರೋಪಿಗಳ ಪತ್ತೆಗೆ ಮುನ್ನವೇ ರಾಜ್ಯದ ಸಚಿವರೊಬ್ಬರು ಹಂತಕರ ಎನ್ಕೌಂಟರ್ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಇದು ಸಚಿವರ ಹೇಳಿಕೆಯಾಗಿದ್ದರಿಂದ ಇದನ್ನು ಸರ್ಕಾರದ ಹೇಳಿಕೆ ಎಂದೇ ಪರಿಗಣಿಸಬೇಕಾಗುತ್ತದೆ. ಎನ್ ಕೌಂಟರ್ ಗಳನ್ನು ಮಾಡುವುದಲ್ಲ. ಅವು ಆಕಸ್ಮಿಕವಾಗಿ ಸಂಭವಿಸುವಂತಹದ್ದು. ಇವರು ಎನ್ ಕೌಂಟರ್ ಮಾಡುವುದೇ ಆದರೆ, ತಡೆದದ್ದು ಯಾರು. ಜನರ ಕಣ್ಣೊರೆಸುವುದಕ್ಕೆ ಸುಮ್ಮನೆ ಇಂತಹ ಹೇಳಿಕೆ ನೀಡಬಾರದು. ಜನ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದರು.

' ಕೋಮುಹಿಂಸೆಗೆ ಜನರ ಜೀವಗಳು ಬಲಿ ಆಗುವುದನ್ನು ತಡೆಯುವ ಬಗ್ಗೆ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ ಕೋಮುಹಿಂಸೆ ತಡೆ ಮಸೂದೆಯನ್ನು ರೂಪಿಸಿ ಜಾರಿಗೆ ತರಲಿ. ಗಲಭೆಕೋರರ ಮನೆ ಮೇಲೆ ಬೊಲ್ಡೋಜರ್ ಹಾಯಿಸುತ್ತೇವೆ, ಅವರ ಆಸ್ತಿ ಮುಟ್ಟುಗೋಲು ಹಾಕುತ್ತೇವೆ ಎಂಬುದನ್ನು ಬಾಯಿಚಪಲಕ್ಕೆ ಹೇಳುವ ಬದಲು, ಕೋಮುಹಿಂಸೆ ತಡೆ ಮಸೂದೆಯಲ್ಲೇ ಇಂತಹ ಕಠಿಣ ಕ್ರಮಗಳನ್ನು ಅಳವಡಿಸಲಿ. ಆಗ ಅಧಿಕಾರಿಗಳೂ ಅದನ್ನು ಅನುಷ್ಠಾನಕ್ಕೆ ತರಲು ಸುಲಭವಾಗುತ್ತದೆ' ಎಂದು ಸಲಹೆ ನೀಡಿದರು.

'ಜಿಲ್ಲೆಯಲ್ಲಿ ಹತ್ಯೆಗಳಿಂದ ತೊಂದರೆಗೆ ಒಳಗಾದ ಕುಟುಂಬಗಳಿಗೆ ಜನರ ತೆರಿಗೆ ದುಡ್ಡನ್ನು ಬಳಸಿ ಪರಿಹಾರ ನೀಡುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾರತಮ್ಯ ಮಾಡಿದ್ದಾರೆ. ಬೆಳ್ಳಾರೆಯ ಪ್ರವೀಣ್ ಮನೆಗೆ ಭೇಟಿ ನೀಡಿದ ಅವರು ಉಳಿದ ಎರಡು ಕುಟುಂಬಗಳ ಮನೆಗೆ ಭೇಟಿ ನೀಡಿಲ್ಲ. ಈ ತಾರತಮ್ಯವನ್ನು ಕಾಂಗ್ರೆಸ್ ಖಂಡಿಸುತ್ತದೆ. ಇದರ ವಿರುದ್ಧ ಕಾಂಗ್ರೆಸ್ ಕಾನೂನು ಹೋರಾಟವನ್ನೂ ನಡೆಸಲಿದೆ' ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.